ಚಿತ್ರದುರ್ಗ: ಇಲ್ಲಿನ ಕಾರಾಗೃಹ ರಸ್ತೆಯಲ್ಲಿನ ಪಾಳು ಮನೆಯಲ್ಲಿ ಈಚೆಗೆ ಅಸ್ಥಿಪಂಜರಗಳು ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲಿಸರು, ಕೆಲವು ಮಹತ್ವದ ಸಂಗತಿಗಳನ್ನು ಪತ್ತೆ ಮಾಡಿದ್ದಾರೆ.
ಮನೆಯಲ್ಲಿದ್ದ ಐವರು ಮೃತಪಟ್ಟ ನಂತರ ಶವಗಳ ದುರ್ವಾಸನೆ ಕೊಠಡಿಯಿಂದ ಹೊರಹೋಗದಂತೆ ಹವಾನಿಯಂತ್ರಿತ ವ್ಯವಸ್ಥೆ ತಡೆದಿತ್ತು ಎಂಬ ಸಂಗತಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ದುರಂತ ಸಂಭವಿಸಿದ ಆರಂಭದ ನಾಲ್ಕೂವರೆ ತಿಂಗಳು ಹವಾನಿಯಂತ್ರಿತ ವ್ಯವಸ್ಥೆ ಚಾಲನೆಯಲ್ಲಿತ್ತು ಎಂಬ ಸುಳಿವು ಮನೆಯ ವಿದ್ಯುತ್ ಬಿಲ್ ಮೂಲಕ ತಿಳಿದುಬಂದಿದೆ.
ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದ ನಿವೃತ್ತ ಎಂಜಿನಿಯರ್ ಎನ್.ಕೆ. ಜಗನ್ನಾಥ ರೆಡ್ಡಿ ಕುಟುಂಬ, ಮನೆಗೆ ಹವಾನಿಯಂತ್ರಿತ ವ್ಯವಸ್ಥೆ (ಎ.ಸಿ) ಅಳವಡಿಸಿಕೊಂಡಿತ್ತು. ಎರಡು ಹವಾನಿಯಂತ್ರಕ ಯಂತ್ರಗಳು ಇರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. 2019ರ ಮೇ ತಿಂಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಬಳಿಕವಷ್ಟೇ ಆ ಹವಾನಿಯಂತ್ರಕ ಯಂತ್ರಗಳು ಸ್ಥಗಿತಗೊಂಡಿರಬಹುದು ಎಂದು ಊಹಿಸಲಾಗಿದೆ.
ಮನೆಯಲ್ಲಿ ಎರಡು ವಿದ್ಯುತ್ ಮೀಟರ್‌ಗಳಿದ್ದು, ಒಂದನ್ನು ಗೃಹ ಬಳಕೆಗೆ ಹಾಗೂ ಮತ್ತೊಂದು ನೀರಿನ ಮೋಟಾರ್‌ಗೆ ಮೀಸಲಿಡಲಾಗಿತ್ತು. ಗೃಹ ಬಳಕೆಯ ವಿದ್ಯುತ್ ಬಿಲ್ ₹ 6,237 ಹಾಗೂ ನೀರಿನ ಮೋಟಾರ್ ₹ 2,850 ಬಾಕಿ ಉಳಿದಿರುವುದನ್ನು ‘ಬೆಸ್ಕಾಂ’ ದೃಢಪಡಿಸಿದೆ.
‘2019 ಜನವರಿಯ ಬಳಿಕ ವಿದ್ಯುತ್ ಬಿಲ್ ಪಾವತಿಯಾಗಿಲ್ಲ. ಬಿಲ್ ಬಾಕಿ ಇರುವುದನ್ನು ಗಮನಿಸಿ ನಾಲ್ಕು ತಿಂಗಳ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ವರ್ಷದ ಬಳಿಕವೂ ಬಾಕಿ ಪಾವತಿ ಆಗದಿರುವುದರಿಂದ 2020 ಏಪ್ರಿಲ್‌ನಲ್ಲಿ ಮನೆ ಖಾಲಿಯಿದೆ ಎಂಬ ಷರಾ ಬರೆದು ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು’ ಎಂದು ಬೆಸ್ಕಾಂ ಮೂಲಗಳು ಮಾಹಿತಿ ನೀಡಿವೆ.
ಮನೆಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ 2019ರ ಸೆಪ್ಟೆಂಬರ್‌ನಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಮನೆಗೆ ಹಾಕಿದ್ದ ಬೀಗ ಗಮನಿಸಿ ಮರಳಿದ್ದರು. ನಾಯಿ ಅಥವಾ ಸಾಕು ಪ್ರಾಣಿ ಸತ್ತಿರಬಹುದು ಎಂದು ನಿರ್ಲಕ್ಷ್ಯಿಸಲಾಗಿತ್ತು ಎಂಬುದನ್ನು ಸ್ಥಳೀಯರು ನೆನಪಿಸಿಕೊಂಡರು.
ಅಸ್ಥಿಪಂಜರಗಳು ಪತ್ತೆಯಾಗಿ 6 ದಿನ ಕಳೆದಿದ್ದು ಪೊಲೀಸರು ಹಾಗೂ ವಿಧಿ ವಿಜ್ಞಾನ ತಜ್ಞರ ತಂಡ ಸಾಕ್ಷ್ಯ ಸಂಗ್ರಹ ಕಾರ್ಯ ಮುಂದುವರಿಸಿದೆ. ಪಶುವೈದ್ಯಕೀಯ ತಂಡ ಮಂಗಳವಾರ ನಾಯಿಯ ಅಸ್ಥಿಪಂಜರವನ್ನು ಸಂಗ್ರಹಿಸಿತು. ಮನೆ ಮುಂಭಾಗದ ಗಿಡಗಳನ್ನು ಸ್ವಚ್ಛಗೊಳಿಸಲಾಗಿದ್ದು ಆವರಣವನ್ನು ಇಂಚಿಂಚೂ ಪರಿಶೀಲನೆ ನಡೆಸಲಾಯಿತು. ಮನೆಯಲ್ಲಿ ಹಲವು ವಸ್ತುಗಳು ಕಳುವಾಗಿರುವ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸಿದರು. ದ್ವಿಚಕ್ರ ವಾಹನದ ಟೈರ್ ನಾಪತ್ತೆಯಾಗಿದ್ದು ಕಳುವಾಗಿರುವ ಸಂಶಯಕ್ಕೆ ಪುಷ್ಟಿ ಕೊಟ್ಟಿದೆ. ಮದ್ಯದ ಬಾಟಲಿಗಳು ಕಾಂಪೌಂಡ್ ಆವರಣದಲ್ಲಿ ಸಿಕ್ಕಿವೆ.
ಮನೆಯ ಮುಂದಿನ ರಸ್ತೆ ಎರಡು ವರ್ಷಗಳ ಹಿಂದೆಯಷ್ಟೇ ವಿಸ್ತರಣೆಯಾಗಿದೆ. ರಸ್ತೆ ಹಾಗೂ ಮನೆಗೆ 20 ಅಡಿಗೂ ಹೆಚ್ಚು ಅಂತರವಿತ್ತು. ಈ ಜಾಗದಲ್ಲಿ ಕಳೆ ಗಿಡ ಬೆಳೆದು ಮನೆ ಸರಿಯಾಗಿ ಕಾಣಿಸುತ್ತಿರಲಿಲ್ಲ.–ದೊಡ್ಡ ರಂಗಯ್ಯ ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.