ADVERTISEMENT

‘ವಿಶೇಷ ಲೋಕ ಅದಾಲತ್‌’: ‘ಸುಪ್ರೀಂ’ನಲ್ಲಿ ಬಾಕಿ ಇದ್ದ ಪ್ರಕರಣ ಇತ್ಯರ್ಥ

ರಂಗಮ್ಮ ಮತ್ತು ಕೆಎಸ್‌ಆರ್‌ಟಿಸಿ ನಡುವಣ ಪ್ರಕರಣ

ಎಂ.ಎನ್.ಯೋಗೇಶ್‌
Published 12 ಜುಲೈ 2024, 23:46 IST
Last Updated 12 ಜುಲೈ 2024, 23:46 IST
ಅಪಘಾತದಲ್ಲಿ ಗಾಯಗೊಂಡಿದ್ದ ರಂಗಮ್ಮ ಅವರನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರೋಣ ವಾಸುದೇವ, ನ್ಯಾಯಾಧೀಶರಾದ ಎಂ.ವಿಜಯ್‌ ಹಾಗೂ ಚೈತ್ರಾ ಭೇಟಿಯಾದರು. ಕೆಎಸ್‌ಆರ್‌ಟಿಸಿ ಕಾನೂನು ಅಧಿಕಾರಿ ಲಕ್ಷ್ಮಿನಾರಾಯಣ ಭಟ್ ಮತ್ತು ವಕೀಲ ಆರ್‌.ಕೃಷ್ಣ ಉಪಸ್ಥಿತರಿದ್ದರು 
ಅಪಘಾತದಲ್ಲಿ ಗಾಯಗೊಂಡಿದ್ದ ರಂಗಮ್ಮ ಅವರನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರೋಣ ವಾಸುದೇವ, ನ್ಯಾಯಾಧೀಶರಾದ ಎಂ.ವಿಜಯ್‌ ಹಾಗೂ ಚೈತ್ರಾ ಭೇಟಿಯಾದರು. ಕೆಎಸ್‌ಆರ್‌ಟಿಸಿ ಕಾನೂನು ಅಧಿಕಾರಿ ಲಕ್ಷ್ಮಿನಾರಾಯಣ ಭಟ್ ಮತ್ತು ವಕೀಲ ಆರ್‌.ಕೃಷ್ಣ ಉಪಸ್ಥಿತರಿದ್ದರು    

ಚಿತ್ರದುರ್ಗ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದ್ದ ಮೋಟಾರು ವಾಹನ ಅಪಘಾತ (ಎಂವಿಎ) ಪ್ರಕರಣವೊಂದನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಡೆಸಲಾದ ‘ವಿಶೇಷ ಲೋಕ ಅದಾಲತ್‌’ ಮೂಲಕ ಶುಕ್ರವಾರ ಇತ್ಯರ್ಥಗೊಳಿಸಲಾಯಿತು.

2018ರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಕಾಲು ಕಳೆದುಕೊಂಡಿದ್ದ ಮಹಿಳೆಗೆ ಹೆಚ್ಚುವರಿ ಪರಿಹಾರ ನೀಡುವ ಮೂಲಕ ಪ್ರಕರಣಕ್ಕೆ ಅಂತ್ಯ ಹಾಡಲಾಯಿತು.

‘ಸುಪ್ರೀಂ ಕೋರ್ಟ್‌ಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ದೇಶದಾದ್ಯಂತ 13 ಸಾವಿರ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದ ಜಿಲ್ಲೆಯ ರಂಗಮ್ಮ ಮತ್ತು ಕೆಎಸ್‌ಆರ್‌ಟಿಸಿ ನಡುವಣ ಪ್ರಕರಣವನ್ನು ಇತ್ಯರ್ಥಗೊಳಿಸಿರುವುದು ಸಂತಸ ತಂದಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರೋಣ ವಾಸುದೇವ ತಿಳಿಸಿದರು.

ADVERTISEMENT

ಪ್ರಕರಣದ ವಿವರ: 2018ರಲ್ಲಿ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕು ಗರಗ ಗ್ರಾಮದ ರಂಗಮ್ಮ ಅವರು ಶಿವಮೊಗ್ಗದಲ್ಲಿ ರಸ್ತೆ ದಾಟುವಾಗ ಸಾರಿಗೆ ಸಂಸ್ಥೆಯ ಬಸ್‌ವೊಂದು ಡಿಕ್ಕಿ ಹೊಡೆದು ಅವರ ಕಾಲಿನ ಮೇಲೆ ಹರಿದಿತ್ತು. ಇದರಿಂದ ಎಡಗಾಲಿನ ಪಾದ ತುಂಡಾಗಿತ್ತು. ತವರು ಜಿಲ್ಲೆ, ಚಿತ್ರದುರ್ಗದ 1ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ಅವರು ಈ ಸಂಬಂಧ ದಾವೆ ಹೂಡಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಗಾಯಾಳುವಿಗೆ ₹ 2 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದರು.

ಹೆಚ್ಚು ಪರಿಹಾರ ನೀಡುವಂತೆ ಒತ್ತಾಯಿಸಿ ರಂಗಮ್ಮ 2019ರಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್‌, ಪರಿಹಾರ ಮೊತ್ತವನ್ನು ₹ 4.51 ಲಕ್ಷಕ್ಕೆ ಹೆಚ್ಚಿಸಿ ತೀರ್ಪು ನೀಡಿತ್ತು. 2022ರಲ್ಲಿ ಹೈಕೋರ್ಟ್‌ ತೀರ್ಪಿನ ವಿರುದ್ಧ ರಂಗಮ್ಮ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ಬಾಕಿ ಉಳಿದಿರುವ ಹಂತದಲ್ಲಿ ವಿಶೇಷ ಲೋಕ ಅದಾಲತ್‌ ನಡೆಸಲಾಗಿದ್ದು ಕಳೆದೊಂದು ವಾರದಿಂದ ನಡೆದ ಸಂಧಾನದಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ₹ 7.51 ಲಕ್ಷ ಪರಿಹಾರ ನೀಡಲು ಒಪ್ಪಿದರು. ರಂಗಮ್ಮ ಪರ ವಕೀಲರಾದ ಆರ್‌.ಕೃಷ್ಣ ಮತ್ತು ಜೆ.ಮಹಾಂತೇಶ್‌ ವಾದ ಮಂಡಿಸಿದ್ದರು.

‘ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಳಿಸುವಂತೆ ಪಕ್ಷಗಾರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸುಪ್ರೀಂ ಕೋರ್ಟ್‌ ನೀಡಿದ್ದ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ವಿಜಯ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.