ಸಿರಿಗೆರೆ: 'ತರಳಬಾಳು ಮಠದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶಿಕ್ಷಣದ ಜೊತೆಗೆ ಸಂಸ್ಕೃತಿ ನೆಲೆಗಟ್ಟಿನ ಸಾಂಸ್ಕೃತಿಕ ಶಿಕ್ಷಣವನ್ನೂ ನೀಡುತ್ತಿದ್ದಾರೆ. ಇಂತಹ ಶಿಕ್ಷಣವನ್ನು ರಾಜ್ಯದ ತುಂಬೆಲ್ಲಾ ನೀಡಬೇಕಿದೆ' ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸಿರಿಗೆರೆಯಲ್ಲಿ ಶಿವಕುಮಾರ ಶ್ರೀಗಳ ಎರಡನೆಯ ದಿನದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಿರಿಗೆರೆಯ ಮಕ್ಕಳು ನೀಡಿದ ಮಲ್ಲಕಂಬ ಪ್ರದರ್ಶನವನ್ನು ಶ್ಲಾಘಿಸಿದರು.
‘ಸಿರಿಗೆರೆ ಪೀಠವು ಬಸವಣ್ಣನ ಕ್ರಾಂತಿಯ ಬೀಜಗಳನ್ನು ಬಿತ್ತಿದ ಮಠ. ರಾಜ್ಯದ ಹಲವು ಭಾಗಗಳಲ್ಲಿ ಕೆರೆಗಳಿಗೆ ನೀರು ತುಂಬುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ತರಳಬಾಳು ಮಠವು ಬಸವಣ್ಣನ ಸಮಾಜಮುಖಿ ನಿಲುವುಗಳಿಗೆ ಬದ್ಧವಾಗಿದ್ದರಿಂದ ನಮ್ಮ ತಂದೆ ಬಂಗಾರಪ್ಪ ಅವರು ಮಠದೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು. ರಾಜ್ಯದಲ್ಲಿ ರೈತರ ಪರವಾಗಿ ಹಲವು ಕಾರ್ಯಕ್ರಮಗಳನ್ನು ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಜಾರಿಗೆ ತಂದಿದ್ದರು’ ಮಧು ಬಂಗಾರಪ್ಪ ತಿಳಿಸಿದರು.
ಶಿಕ್ಷಣ ಕೇತ್ರದಲ್ಲಿ ಸಾಧನೆ ಮಾಡಿರುವ ತರಳಬಾಳು ಶ್ರೀಗಳ ಬಳಿ ಚರ್ಚೆ ಮಾಡಿ, ಶಿಕ್ಷಣ ಇಲಾಖೆ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತೇನೆ ಎಂದರು.
ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ, ಜಗಳೂರು ಶಾಸಕ ದೇವೇಂದ್ರಪ್ಪ, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಹಾಗೂ ಎಚ್. ಆಂಜನೇಯ ಇದ್ದರು.
ದೇಶದ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನಗೊಂಡಿರುವ ಸಿರಿಗೆರೆ ಶಾಲಾ ಕಾಲೇಜು ಮಕ್ಕಳ ಮಲ್ಲಕಂಬ ಪ್ರಯೋಗ ಮತ್ತೊಮ್ಮೆ ನೋಡುಗರನ್ನು ರೋಮಾಂಚನಗೊಳಿಸಿತು. ಮೂರು ಮಲ್ಲಕಂಬಗಳ ಮೇಲೆ ವಿದ್ಯಾರ್ಥಿಗಳು ಲೀಲಾಜಾಲವಾಗಿ ಪ್ರದರ್ಶನ ನೀಡಿದರು. ವಿದ್ಯಾರ್ಥಿಗಳ ಈ ಪ್ರದರ್ಶನ ನೋಡುಗರಲ್ಲಿ ವಿಸ್ಮಯವನ್ನುಂಟು ಮಾಡಿತ್ತು. ಕಂಬಗಳ ಮೇಲೆ ಹಲವು ಆಸನ, ಪಟ್ಟುಗಳನ್ನು ಪ್ರದರ್ಶಿಸಿ ನೋಡುಗರ ಮೆಚ್ಚುಗೆ ಗಳಿಸಿದರು. ಈ ಮೈನವಿರೇಳಿಸುವ ತಂಡದಲ್ಲಿ ಬಾಲಕಿಯರೂ, ಪುಟ್ಟ ಮಕ್ಕಳೂ ಭಾಗಿಯಾಗಿದ್ದು ವಿಶೇಷವಾಗಿತ್ತು.
ನೈತಿಕ ಮತ್ತು ಆಧ್ಯಾತ್ಮಿಕ ಬಲದಿಂದ ದೇಶಕ್ಕೆ ಶಕ್ತಿ ಬರುತ್ತದೆಯೇ ಹೊರತು ದೇಶದಲ್ಲಿನ ಮಿಲಿಟರಿ ಮತ್ತು ಹಣದ ಶಕ್ತಿಯಿಂದಲ್ಲ ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ‘ಜಗತ್ತಿನಲ್ಲಿ ಅಮೆರಿಕ ದೊಡ್ಡಣ್ಣನಂತಿತ್ತು. ಈಗ ಇಡೀ ವಿಶ್ವವೇ ಭಾರತದ ಕಡೆ ನೋಡುತ್ತಿದ್ದು ಭಾರತವೇ ದೊಡ್ಡಣ್ಣನಾಗಿದೆ. ಇತ್ತೀಚೆಗೆ ಭಾರತದಲ್ಲಿ ನಡೆದ ಜಿ-20 ಶೃಂಗಸಭೆಯ ನಂತರ ದೇಶಕ್ಕೆ ವಿಶ್ವದಲ್ಲಿ ವಿಶೇಷ ಮನ್ನಣೆ ದೊರೆತಿದೆ. ವಿಜ್ಞಾನ ಕ್ಷೇತ್ರದಲ್ಲಿ ದೇಶ ಅಪೂರ್ವ ಸಾಧನೆ ಮಾಡಿದೆ. ಚಂದ್ರನ ಮೇಲೆ ರೋವರ್ ಇಳಿಸಿದ ಕೀರ್ತಿ ದೇಶದ ವಿಜ್ಞಾನಿಗಳಿಗೆ ಸಲುತ್ತದೆ. ಭಾರತಕ್ಕೂ ಮುಂಚಿತವಾಗಿಯೇ ಚಂದ್ರಯಾನ ಯೋಜನೆ ಪೂರೈಸಬೇಕೆಂದು ಹಠಕ್ಕೆ ಬಿದ್ದು ಅವಸರಪಟ್ಟ ರಷ್ಯಾ ಮುಗ್ಗರಿಸಿದೆ’ ಎಂದರು. ‘ರಾಜ್ಯದ ಶಿಕ್ಷಣ ಇಲಾಖೆಗೆ ಕಾಯಕಲ್ಪ ಆಗಬೇಕಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಅವುಗಳೆಲ್ಲವನ್ನು ಮುಕ್ತವಾಗಿ ಚರ್ಚಿಸಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮುಂದಾಗಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.
ಶಿವಕುಮಾರ ಶ್ರೀಗಳ ಮೊದಲ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ರಾಜಕಾರಣಿಗಳನ್ನು ಆಹ್ವಾನಿಸಿರಲಿಲ್ಲ. ಆಗ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪ ಅವರಿಗೆ ಹಿರಿಯ ಗುರುಗಳ ಮೇಲೆ ಅಪಾರ ಭಕ್ತಿ ಇತ್ತು. ಹೀಗಾಗಿ ಮಠದಿಂದ ಅಧಿಕೃತ ಆಹ್ವಾನ ಇಲ್ಲದೇ ಇದ್ದರೂ ಶ್ರದ್ಧಾಂಜಲಿಗೆ ಬಂದು ಭಾಗವಹಿಸಿದ್ದರು ಎಂದು ಶ್ರೀಗಳು ತಿಳಿಸಿದರು.
ಸಂಗೀತದ ಸಹಪಾಠಿ: ‘ಬಂಗಾರಪ್ಪ ಮತ್ತು ತಾವು ಸಂಗೀತ ಸಹಪಾಠಿಗಳು. 1960ರ ಸುಮಾರಿನಲ್ಲಿ ಶಿವಮೊಗ್ಗ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಖಾಸಗಿ ಶಿಕ್ಷಕರ ಬಳಿ ಸಂಗೀತ ಕಲಿಯುತ್ತಿದ್ದೆವು. ಸಂಗೀತದ ಬಗ್ಗೆ ಆಸಕ್ತಿ ಇದ್ದ ಬಂಗಾರಪ್ಪನವರೂ ಸಂಗೀತ ಕಲಿಯಲು ನಮ್ಮ ಗುರುಗಳ ಬಳಿಯೇ ಬರುತ್ತಿದ್ದರು. ಆವಾಗಿನಿಂದಲೂ ಬಂಗಾರಪ್ಪ ಮತ್ತು ನಾವು ಸಹಪಾಠಿಗಳಾಗಿದ್ದೆವು ಎಂದು ಶ್ರೀಗಳು ನೆನಪುಗಳನ್ನು ಅನಾವರಣ ಮಾಡಿದರು.
ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಮತ್ತು ನಿವೃತ್ತ ನೌಕರರ ಸಮಾವೇಶ ಮಧ್ಯಾಹ್ನ 3: ಚಂದ್ರಯಾನ-3 ಯೋಜನೆಯ ಇಸ್ರೊ ವಿಜ್ಞಾನಿಗಳೊಂದಿಗೆ ಸಂವಾದ ಸಂಜೆ 6: ಸಾನಿಧ್ಯ–ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ. ಮುಖ್ಯ ಅತಿಥಿ–ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅತಿಥಿಗಳು– ಶಾಸಕರಾದ ಲತಾ ಮಲ್ಲಿಕಾರ್ಜುನ್ ಪ್ರಕಾಶ್ ಕೋಳಿವಾಡ ಕೊಪ್ಪಳ ವಿ.ವಿ ಕುಲಪತಿ ಬಿ.ಕೆ. ರವಿ ದಾವಣಗೆರೆ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ವಿಶೇಷ ಆಹ್ವಾನಿತರು: ಇಸ್ರೋ ವಿಜ್ಞಾನಿಗಳಾದ ರಾಮನಗೌಡ ವಿ. ನಾಡಗೌಡ ಬಿ.ಎಂ.ಎಂ. ದಾರುಕೇಶ್ ಮತ್ತು ಗೋವಿಂದರಾಜ್ ಶೆಟ್ಟಿ ಕುಮುಟಾದ ಬ್ರಹ್ಮ ಲಿಂಗೇಶ್ವರ ಯಕ್ಷ ಮಿತ್ರ ಮಂಡಳಿಯಿಂದ ಯಕ್ಷಗಾನ ಪ್ರದರ್ಶನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.