ಸಿರಿಗೆರೆ: ಇಲ್ಲಿನ ತರಳಬಾಳು ಬೃಹನ್ಮಠದಿಂದಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಫೆ.14ರಿಂದ 16ರವರೆಗೆ‘ತರಳಬಾಳು ಹುಣ್ಣಿಮೆ’ ಸರಳವಾಗಿ ನಡೆಯಲಿದೆ.
ಸರ್ವರ ಕಲ್ಯಾಣದ ಆಶಯವನ್ನು ಹೊತ್ತ, ಶರಣರ ತತ್ವ ವಿಚಾರಗಳ ಮಂಥನದ ಭಾವೈಕ್ಯದ ಮಹಾವೇದಿಕೆಯ ಈ ಕಾರ್ಯಕ್ರಮವು ಈ ಬಾರಿ ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ನಡೆಯಬೇಕಾಗಿತ್ತು. ಕೊರೊನಾ ಕಾರಣ ಎರಡನೆಯ ಬಾರಿ ಸರಳವಾಗಿ ಸಿರಿಗೆರೆಯಲ್ಲಿ ನಡೆಯಲಿದೆ.
ಫೆ.14ರಂದು ವಿಚಾರಗೋಷ್ಠಿ ನಡೆಯಲಿದೆ.ಬೆಳಿಗ್ಗೆ 11ಕ್ಕೆ ಗುರುಶಾಂತೇಶ್ವರ ದಾಸೋಹ ಮಂಟಪದ ವಿಚಾರಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ‘ಮಂಕುತಿಮ್ಮನ ಕಗ್ಗದಲ್ಲಿ ಜೀವನ ಮೌಲ್ಯಗಳು’ ವಿಚಾರವಾಗಿ ಶಿವಮೊಗ್ಗದ ಪ್ರವಚನಕಾರ ಜಿ.ಎಸ್.ನಟೇಶ್ ಹಾಗೂ ದಾವಣಗೆರೆಯ ಹಿರಿಯ ವ್ಯಂಗಚಿತ್ರಗಾರ ಎಚ್.ಬಿ.ಮಂಜುನಾಥ್ ‘ಜೀವನೋತ್ಸವಕ್ಕಾಗಿ ಹಾಸ್ಯ’ ಉಪನ್ಯಾಸ ನೀಡುವರು.ಸಂಜೆ 6:30ಕ್ಕೆ ಸಭಾ ಕಾರ್ಯಕ್ರಮ ಇದ್ದು,ಸಚಿವರಾದ ಕೆ.ಎಸ್.ಈಶ್ವರಪ್ಪ, ಬೈರತಿ ಬಸವರಾಜ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಹಾಗೂ ವಿಶೇಷ ಆಹ್ವಾನಿತರಾಗಿ ದಾವಣಗೆರೆ ಜಿಲಾಧಿಕಾರಿ ಮಹಾಂತೇಶ ಬೀಳಗಿ, ಚಿತ್ರದುರ್ಗದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಭಾಗವಹಿಸುವರು.
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಮತ್ತು ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಅವರನ್ನು ಸನ್ಮಾನಿಸಲಾಗುವುದು.ಬೇಲೂರು ನೃತ್ಯಾಂಜಲಿ ಕಲಾ ನಿಕೇತನ ಅವರಿಂದ ಭರತನಾಟ್ಯ, ಕುಮುಟದ ನಾಗರಾಜ್ ಮತ್ತು ತಂಡದಿಂದ ಯಕ್ಷಗಾನ, ಕಲಬುರ್ಗಿ ತಂಡದಿಂದ ಗೀತಗಾಯನ ನಡೆಯಲಿದೆ.
ತರಳಬಾಳು ಕಲಾ ಸಂಘದಿಂದ ಮಲ್ಲಕಂಬ, ಜಡೆಕೋಲಾಟ, ಲಂಬಾಣಿ ನೃತ್ಯ, ವಚನ ನೃತ್ಯ, ಜನಪದ ನೃತ್ಯ, ಒನಕೆ ಓಬವ್ವ, ಕೀಲುಕುದುರೆ ಗಾರುಡಿ ಗೊಂಬೆ ಹಾಗೂ ಡೊಳ್ಳು ಕುಣಿತ ಪ್ರದರ್ಶನ ನಡೆಯಲಿದೆ.
ಫೆ.15ರಂದುಬೆಳಿಗ್ಗೆ 11ಕ್ಕೆ ಧಾರವಾಡ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಎಂ.ಎಸ್. ಶಿವಪ್ರಸಾದ್ ಅವರಿಂದ ‘ವಿಜ್ಞಾನ ಕಲಿಕೆಯ ವಿಸ್ಮಯ’ ಮತ್ತು ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸದಸ್ಯ ಎಚ್.ಎಸ್.ಟಿ. ಸ್ವಾಮಿ ಅವರಿಂದ ‘ಖಗೋಳ ಕೌತುಕ’ ಹಾಗೂ ಧಾರವಾಡ ಸಂಪನ್ಮೂಲ ವ್ಯಕ್ತಿ ಮಹೇಶ್ ಮಾಸಾಳ್ ‘ವಿಜ್ಞಾನ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ’ ವಿಷಯದ ಉಪನ್ಯಾಸ ನೀಡುವರು.
ಸಂಜೆ 6:30ಕ್ಕೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಂದ ‘ಪಿಟೀಲು ವಾದನ’ ನಡೆಯಲಿದೆ. ಸಚಿವರಾದ ಬಿ.ಸಿ.ನಾಗೇಶ್, ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ. ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ, ಎಂ.ಚಂದ್ರಪ್ಪ, ಎಸ್.ವಿ.ರಾಮಚಂದ್ರಪ್ಪ, ಎನ್.ರವಿಕುಮಾರ್, ಅಮೃತ ದೇಸಾಯಿ, ಎಸ್.ರುದ್ರೇಗೌಡ ಭಾಗವಹಿಸುವರು.
ಅಂತರರಾಷ್ಟ್ರೀಯ ಕಲಾವಿದರಿಂದ ಭರತನಾಟ್ಯ, ಉತ್ತರ ಪ್ರದೇಶದ ವಿಷ್ಣುಪ್ರಿಯ ಗೋಸ್ವಾಮಿ ಬೃಂದಾವನ ಅವರಿಂದ ಒಡಿಶಿ ನೃತ್ಯ, ಹಾವೇರಿಯ ಗೊಟಗೋಡಿ ಕಲಾವಿದರಿಂದ ‘ವೀರ ಅಭಿಮನ್ಯುವಿನ ವಧೆ’ ದೊಡ್ಡಾಟ ಕಾರ್ಯಕ್ರಮ ಹಾಗೂ ತರಳಬಾಳು ಕಲಾಸಂಘದವರಿಂದ ಮಲ್ಲಿಹಗ್ಗ, ನಗಾರಿ, ಬೀಸು ಕಂಸಾಳೆ ಪ್ರದರ್ಶನ ನಡೆಯಲಿದೆ.
ಫೆ.16ರಂದುಬೆಳಿಗ್ಗೆ 11ಕ್ಕೆ ಮೈಸೂರಿನ ತರಬೇತುದಾರ ಡಾ.ಆರ್.ಎ.ಚೇತನ್ ರಾಮ್ ಅವರಿಂದ ‘ವ್ಯಕ್ತಿತ್ವ ವಿಕಸನ’ ಮತ್ತು ಶಿಕಾರಿಪುರ ಸಾಧನಾ ಅಕಾಡೆಮಿ ಸಂಸ್ಥಾಪಕ ಬಿ. ಮಂಜುನಾಥ್ ಅವರಿಂದ ‘ಪಿಯುಸಿ ನಂತರ ಮುಂದೇನು’ ಉಪನ್ಯಾಸ ನಡೆಯಲಿದೆ.ಸಂಜೆ 6:30ಕ್ಕೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಂದ ‘ಸದ್ಧರ್ಮ ಸಿಂಹಾಸನಾರೋಹಣ’ ನೆರವೇರಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸುವರು.
ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವರಾದ ಬಿ.ಸಿ. ಪಾಟೀಲ್, ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ ಭಾಗವಹಿಸುವರು.
ಬಳಿಕಬೆಂಗಳೂರಿನ ಸಂಯೋಜಕ ರಘುನಂದನ್ ಪ್ರಜ್ಞಾಪ್ರವಾಹ ‘ಆಧುನಿಕ ಶಿಕ್ಷಣದ ಜೊತೆಯಲ್ಲಿ ಧಾರ್ಮಿಕ ಶಿಕ್ಷಣದ ಅಗತ್ಯತೆ’ ಹಾಗೂ ‘ವಿಶ್ವಬಂಧು ಮರುಳಸಿದ್ಧನ ಪರಂಪರೆ’ ವಿಷಯದ ಉಪನ್ಯಾಸ ನೀಡುವರು.
ತರಳಬಾಳು ಕಲಾಸಂಘದಿಂದ ಮಲ್ಲಕಂಬ, ಮಲ್ಲಿಹಗ್ಗ ಹಾಗೂ ರೂಪಕ ‘ಶಿವಶರಣ ಹರಳಯ್ಯ’ ಪ್ರದರ್ಶನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.