ADVERTISEMENT

ಕಳ್ಳನ ಬಂಧನ; ₹ 69 ಲಕ್ಷ ಮೌಲ್ಯದ ಚಿನ್ನದ ಆಭರಣ ವಶ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 16:26 IST
Last Updated 24 ಜುಲೈ 2024, 16:26 IST
ಹಿರಿಯೂರು ನಗರ ಠಾಣೆ ಪೊಲೀಸರು ಅಂತರ್ ರಾಜ್ಯ ಕಳ್ಳನನ್ನು ಬಂಧಿಸಿ ವಶಪಡಿಸಿಕೊಂಡಿರುವ ಚಿನ್ನದ ಆಭರಣಗಳು.
ಹಿರಿಯೂರು ನಗರ ಠಾಣೆ ಪೊಲೀಸರು ಅಂತರ್ ರಾಜ್ಯ ಕಳ್ಳನನ್ನು ಬಂಧಿಸಿ ವಶಪಡಿಸಿಕೊಂಡಿರುವ ಚಿನ್ನದ ಆಭರಣಗಳು.   

ಹಿರಿಯೂರು: ಇಲ್ಲಿನ ನಗರ ಠಾಣೆ ಪೊಲೀಸರು ಅಂತರಜಿಲ್ಲಾ ಕಳ್ಳನೊಬ್ಬನನ್ನು ಬಂಧಿಸಿ, ₹ 69 ಲಕ್ಷ ಮೌಲ್ಯದ ಚಿನ್ನದ ಆಭರಣ, ₹ 68,000 ನಗದು ಹಾಗೂ ಕೃತ್ಯಕ್ಕೆ ಬಳಸಿದ ₹ 1.10 ಲಕ್ಷ ಮೌಲ್ಯದ 2 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಳ್ಳಾರಿ ನಗರದ ಕೊಳಗಾಲ್ ರಸ್ತೆ ನಿವಾಸಿ ಹನುಮಂತ ಬಂಧಿತ ಆರೋಪಿ.

ತಾಂತ್ರಿಕ ಮಾಹಿತಿ ಹಾಗೂ ಬಾತ್ಮೀದಾರರ ಸಹಾಯದಿಂದ ಬಳ್ಳಾರಿ ನಗರದ ಹನುಮಂತನನ್ನು ಜುಲೈ 19ರಂದು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹಿರಿಯೂರು ಹಾಗೂ ಇತರ ಕಡೆ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

ADVERTISEMENT

ಕಳೆದ ಏ. 24ರಂದು ರಾತ್ರಿ ಹಿರಿಯೂರಿನ ಚಳ್ಳಕೆರೆ ರಸ್ತೆಯಲ್ಲಿರುವ ಸುಜಾತಾ ಅವರ ಮನೆಯಲ್ಲಿ ₹ 6.32 ಲಕ್ಷ ಮೌಲ್ಯದ ಚಿನ್ನದ ಆಭರಣ ಮತ್ತು ₹ 1.75 ಲಕ್ಷ ನಗದು ಕಳವಾಗಿದ್ದ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

15 ಮನೆಗಳಲ್ಲಿ ಕಳವು: ಆರೋಪಿಯು ಹಿರಿಯೂರು ನಗರ ಠಾಣೆ ವ್ಯಾಪ್ತಿಯಲ್ಲಿ 8, ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 5, ಹೊಸದುರ್ಗ ಠಾಣೆ ವ್ಯಾಪ್ತಿಯಲ್ಲಿ 2, ಅಬ್ಬಿನಹೊಳೆ, ಚಿತ್ರದುರ್ಗ ಬಡಾವಣೆ ಠಾಣೆ ಹಾಗೂ ಬಳ್ಳಾರಿ ಕೌಲ್ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಅವುಗಳಲ್ಲಿ 15 ಮನೆಗಳವು, ಉಳಿದ ಮೂರು ಬೈಕ್‌ ಕಳವಿಗೆ ಸಂಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳನನ್ನು ಪತ್ತೆ ಮಾಡಲು ಜಿಲ್ಲಾ ಪೊಲೀಸ್ ಅಧೀಕ್ಷಕರು ಡಿವೈಎಸ್‌ಪಿ ಎಸ್.ಚೈತ್ರಾ ನೇತೃತ್ವದಲ್ಲಿ ನಗರ ಠಾಣೆ ಇನ್‌ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ ಹಾಗೂ ಹೊಸದುರ್ಗ ಠಾಣೆ ಎಸ್ಐ ಭೀಮನಗೌಡ ಪಾಟೀಲ್ ತಂಡವೊಂದನ್ನು ರಚಿಸಿದ್ದರು.

ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದ ಡಿವೈಎಸ್ಪಿ ಚೈತ್ರಾ, ನಗರ ಠಾಣೆ ಇನ್‌ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ, ಹೊಸದುರ್ಗ ಠಾಣೆ ಎಸ್ಐ ಭೀಮನಗೌಡ ಪಾಟೀಲ್ ಸಿಬ್ಬಂದಿ ದೇವೇಂದ್ರಪ್ಪ, ರುದ್ರಮುನಿಸ್ವಾಮಿ, ಸಿದ್ದಲಿಂಗೇಶ್ವರ, ತಿಪ್ಪೇಸ್ವಾಮಿ, ರಾಜಣ್ಣ, ಸುರೇಶ್ ನಾಯ್ಕ, ಜಾಫರ್ ಸಾದಿಕ್, ನಾಗಣ್ಣ, ಸುದರ್ಶನಗೌಡ ಹಾಗೂ ಬೆರಳಚ್ಚು ಘಟಕದ ಎಸ್ಐ ರಾಘವೇಂದ್ರ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದು, ಬಹುಮಾನ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.