ADVERTISEMENT

ಮೊಳಕಾಲ್ಮುರು: ಧೂಳು ಹಿಡಿಯುತ್ತಿದೆ ಸ್ಮಾರ್ಟ್‌ಕ್ಲಾಸ್‌ ಸಾಮಗ್ರಿ

ಡಿಎಂಎಫ್ ಅನುದಾನದಲ್ಲಿ ಪೂರೈಕೆ: ಶಿಕ್ಷಕರು, ಅಧಿಕಾರಿಗಳಿಗಿಲ್ಲ ಮಾಹಿತಿ

ಕೊಂಡ್ಲಹಳ್ಳಿ ಜಯಪ್ರಕಾಶ
Published 19 ನವೆಂಬರ್ 2021, 2:14 IST
Last Updated 19 ನವೆಂಬರ್ 2021, 2:14 IST
ಮೊಳಕಾಲ್ಮುರು ತಾಲ್ಲೂಕಿನ ಚಿಕ್ಕೋಬನಹಳ್ಳಿ ಶಾಲೆಗೆ ಸರಬರಾಜಾಗಿರುವ ಸ್ಮಾರ್ಟ್‌ಕ್ಲಾಸ್ ಸಾಮಗ್ರಿ
ಮೊಳಕಾಲ್ಮುರು ತಾಲ್ಲೂಕಿನ ಚಿಕ್ಕೋಬನಹಳ್ಳಿ ಶಾಲೆಗೆ ಸರಬರಾಜಾಗಿರುವ ಸ್ಮಾರ್ಟ್‌ಕ್ಲಾಸ್ ಸಾಮಗ್ರಿ   

ಮೊಳಕಾಲ್ಮುರು:ತಾಲ್ಲೂಕಿನ ಹತ್ತಾರು ಸರ್ಕಾರಿ ಶಾಲೆಗಳಿಗೆ ಹಲವು ತಿಂಗಳುಗಳ ಹಿಂದೆ ಸ್ಮಾರ್ಟ್‌ಕ್ಲಾಸ್ ಸಾಮಗ್ರಿಗಳು ಪೂರೈಕೆಯಾಗಿವೆ. ಆದರೆ ಅವು ಧೂಳುಹಿಡಿಯುತ್ತಿವೆ. ಅಲ್ಲದೇ ಇದನ್ನು ಯಾವ ಇಲಾಖೆಯಿಂದ ಪೂರೈಸಲಾಗಿದೆ ಎಂಬ ಮಾಹಿತಿ ಶಿಕ್ಷಕರು, ಬಿಇಒಗೆ ಇಲ್ಲ.

ಕೋವಿಡ್ ಕಾರಣ ಲಾಕ್‌ಡೌನ್ ಅವಧಿಯಲ್ಲಿ ಸ್ಮಾರ್ಟ್‌ಕ್ಲಾಸ್ ಸಾಮಗ್ರಿಗಳು ಸರಬರಾಜಾಗಿವೆ ಆದರೆಬಹುತೇಕ ಶಾಲೆಗಳಿಗೆಇವುಗಳನ್ನು ಯಾರು ಸರಬರಾಜು ಮಾಡಿದ್ದಾರೆ. ಯಾವ ಅನುದಾನ, ಎಷ್ಟು ಹಣ, ಸರ್ಕಾರದ್ದೋ ಅಥವಾ ಖಾಸಗಿ ಅನುದಾನ ಎಂಬ ಬಗ್ಗೆ ಮಾಹಿತಿ ಇಲ್ಲ.ಸಾಮಗ್ರಿಗಳನ್ನು ಇಳಿಸಿ ಹೋದವರು ಮತ್ತೆ ಶಾಲೆ ಕಡೆ ಮುಖ ಮಾಡಿಲ್ಲ.

‘5 ತಿಂಗಳ ಹಿಂದೆ ಈಸಾಮಗ್ರಿಗಳನ್ನು ಶಾಲೆಗಳಿಗೆ ಪೂರೈಸಲಾಗಿದೆ. ನಂತರ ಬಂದು ಅವುಗಳನ್ನು ಜೋಡಣೆ ಮಾಡಿಲ್ಲ. ಶಿಕ್ಷಕರಿಗೆ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆನೀಡಿಲ್ಲ. ಇದರಿಂದಾಗಿ ಬಂದಿರುವ ಸಾಮಗ್ರಿಗಳು ಮೂಲೆಯಲ್ಲಿ ಧೂಳುಹಿಡಿಯುತ್ತಿದೆ. ಇದಕ್ಕೆ ಯಾರನ್ನು ಸಂಪರ್ಕ ಮಾಡಬೇಕು ಎಂದು ತಿಳಿಯುತ್ತಿಲ್ಲ.ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ನಮಗೂ ಮಾಹಿತಿ ಇಲ್ಲ. ತಿಳಿದುಕೊಂಡು ಸರಿಪಡಿಸುತ್ತೇವೆ ಎನ್ನುತ್ತಿದ್ದಾರೆ’ ಎಂದುಚಿಕ್ಕೋಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಒ. ಕರಿಬಸಪ್ಪ ತಿಳಿಸಿದರು.

ADVERTISEMENT

‘5-6 ತಿಂಗಳ ಹಿಂದೆ ಸಾಮಗ್ರಿಗಳು ಶಾಲೆಗಳಿಗೆ ಸರಬರಾಜಾಗಿವೆ. ನಮ್ಮಕಚೇರಿಗೂ ಪೂರೈಕೆ ಮಾಡಿರುವವರು ಮಾಹಿತಿ ನೀಡಿಲ್ಲ.ಈಚೆಗೆ ಈ ಕುರಿತು ಶಾಲೆಯವರು ಪ್ರಶ್ನೆಮಾಡಲು ಆರಂಭಿಸಿದ ನಂತರ ಇದರ ಬಗ್ಗೆ ಮಾಹಿತಿ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಯಿತು. ಪ್ರಥಮವಾಗಿ ಡಿಡಿಪಿಐ ಕಚೇರಿಯಲ್ಲೂ ಈ ಬಗ್ಗೆ ಮಾಹಿತಿಇಲ್ಲ ಎನ್ನುವುದು ಅಚ್ಚರಿಯಾಗಿದೆ’ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ಹೇಳಿದರು.

‘ಸಾಮಗ್ರಿಗಳ ಪೂರೈಕೆ ಬಗ್ಗೆ ಸಮಗ್ರವಾಗಿ ಮಾಹಿತಿ ಸಂಗ್ರಹಿಸಿದಾಗ ಜಿಲ್ಲಾ ಖನಿಜ ನಿಧಿ (ಡಿಎಂಎಫ್)ನಿಧಿಯ ಅನುದಾನದಲ್ಲಿ ಕಿಯೋನಿಕ್ಸ್ ಸಂಸ್ಥೆ ಸರಬರಾಜು ಮಾಡಿದೆ. 100 ವಿದ್ಯಾರ್ಥಿಗಳಿಗೂ ಹೆಚ್ಚು ದಾಖಲಾತಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಗಳಿಗೆ ಇವುಗಳನ್ನು ಪೂರೈಸಲಾಗಿದೆ. ತಾಲ್ಲೂಕಿನ 50 ಶಾಲೆಗಳಿಗೆ ಪೂರೈಸಲಾಗಿದೆ. ಈ ಬಗ್ಗೆ ಸಂಸ್ಥೆಯವರು ನೀಡಿದ್ದ ಮೊಬೈಲ್‌ ಸಂಖ್ಯೆ ಸಂಪರ್ಕಕ್ಕೆ ಸಿಗದ ಕಾರಣ ಗೊಂದಲವಾಗಿದ್ದು ನಿಜ. ಈಗ ಅವರನ್ನುಸಂಪರ್ಕಿಸಿದ್ದು ಈ ಕುರಿತು ಪತ್ರ ನೀಡಿದಲ್ಲಿ ಜೋಡಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ’ ಎಂದು ಸಮನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.