ಭರಮಸಾಗರ: ಇಲ್ಲಿಯ ಬಿಚ್ಚುಗತ್ತಿ ಭರಮಣ್ಣ ನಾಯಕನ ದೊಡ್ಡಕೆರೆಯಲ್ಲಿ ಏತ ನೀರಾವರಿಯ ಮೂಲಕ ಹರಿಸಲಾಗುತ್ತಿರುವ ನೀರಿನ ಮನಮೋಹಕ ದೃಶ್ಯ ನೋಡಲು ಏಳನೇ ದಿನವಾದ ಮಂಗಳವಾರವೂ ತಂಡೋಪ ತಂಡವಾಗಿ ಜನರು ಬಂದಿದ್ದರು.
ಸಂತೆ ದಿನವಾದ್ದರಿಂದ ಸಂತೆಗೆ ಬಂದ ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು ಹರಿಯುತ್ತಿರುವ ಗಂಗೆಯನ್ನು ದೊಡ್ಡಕೆರೆಯ ಏರಿಯ ಮೇಲೆ ನಿಂತು ನೋಡುತ್ತಿದ್ದ ದೃಶ್ಯ ಕಂಡು ಬಂದಿತು. ರೈತ ಮಹಿಳೆಯರು ಸಾಂಪ್ರದಾಯಿಕ ಗಂಗೆ ಪೂಜೆ ನೆರವೇರಿಸಿ ಜಾನಪದ ಹಾಡುಗಳನ್ನು ಹಾಡಿದರು.
‘ಸುಮಾರು ಒಂದು ಸಾವಿರ ಎಕರೆ ವಿಸ್ತೀರ್ಣದ ದೊಡ್ಡಕೆರೆಯನ್ನು ಸಂಪೂರ್ಣ ತುಂಬಿಸಲು 23 ದಿನಗಳು ಸಾಕು ಎಂದು ಅಂದಾಜಿಸಲಾಗಿದೆ ಆದರೂ ಬಹಳ ವರ್ಷಗಳಿಂದ ಒಣಗಿದ್ದ ಕೆರೆ ಹೆಚ್ಚು ನೀರು ಕುಡಿಯುತ್ತಿದೆ. ಮರಳಿನ ಸೆಲೆ ಇರುವುದರಿಂದ ನೀರು ಇಂಗುವ ಪ್ರಮಾಣ ಹೆಚ್ಚಾಗಿದೆ. ಇಷ್ಟು ದಿನ ಹರಿಹರದ ಹಲಸಬಾಳು ಜಾಕ್‌ವೆಲ್‌ನಲ್ಲಿ ನಿತ್ಯವೂ 2 ಪಂಪ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು. ಸೋಮವಾರದಿಂದ 3 ಯಂತ್ರಗಳು ನಿರಂತರವಾಗಿ ನೀರು ಎತ್ತುವ ಕೆಲಸ ಮಾಡುತ್ತಿವೆ. ಇದರಿಂದ ಇಂದಿಗೆ ಒಟ್ಟು 6,500 ಕ್ಯುಸೆಕ್‌ಗಳಷ್ಟು ನೀರು ಕೆರೆ ಸೇರಿದೆ’ ಎಂದು ನೀರಾವರಿ ನಿಗಮದ ಎಂಜಿನಿಯರ್ ಮನೋಜ್ ಹೇಳಿದರು.
ಸೋಮವಾರ ಸಂಜೆಯ ವೇಳೆಗೆ ಹರಿಹರದ ಗುಟ್ಟೂರು ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ಹಾಗೂ ಸುರಿಯುತ್ತಿದ್ದ ಮಳೆಯಿಂದಾಗಿ ಪಂಪ್‌ಗಳು ಕೆಲಸ ನಿರ್ವಹಿಸದೇ ನೀರು ಎತ್ತುವ ಕೆಲಸ ಸ್ಥಗಿತಗೊಂಡಿತ್ತು. ಮಂಗಳವಾರ ಎಂದಿನಂತೆ ಪಂಪ್‌ಗಳು ಕೆಲಸ ನಿರ್ವಹಿಸಿ ಬೆ. 10ರ ವೇಳೆಗೆ ಭರಮಸಾಗರ ಕೆರೆಗೆ ನೀರು ಹರಿಯಲು ಆರಂಭಿತು.
ಗುರುವಾರ ಸಿರಿಗೆರೆ ಸ್ವಾಮೀಜಿ ಕೆರೆ ನೀರು ವೀಕ್ಷಿಸಲು ಆಗಮಿಸುವುದಾಗಿ ತಿಳಿಸಿರುವ ಮೇರೆಗೆ ಅವರನ್ನು ಸ್ವಾಗತಿಸಲು ಭಾರಿ ಸಿದ್ಧತೆ ನಡೆದಿದೆ. ಅಲ್ಲದೇ ಆ ದಿನ ಶಾಸಕರು, ಸಂಸದರು, ರಾಜಕೀಯ ಮುಖಂಡರು ಇರುತ್ತಾರೆ ಎಂದು ತಿಳಿದು ಬಂದಿದೆ. ಜಗಳೂರು ಏತನೀರಾವರಿ ಭಾಗದ ಕೃಷಿಕರು, ದಾವಣಗೆರೆ, ಚಿತ್ರದುರ್ಗದ ಭಕ್ತರು ಬರುವ ನಿರೀಕ್ಷೆ ಇದೆ ಎನ್ನಲಾಗಿದೆ. ಈ ವೇಳೆ ಶ್ರೀಗಳಿಂದ ಆಶೀರ್ವಚನ ಕೇಳಲು ಜನತೆ ಕಾತರರಾಗಿದ್ದಾರೆ. ಮುಂದೆ ಇನ್ನೂ 42 ಕೆರೆಗಳಿಗೆ ಹರಿಯ ಬೇಕಾಗಿರುವ ನೀರಿನ ಪೈಪ್‌ಲೈನ್ ಬಗ್ಗೆ ಏನಾದರೂ ಹೇಳಬಹುದು ಎಂದು ಜನತೆ ಆಸೆಗಣ್ಣಿನಿಂದ ಕಾಯುತ್ತಿದ್ದಾರೆ.
...
ಯಾವ ಸರ್ಕಾರ, ಶಾಸಕರು, ಮಂತ್ರಿಗಳು ಮಾಡದಿರುವ ಕೆಲಸವನ್ನು ಶ್ರೀಗಳು ಮಾಡಿದ್ದಾರೆ. ಅವರು ನಮ್ಮ ಪಾಲಿನ ದೇವರು ಎಂದು ಭಾವಿಸಿದ್ದೇವೆ. ಮುಂದಿನ ದಿನಗಳಲ್ಲಿ ಕೆರೆಗೆ ಬಾಗಿನ ಅರ್ಪಿಸುವ ಕೆಲಸವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗುವುದು
-ಎಚ್.ಎನ್. ತಿಪ್ಪೇಸ್ವಾಮಿ, ಮುಖಂಡರು, ಭರಮಸಾಗರ
...
ಈ ಕಾರ್ಯಕ್ಕೆ ಹಲವು ಜನರು ಶ್ರಮಿಸಿದ್ದಾರೆ. ಕೇವಲ ಒಂದೂವರೆ ವರ್ಷದಲ್ಲಿ ಹಗಲು–ರಾತ್ರಿ ಕಷ್ಟಪಟ್ಟು ನೀರು ತಂದಿದ್ದಾರೆ. ಶಾಶ್ವತವಾಗಿ ಉಳಿಯುವ ಕೆಲಸವಾಗಿದೆ. ನನ್ನ ಜೀವನದಲ್ಲಿ ಈ ದಿನಕ್ಕಾಗಿ ಕಾಯುತ್ತಿದ್ದೆ, ಅದು ಈಡೇರಿದೆ.
-ಚಂದ್ರಶೇಖರಪ್ಪ, ಬೆಸ್ಕಾಂ ನಿವೃತ್ತ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.