ADVERTISEMENT

Muharram Festival: ಮುಸ್ಲಿಮರಿಲ್ಲದ ಊರಿನಲ್ಲಿ ಮೊಹರಂ ವೈಭವ

ಪೀರಲ ಹಬ್ಬ ಎಂದೇ ಪ್ರಸಿದ್ಧಿ, ಹೊನ್ನೂರುಸ್ವಾಮಿ ಗುಡಿಯಲ್ಲಿ ವಿವಿಧ ಆಚರಣೆ

ಎಂ.ಎನ್.ಯೋಗೇಶ್‌
Published 17 ಜುಲೈ 2024, 5:38 IST
Last Updated 17 ಜುಲೈ 2024, 5:38 IST
ಚಿತ್ರದುರ್ಗ ತಾಲ್ಲೂಕು ಬಚ್ಚಬೋರನಹಟ್ಟಿ ಗ್ರಾಮದ ಹೊನ್ನೂರು ಸ್ವಾಮಿ ಗುಡಿಯಲ್ಲಿ ಮೊಹರಂ ಅಂಗವಾಗಿ ಪೀರಲ ದೇವರನ್ನು ಪ್ರತಿಷ್ಠಾಪನೆ ಮಾಡಿರುವುದು
ಚಿತ್ರದುರ್ಗ ತಾಲ್ಲೂಕು ಬಚ್ಚಬೋರನಹಟ್ಟಿ ಗ್ರಾಮದ ಹೊನ್ನೂರು ಸ್ವಾಮಿ ಗುಡಿಯಲ್ಲಿ ಮೊಹರಂ ಅಂಗವಾಗಿ ಪೀರಲ ದೇವರನ್ನು ಪ್ರತಿಷ್ಠಾಪನೆ ಮಾಡಿರುವುದು   

ಚಿತ್ರದುರ್ಗ: ಹಿಂದೂ– ಮುಸ್ಲಿಮರ ಭಾವೈಕ್ಯದ ಪ್ರತೀಕ ಮೊಹರಂ ಆಚರಣೆ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ನಡೆಯುತ್ತದೆ. ಆದರೆ, ಮುಸ್ಲಿಂ ಕುಟುಂಬಗಳೇ ಇಲ್ಲದ ತಾಲ್ಲೂಕಿನ ಬಚ್ಚಬೋರನಹಟ್ಟಿನಲ್ಲಿ ನಡೆಯುವ ಮೊಹರಂ ಆಚರಣೆ ಜಿಲ್ಲೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.

ಬಚ್ಚಬೋರನಹಟ್ಟಿನಲ್ಲಿ ನಡೆಯುವ ಮೊಹರಂ ಆಚರಣೆಗೆ ಐತಿಹಾಸಿಕ ಹಿನ್ನೆಲೆ ಇದೆ. ಇದು ಪೀರಲ ಹಬ್ಬ ಎಂದೇ ಪ್ರಸಿದ್ಧಿ ಪಡೆದಿದ್ದು ಗ್ರಾಮಸ್ಥರು 10 ದಿನಗಳ ಕಾಲ ವೈಭವದಿಂದ ವಿವಿಧ ಧಾರ್ಮಿಕ ವಿಧಿವಿಧಾನ ನೆರವೇರಿಸುತ್ತಾರೆ. ನಗರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಾಸಿಸುವ ಮುಸ್ಲಿಮರು ಬಚ್ಚಬೋರನಹಟ್ಟಿಗೆ ತೆರಳಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.

ಗ್ರಾಮದಲ್ಲಿ ಪೀರಲ ದೇವರ (ಹೊನ್ನೂರು ಸ್ವಾಮಿ) ಗುಡಿ ಇದ್ದು ಅಲ್ಲಿ ಬಹಳ ಹಿಂದಿನಿಂದಲೂ ಪೂಜೆ, ಪುನಸ್ಕಾರಗಳು ನಡೆಯುತ್ತಾ ಬಂದಿವೆ. ಪ್ರತಿ ಗುರುವಾರ ನಡೆಯುವ ವಿಶೇಷ ಪೂಜೆಯಲ್ಲಿ ಹಿಂದೂ– ಮುಸ್ಲಿಮರು ಭಾಗವಹಿಸುತ್ತಾರೆ. ಅಮಾವಾಸ್ಯೆಯಿಂದ 3ನೇ ದಿನಕ್ಕೆ ಗುದ್ದಲಿ ಪೂಜೆಯೊಂದಿಗೆ ಆರಂಭವಾಗುವ ಹಬ್ಬದಾಚರಣೆ 10 ದಿನಗಳವರೆಗೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.

ADVERTISEMENT

‘ಗ್ರಾಮದಲ್ಲಿ 5 ಮಂದಿ ಯಜಮಾನರ ಸಮಿತಿ ಇದ್ದು, ಅವರು ಪ್ರತಿವರ್ಷ ಕೈಗೊಳ್ಳುವ ನಿರ್ಧಾರದಂತೆ ಮೊಹರಂ ಆಚರಣೆ ನಡೆಯುತ್ತದೆ. ವರ್ಷದಿಂದ ವರ್ಷಕ್ಕೆ ಹಬ್ಬದ ಸಂಭ್ರಮ ಇಮ್ಮಡಿಯಾಗುತ್ತಲೇ ಇದೆ. ಮಕ್ಕಳು, ಯುವಕರು, ಮಹಿಳೆಯರು, ವೃದ್ಧರೆಲ್ಲರೂ ಭಕ್ತಿ ಭಾವದಿಂದ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಹೊನ್ನೂರುಸ್ವಾಮಿ ಅರ್ಚಕ ಕುಟುಂಬದ ಎಂ.ಜೆ. ತಿಪ್ಪೇಸ್ವಾಮಿ ತಿಳಿಸಿದರು.

ಹೊನ್ನೂರಸ್ವಾಮಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿ ಪಂಜಾ, ಒಡವೆ, ವಸ್ತ್ರಗಳೊಂದಿಗೆ ವಿಶಿಷ್ಟ ರೀತಿಯಲ್ಲಿ ಅಲಂಕಾರ ಮಾಡುತ್ತಾರೆ. ದೇವರ ಪ್ರತಿಷ್ಠಾಪನೆ ನಂತರ ಪ್ರತಿದಿನ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮುಸ್ಲಿಮರು ಕೂಡ ಪಾಲ್ಗೊಂಡು ದೇವರಿಗೆ ಸಕ್ಕರೆ, ಮಂಡಕ್ಕಿ, ಕಲ್ಲುಸಕ್ಕರೆ, ಒಣದ್ರಾಕ್ಷಿ ಅರ್ಪಿಸಿ ಓದಿಕೆ (ನಮಾಜ್‌) ನೆರವೇರಿಸುತ್ತಾರೆ.

ಗ್ರಾಮದ ಯುವಕರು ವಿವಿಧ ರೀತಿಯ ವೇಷ ಧರಿಸಿ ಮೆರವಣಿಗೆ ನಡೆಸುತ್ತಾರೆ. ಮುಖವಾಡ, ವಿವಿಧ ರೀತಿಯ ಪಟಗಳನ್ನು ತೊಟ್ಟು, ಮೈಗೆ ಬಣ್ಣ ಹಚ್ಚಿಕೊಂಡು ಕುಣಿತ ಹಾಕುತ್ತಾರೆ. ಊರಿನಾದ್ಯಂತ ಬ್ಯಾಂಡ್‌ಸೆಟ್‌ನೊಂದಿಗೆ ಮೆರವಣಿಗೆ ಮಾಡಿ ಆನಂದಿಸುತ್ತಾರೆ. ವಿವಿಧ ರೀತಿಯ ತಮಾಷೆಗಳೊಂದಿಗೆ ಕುಣಿಯುತ್ತಾ, ಕುಣಿಸುತ್ತಾ ಆನಂದ ಅನುಭವಿಸುತ್ತಾರೆ. ಅಳ್ಳೊಳ್ಳಿ ಬುಕ್ಕಾ, ಕರಡಿ, ಹುಲಿ ವೇಷ ಹಾಗೂ ಸ್ತ್ರೀ ವೇಷ ಹಾಕಿ ಮಕ್ಕಳನ್ನು ಬೆದರಿಸುವುದು ವಿಶೇಷ ಆಚರಣೆಯಾಗಿದೆ.

ಜುಲೈ 5ರ ಅಮಾವಾಸ್ಯೆಯ 3ನೇ ದಿನವಾದ ಜುಲೈ 7ರಂದು ಗುದ್ದಲಿಪೂಜೆಯೊಂದಿಗೆ ಮೊಹರಂ ಆಚರಣೆ ಬಚ್ಚಬೋರನಹಟ್ಟಿಯಲ್ಲಿ ಆರಂಭಗೊಂಡಿದ್ದು, ವಿವಿಧ ವಿಧಿವಿಧಾನಗಳು ಈಗಾಗಲೇ ಗ್ರಾಮದಲ್ಲಿ ನಡೆಯುತ್ತಿವೆ. ಹಬ್ಬದ 7ನೇ ದಿನ (7ನೇ ಕಣ) ವಿಶೇಷ ಆಚರಣೆಗಳೊಂದಿಗೆ ‘ಸಣ್ಣ ಕೆಂಡ’ ಆಚರಣೆ ಸಡಗರದಿಂದ ನೆರವೇರಿದೆ. ಜೊತೆಗೆ ಮಂಗಳವಾರ ರಾತ್ರಿಯಿಡೀ ವಿವಿಧ ಪೂಜೆ ಪುನಸ್ಕಾರ ನಡೆದಿದ್ದು ನಸುಕಿನಲ್ಲಿ ಭಕ್ತರು ‘ದೊಡ್ಡ ಕೆಂಡ’ ಹಾದು ಭಕ್ತಿ ಮೆರೆದರು.

‘ನಮ್ಮ ಊರಿನ ಬಾವಿಯಲ್ಲಿ ನೀರು ಕುಡಿಯಲು ಹೋದಾಗ ಪಂಜಾ ದೇವರು ಸಿಕ್ಕಿತಂತೆ. ಅಲ್ಲಿಂದ ಗ್ರಾಮದಲ್ಲಿ ಹೊನ್ನೂರು ಸ್ವಾಮಿ ಪೂಜೆ, ಮೊಹರಂ ಆಚರಣೆ ಆರಂಭವಾಯಿತು ಎಂದು ನಮ್ಮ ಪೂರ್ವಿಕರು ಹೇಳುತ್ತಿದ್ದರು. ಹಿರಿಯರ  ಸಂಪ್ರದಾಯವನ್ನು ಚಾಚೂತಪ್ಪದೇ ಮುಂದುವರಿಸಿಕೊಂಡು ಬಂದಿದ್ದೇವೆ’ ಎಂದು ಗ್ರಾಮಸ್ಥರು ತಿಳಿಸಿದರು.

ಮೊಹರಂ ಮೆರವಣಿಗೆ ಸಂಭ್ರಮದಲ್ಲಿ ಗ್ರಾಮದ ಯುವಜನರು

ಭಕ್ತರಿಂದ ತುಲಾಭಾರ ಸೇವೆ

ಮೊಹರಂ ಆಚರಣೆ ಅವಧಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಭಕ್ತರು ತುಲಾಭಾರ ಸೇವೆ ನೆರವೇರಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹರಕೆ ಸಂಕಲ್ಪಗಳು ನೆರವೇರಿದ ನಂತರ ದೇವರಿಗೆ ಬೆಲ್ಲ ಅಕ್ಕಿ ಹಣದ ತೂಕದ ತುಲಾಭಾರ ನೆರವೇರಿಸುತ್ತಾರೆ. ‘ವಿಶೇಷವಾಗಿ ಮಕ್ಕಳಿಲ್ಲದವರು ಪೀರಲ ದೇವರಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಮಕ್ಕಳಾದ ನಂತದ ಮಗುವಿನ ತೂಕಕ್ಕೆ ತುಲಾಭಾರ ಸೇವೆ ಮಾಡುತ್ತಾರೆ’ ಎಂದು ಅರ್ಚಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.