ADVERTISEMENT

‘ಪಕ್ಷಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ’

‘ಗುಬ್ಬಚ್ಚಿ ಪಕ್ಷಿ ಹಬ್ಬ’ ವಿಶೇಷ ಆಚರಣೆ; ಮನೆಗಳಿಗೆ ಮಣ್ಣಿನ ತಟ್ಟೆ ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 5:40 IST
Last Updated 21 ಮಾರ್ಚ್ 2022, 5:40 IST
ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಲ್ಲಿ ಭಾನುವಾರ ‘ಗುಬ್ಬಚ್ಚಿ ಪಕ್ಷಿ ಹಬ್ಬ’ ಆಚರಿಸಿದ ಗುಬ್ಬಚ್ಚಿ ಬರ್ಡ್ ಟ್ರಸ್ಟ್‌ ಹಾಗೂ ಪರಿವರ್ತನಾ ಫೌಂಡೇಶನ್ ಟ್ರಸ್ಟ್‌.
ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಲ್ಲಿ ಭಾನುವಾರ ‘ಗುಬ್ಬಚ್ಚಿ ಪಕ್ಷಿ ಹಬ್ಬ’ ಆಚರಿಸಿದ ಗುಬ್ಬಚ್ಚಿ ಬರ್ಡ್ ಟ್ರಸ್ಟ್‌ ಹಾಗೂ ಪರಿವರ್ತನಾ ಫೌಂಡೇಶನ್ ಟ್ರಸ್ಟ್‌.   

ಚಿತ್ರದುರ್ಗ: ವಿಶ್ವ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಚಿತ್ರದುರ್ಗ ಗುಬ್ಬಚ್ಚಿ ಬರ್ಡ್ ಟ್ರಸ್ಟ್‌ ಹಾಗೂ ಪರಿವರ್ತನಾ ಫೌಂಡೇಶನ್ ಟ್ರಸ್ಟ್‌ನಿಂದ ಭಾನುವಾರ ನಗರದಲ್ಲಿ ‘ಗುಬ್ಬಚ್ಚಿ ಪಕ್ಷಿ ಹಬ್ಬ’ವನ್ನು ವಿಶೇಷವಾಗಿ ಆಚರಿಸಲಾಯಿತು.

ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ‘ಮಣ್ಣಿನ ತಟ್ಟೆ’ಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಪಕ್ಷಿ ಪ್ರೇಮಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳು, ಸಾರ್ವಜನಿಕರು ‘ಪಕ್ಷಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ’, ‘ಮೂಕ ಜೀವಿಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ’ ಸೇರಿ ವಿವಿಧ ಜಾಗೃತಿ ಸಂದೇಶದ ಬಿತ್ತಿಪತ್ರಗಳನ್ನು ಹಿಡಿದು ಗಾಂಧಿವೃತ್ತದಿಂದ ಬಿಡಿ ರಸ್ತೆ ಮೂಲಕ ಒನಕೆ ಓಬವ್ವ ವೃತ್ತದವರೆಗೂ ಜಾಥಾ ನಡೆಸಿದರು.

ನಂತರ ವಾಯುವಿಹಾರಿಗಳಿಗೆ, ಸಾರ್ವಜನಿಕರಿಗೆ ಗುಬ್ಬಚ್ಚಿ ಸೇರಿ ಪಕ್ಷಿಗಳ ಮಹತ್ವವನ್ನು ತಿಳಿಸಿದರು. ಬೇಸಿಗೆ ಪ್ರಾರಂಭವಾಗುತ್ತಿದ್ದು, ಸಾಧ್ಯವಾದಷ್ಟು ನಿಮ್ಮ ಮನೆ ಅಂಗಳ, ತಾರಸಿ ಮೇಲೆ ನೀರು, ಕಾಳುಗಳನ್ನು ಹಾಕಿ ಎಂದು ಮನವಿ ಮಾಡಿದರು.

ADVERTISEMENT

ಸಂಘ ಸಂಸ್ಥೆ ಕಾರ್ಯಕರ್ತರು ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಬೇಸಿಗೆಯಲ್ಲಿ ನೀರಿಗಾಗಿ ಪರಿತಪಿಸುವ ಪಕ್ಷಿಗಳಿಗೆ ನೀರು ಕೊಡಲು ಅಂದಾಜು ಸಾವಿರಕ್ಕೂ ಹೆಚ್ಚು ಉಚಿತ ತಟ್ಟೆಗಳನ್ನು ಮನೆ ಮನೆಗೆ ವಿತರಿಸಿದರು.

ಈ ವೇಳೆ ಮಾತನಾಡಿದ ಗುಬ್ಬಚ್ಚಿ ಬರ್ಡ್‌ ಟ್ರಸ್ಟ್‌ ಮತ್ತು ಪರಿವರ್ತನ ಫೌಂಡೇಷನ್‌ ಟ್ರಸ್ಟ್‌ ಅಧ್ಯಕ್ಷ ಎಂ. ಕಾರ್ತಿಕ್‌, ‘ಏಳೆಂಟು ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಆದರೆ, ಈ ಬಾರಿ ಹತ್ತು ಹಲವು ಸಂಘ ಸಂಸ್ಥೆಯವರು ನಮ್ಮೊಂದಿಗೆ ಕೈ ಜೋಡಿಸಿರುವುದು ಅತೀವ ಸಂತಸ ತಂದಿದೆ. ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳನ್ನು ಉಳಿಸೋಣ’ ಎಂದು ಮನವಿ ಮಾಡಿದರು.

ರೋಟರಿ ಸಮೂಹ ಸಂಸ್ಥೆ, ಇನ್ನರ್ ವ್ಹೀಲ್ ಸಮೂಹ ಸಂಸ್ಥೆ, ವಾಸವಿ ವಿದ್ಯಾಸಂಸ್ಥೆ, ಆರ್ಯವೈಶ್ಯ ಸಂಘ, ವಾಸವಿ ಯುವಜನ ಸಂಘ, ಎಸ್‌ಜೆಎಂ ಡೆಂಟಲ್ ಕಾಲೇಜು ಎನ್‌ಎಸ್‌ಎಸ್‌ ಘಟಕ, ಎಸ್‌ಜೆಎಂ ಕಾನೂನು ಕಾಲೇಜು, ರೆಡ್‌ಕ್ರಾಸ್‌ ಸಂಸ್ಥೆ, ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್‌, ವಾಸವಿ ಮಹಿಳಾ ಸಂಘಗಳು ಭಾಗವಹಿಸಿದ್ದವು.

ಸಂಘ ಸಂಸ್ಥೆಯ ಪದಾಧಿಕಾರಿಗಳಾದ ಸಿ. ಹರೀಶ, ಎಂ.ಜಿ. ನಾಗೇಶ್‌, ಗಾಯತ್ರಿ ಶಿವರಾಂ, ಚೆಲುವರಾಯ, ಜ್ಯೋತಿ ಲಕ್ಷ್ಮಣ್, ಅವಿನಾಶ್, ಶ್ರೀ ನಿವಾಸ್, ಕಾರ್ತಿಕ್, ಡಾ. ಫ್ರಾಂಕ್‌ ಆಂತೋನಿ, ಮಧುಪ್ರಸಾದ್, ವಿಶ್ವನಾಥ್ ಬಾಬು, ಸತ್ಯನಾರಾಯಣ ಶೆಟ್ಟಿ, ಸೋಮನಾಥ ಶೆಟ್ಟಿ, ರಾಜೇಶ್ವರಿ ಸಿದ್ದರಾಂ, ಸುಧಾ ನಾಗರಾಜ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.