ದಾವಣಗೆರೆ: ಉಕ್ರೇನ್–ರಷ್ಯಾದ ನಡುವಿನ ಯುದ್ಧದ ಸಂದರ್ಭದಲ್ಲಿ ಸಾವಿಗೀಡಾದ ಹಾವೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ ಅವರ ಮೃತದೇಹವನ್ನು ಪತ್ತೆ ಹಚ್ಚಿ ಭಾರತಕ್ಕೆ ತರುವಂತೆ ಮಾಡುವಲ್ಲಿ ಸಿರಿಗೆರೆಯ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ಬಗ್ಗೆ ಸ್ವತಃ ಸ್ವಾಮೀಜಿ ಅವರೇಪ್ರೊ.ಎಸ್.ಬಿ.ರಂಗನಾಥ್‍ರ ‘ಸಹಸ್ರ ಚಂದ್ರದರ್ಶನ’ ಅಭಿನಂದನೆ ಮತ್ತು ‘ರಂಗ ವಿಸ್ತಾರ ಅಭಿನಂದನಾ ಗ್ರಂಥ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡರು.
‘ಮಗನನ್ನು ಜೀವಂತವಾಗಿ ಕರೆತರಲು ಆಗಿಲ್ಲ. ಕನಿಷ್ಠ ಮುಖವನ್ನಾದರೂ ನೋಡಲು ಅವಕಾಶ ಮಾಡಿಕೊಡಬೇಕು ಎಂದು ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ ನನ್ನ ಬಳಿ ಮನವಿ ಮಾಡಿದ್ದರು. ಮೃತದೇಹ ಹಾರ್ಕೀವ್‌ನಲ್ಲಿ ಇದೆಯೇ ಅಥವಾ ಇಲ್ಲವೇ ಎಂಬುದೂ ಗೊತ್ತಿರಲಿಲ್ಲ’ ಎಂದು ಸ್ವಾಮೀಜಿ ತಿಳಿಸಿದರು.
‘ಉಕ್ರೇನ್‌ನಲ್ಲಿ ಸಿಲುಕಿದ್ದಾಗನಿಂದಲೂ ಸಂಪರ್ಕದಲ್ಲಿದ್ದ ವಿದ್ಯಾರ್ಥಿ ಕುಶಾಲ್ ಸಂಕಣ್ಣವರ್ ಭಾರತಕ್ಕೆ ಬಂದ ಬಳಿಕ ನನ್ನನ್ನು ಭೇಟಿ ಮಾಡಿದಾಗ ನವೀನ್ ಬಗ್ಗೆ ವಿಚಾರಿಸಿಕೊಂಡಿದ್ದೆ. ಅವನು ಅಲ್ಲಿನ ಆಸ್ಪತ್ರೆಯ ವಿಳಾಸ ನೀಡಿದ. ಆ ವಿಳಾಸವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಅವರ ಅಳಿಯನಾದ, ಗಯಾನದ ರಾಯಭಾರಿ ಶ್ರೀನಿವಾಸ್ ಮೂಲಕ ಉಕ್ರೇನ್‌ನಲ್ಲಿದ್ದ ಭಾರತೀಯ ರಾಯಭಾರ ಕಚೇರಿಗೆ ತಲುಪಿಸಿದೆ. ಅವರು ಹುಡುಕಿದಾಗ ಮೃತದೇಹ ಇನ್ನೂ ಆಸ್ಪತ್ರೆಯಲ್ಲಿ ಇರುವುದು ಪತ್ತೆಯಾಯಿತು. ಈಗ ದೇಹವನ್ನು ಭಾರತಕ್ಕೆ ಕರೆತರಲಾಗುತ್ತಿದೆ. ನವೀನ್‌ನ ತಂದೆಯ ವಿಶಾಲ ಮನಸ್ಸಿನ ಆಶಯದಂತೆ ದೇಹವನ್ನು ದಾವಣಗೆರೆಯ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ಕಾಪಾಡಿದ ರಾಷ್ಟ್ರಧ್ವಜ: ‘ವಿದ್ಯಾರ್ಥಿ ಕುಶಾಲ್ ಸಂಕಣ್ಣವರ್ ಚಾಟಿಂಗ್ ಮೂಲಕ ನೀಡುತ್ತಿದ್ದ ಮಾಹಿತಿಯನ್ನು ಗಯಾನದ ರಾಯಭಾರಿ ಶ್ರೀನಿವಾಸ್ ಅವರಿಗೆ ನೀಡುತ್ತಿದ್ದೆ. ಅವರು ಉಕ್ರೇನ್‌ನ ರಾಯಭಾರ ಕಚೇರಿಗೆ ರವಾನಿಸುತ್ತಿದ್ದರು. ಭಾರತದ ಬಾವುಟವನ್ನು ಹಿಡಿದುಕೊಂಡು ಬರುವವರ ಮೇಲೆ ಉಕ್ರೇನ್ ಹಾಗೂ ರಷ್ಯಾ ದಾಳಿ ಮಾಡಬಾರದು ಎಂದು ಭಾರತದ ರಾಯಭಾರ ಕಚೇರಿಯು ಉಕ್ರೇನ್ ಮತ್ತು ರಷ್ಯಾದ ಜತೆಗೆ ಒಪ್ಪಂದ ಮಾಡಿಕೊಂಡಿತು. ಅದರಂತೆ ಹಾರ್ಕೀವ್‌ನಿಂದ ಪಿಸೋಚಿನ್‌ಗೆ ವಿದ್ಯಾರ್ಥಿಗಳು ಬಂದಿದ್ದರು. ಪಿಸೋಚಿನ್‌ನಿಂದ ರೊಮೆನಿಯಾ ಗಡಿಗೆ ಬರಲು ಸಾಧ್ಯವಾಗಿತ್ತು. ಗಡಿಯಿಂದ ವಿಮಾನ ನಿಲ್ದಾಣಕ್ಕೆ ರಷ್ಯಾದವರೇ ಕರೆದುಕೊಂಡು ಹೋಗಿದ್ದರು. ಭಾರತದ ಬಾವುಟ ಹಿಡಿದ ಭಾರತೀಯ ವಿದ್ಯಾರ್ಥಿಗಳ ಜೊತೆಗೆ ಪಾಕಿಸ್ತಾನ, ಬಾಂಗ್ಲಾ, ನೇಪಾಳದ ವಿದ್ಯಾರ್ಥಿಗಳೂ ಸುರಕ್ಷಿತವಾಗಿ ಬಂದಿದ್ದರು. ಅದು ನಮ್ಮ ಬಾವುಟದ ಶಕ್ತಿ. ಅವರೆಲ್ಲ ನಮ್ಮ ಅಣ್ಣತಮ್ಮಂದಿರು’ ಎಂದು ಸ್ವಾಮೀಜಿ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.