ಭರಮಸಾಗರ: ವೇಯ್ಟ್ ಲಿಫ್ಟಿಂಗ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆಯುತ್ತಿರುವ ಬಿ. ಲಕ್ಷ್ಮಿ ಅವರು ಅಪ್ಪಟ ಗ್ರಾಮೀಣ ಪ್ರತಿಭೆ.
ಭರಮಸಾಗರದ ಬಾಲರಾಜ್ ಶೆಟ್ಟಿ ಮತ್ತು ಮಾಲಾ ದಂಪತಿಯ ಪುತ್ರಿ ಬಿ. ಲಕ್ಷ್ಮಿ ಉದಯೋನ್ಮುಖ ಕ್ರೀಡಾಪಟು. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮೂಲಕ ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತರುವ ಕನಸು ಇರಿಸಿಕೊಂಡಿದ್ದಾರೆ. ವೇಯ್ಟ್ ಲಿಫ್ಟಿಂಗ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದು, ಪ್ರಸ್ತುತ 55 ಕೆ.ಜಿ ವಿಭಾಗದ ಕ್ರೀಡಾಪಟುಗಳ ಪೈಕಿ ದೇಶದಲ್ಲಿ 6ನೇ ಶ್ರೇಯಾಂಕದಲ್ಲಿದ್ದಾರೆ.
ಏಳನೇ ತರಗತಿಯಲ್ಲಿದ್ದಾಗ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಲಕ್ಷ್ಮಿ ಆರಂಭದಲ್ಲಿ ಆರಿಸಿಕೊಂಡಿದ್ದು ಅಥ್ಲೆಟಿಕ್ಸ್. ಶಾಟ್‌ಪಟ್, ಡಿಸ್ಕಸ್ ಥ್ರೋ, 100 ಮೀಟರ್ ಓಟದಲ್ಲಿ ತೊಡಗಿಸಿಕೊಂಡಿದ್ದರು. ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ತುಡಿತ ಇವರಲ್ಲಿ ಇತ್ತು. ಭರಮಸಾಗರದ ಎಸ್‌ಜೆಎಂ ಶಾಲೆಯಲ್ಲಿ 7ನೇ ತರಗತಿಯವರೆಗೆ ವ್ಯಾಸಂಗ ಮಾಡಿದ ಬಳಿಕ ಕ್ರೀಡೆಗೆ ಪ್ರೋತ್ಸಾಹ, ಉತ್ತಮ ತರಬೇತಿ ಸಿಗಬಹುದು ಎಂಬ ಆಶಯದೊಂದಿಗೆ ದಕ್ಷಿಣಕನ್ನಡ ಜಿಲ್ಲೆಯ ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಸೇರಿಕೊಂಡರು.
ಲಕ್ಷ್ಮಿ ಅವರ ಎತ್ತರ, ದೈಹಿಕ ಸಾಮರ್ಥ್ಯ ಅಥ್ಲೆಟಿಕ್ಸ್‌ಗೆ ಸೂಕ್ತವಲ್ಲ ಎಂದು ಶಾಲೆಯ ತರಬೇತುದಾರರು ಸಲಹೆ ನೀಡಿದ್ದರಿಂದ ಕಬಡ್ಡಿಯಲ್ಲಿ ತೊಡಗಿಸಿಕೊಂಡು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದರು. ಆದರೆ, ವೈಯಕ್ತಿಕ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎನ್ನುವ ಹಂಬಲದಿಂದ ತರಬೇತುದಾರ ರಾಜೇಂದ್ರಪ್ರಸಾದ್ ಅವರ ಮಾರ್ಗದರ್ಶನದಲ್ಲಿ ವೇಯ್ಟ್ ಲಿಫ್ಟಿಂಗ್‌ನಲ್ಲಿ ತಮ್ಮ ಪಯಣ ಆರಂಭಿಸಿದರು.
ಬೆಂಗಳೂರಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದ ವೇಳೆ ಪಠ್ಯ ಚಟುವಟಿಕೆಯ ಒತ್ತಡದ ಕಾರಣ ಒಂದು ವರ್ಷ ಕ್ರೀಡೆಯಿಂದ ದೂರ ಉಳಿಯಬೇಕಾಯಿತು. ನಂತರ ಪದವಿ ಶಿಕ್ಷಣಕ್ಕಾಗಿ ಉಜಿರೆಯ ಎಸ್‌ಡಿಎಂ ಕಾಲೇಜಿಗೆ ಹಿಂದಿರುಗಿ ಡಿ. ವೀರೇಂದ್ರ ಹೆಗ್ಗಡೆ ಅವರ ಆಶ್ರಯದಲ್ಲಿ ಅಲ್ಲಿ ತರಬೇತುದಾರ ರಾಜೇಂದ್ರಪ್ರಸಾದ್ ಬಳಿ ಸತತ ಮೂರು ವರ್ಷ ಕ್ರೀಡಾ ಅಭ್ಯಾಸ ಮುಂದುವರಿಸಿ 2 ಬಾರಿ ರಾಜ್ಯವನ್ನು ಪ್ರತಿನಿಧಿಸಿ ಒಮ್ಮೆ ಮಂಗಳೂರು ವಿಶ್ವವಿದ್ಯಾಲಯದ ಕ್ಯಾಪ್ಟನ್ ಕೂಡ ಆಗಿದ್ದಾರೆ.
ಕೋವಿಡ್‌ಗೂ ಮುನ್ನ ರಾಷ್ಟ್ರೀಯ ಟಾಪ್ ಆಟಗಾರ್ತಿಯರ ಪಟ್ಟಿಯಲ್ಲಿ ಭಾರತದಲ್ಲಿ 9ನೇ ಸ್ಥಾನದಲ್ಲಿದ್ದ ಇವರು ಕೊರೊನಾ ಕಾರಣದಿಂದ 1 ವರ್ಷ ತರಬೇತಿಯಿಂದ ವಂಚಿತರಾಗಬೇಕಾಯಿತು. ಪದವಿ ಬಳಿಕ ಗ್ರಾಮಕ್ಕೆ ಹಿಂದಿರುಗಿದ ಲಕ್ಷ್ಮಿ ಅವರು ತರಬೇತಿಗೆ ಪೂರಕ ವಾತಾವರಣವಿಲ್ಲದ ಕಾರಣ ಬೆಂಗಳೂರಿಗೆ ತೆರಳಿ ನಟರಾಜ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ನಟರಾಜ್ ಅವರು ಅತ್ಮಸ್ಥೈರ್ಯ ತುಂಬಿ ವೈಜ್ಞಾನಿಕ ರೀತಿಯಲ್ಲಿ ತರಬೇತಿ ನೀಡಿದ ಕಾರಣ 9ನೇ ಸ್ಥಾನದಲ್ಲಿದ್ದ ಅವರು ಈಗ 4ನೇ ಸ್ಥಾನಕ್ಕೇರಿದ್ದಾರೆ. ಈಚೆಗೆ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ಟಾಪ್ 4ರಲ್ಲಿ ಸ್ಥಾನ ಪಡೆದು ‘ಖೇಲೋ ಇಂಡಿಯಾ’ ಗೇಮ್ಸ್‌ಗೆ ಆಯ್ಕೆಯಾಗಿದ್ದಲ್ಲದೇ, ಅಲ್ಲಿ ಕಂಚಿನ ಪದಕವನ್ನೂ ಗಳಿಸಿದ್ದಾರೆ. ಚೀನಾದಲ್ಲಿ ಜೂನ್ 25ರಂದು ನಡೆಯಲಿರುವ ವಿಶ್ವಮಟ್ಟದ ವಿಶ್ವವಿದ್ಯಾಲಯಗಳ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
‘ಒಡಿಶಾದಲ್ಲಿ ನಡೆದ ಹಿರಿಯರ ರಾಷ್ಟ್ರೀಯ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ 6ನೇ ಸ್ಥಾನ ಪಡೆದಿದ್ದು, ಮುಂದೆ ನಡೆಯುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ವರ್ಷ ಕರ್ನಾಟಕ ರಾಜ್ಯದ ಉತ್ತಮ ಲಿಫ್ಟರ್ ಪ್ರಶಸ್ತಿ ಸಿಕ್ಕಿದೆ. ನನ್ನ ಕ್ರೀಡಾ ಬೆಳವಣಿಗೆಗೆ ತಾಯಿ ಮಾಲಾ ಅವರೇ ಪ್ರೇರಣೆ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ, ತರಬೇತಿ ಅಗತ್ಯ’ ಎಂದು ಲಕ್ಷ್ಮಿ ತಿಳಿಸಿದರು.
ಲಕ್ಷ್ಮಿ ಅವರಿಗೆ ಮೊದಲಿಗಿಂತ ಸಾಮರ್ಥ್ಯ ಹೆಚ್ಚಾಗಿದೆ. ಮೂಡುಬಿದಿರೆ ಮತ್ತು ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅವರಿಗೆ ತಮ್ಮ ಗುರಿ ತಿಳಿದಿದೆ. ಭವಿಷ್ಯದಲ್ಲಿ ಇನ್ನೂ ಉತ್ತಮ ಸಾಧನೆ ಮಾಡುತ್ತಾರೆ.
–ಎನ್.ಎ. ನಟರಾಜ್, ವೇಯ್ಟ್‌ಲಿಫ್ಟಿಂಗ್ ಕೋಚ್, ಬೆಂಗಳೂರು
ಎರಡು ವರ್ಷಗಳಿಂದ ಕರ್ನಾಟಕದ ಬೆಸ್ಟ್ ಲಿಫ್ಟರ್ ಅವಾರ್ಡ್ ಸಿಕ್ಕಿದೆ. ಪ್ರಸ್ತುತ 55 ಕೆ.ಜಿ ವಿಭಾಗದಲ್ಲಿ ದೇಶದಲ್ಲಿ 6ನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನಕ್ಕೆ ಏರಬೇಕು. ಏಷ್ಯನ್ ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ಪದಕ ಪಡೆಯಬೇಕು ಎಂಬುದು ಸದ್ಯದ ಗುರಿ.
–ಬಿ.ಲಕ್ಷ್ಮಿ, ಕ್ರೀಡಾಪಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.