ADVERTISEMENT

ಪೋಷಕರ ಒತ್ತಡಕ್ಕೆ ಮಣಿಯದಂತೆ ವಿದ್ಯಾರ್ಥಿಗಳಿಗೆ ಸಲಹೆ

ಶಿಕ್ಷಣ ಮಾರ್ಗದರ್ಶಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 16 ಮೇ 2019, 12:07 IST
Last Updated 16 ಮೇ 2019, 12:07 IST
ಚಿತ್ರದುರ್ಗದ ತರಾಸು ರಂಗಮಂದರಿದಲ್ಲಿ ವಿದ್ಯಾರ್ಥಿಗಳಿಗೆ ಗುರುವಾರ ಏರ್ಪಡಿಸಿದ್ದ ಮಾಹಿತಿ ಶಿಬಿರದಲ್ಲಿ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಮಾತನಾಡಿದರು. ಉಪನ್ಯಾಸಕ ಪ್ರದೀಪಕುಮಾರ್‌, ಡಿಡಿಪಿಐ ಆಂಥೋನಿ, ಡಿಡಿಪಿಯು ಶೋಭಾ, ಜಿಲ್ಲಾ ಪಂಚಾಯಿತಿ ಸಿಇಒ ಸಿ.ಸತ್ಯಭಾಮ, ಉಪನ್ಯಾಸಕಿ ನಯನ ಇದ್ದಾರೆ.
ಚಿತ್ರದುರ್ಗದ ತರಾಸು ರಂಗಮಂದರಿದಲ್ಲಿ ವಿದ್ಯಾರ್ಥಿಗಳಿಗೆ ಗುರುವಾರ ಏರ್ಪಡಿಸಿದ್ದ ಮಾಹಿತಿ ಶಿಬಿರದಲ್ಲಿ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಮಾತನಾಡಿದರು. ಉಪನ್ಯಾಸಕ ಪ್ರದೀಪಕುಮಾರ್‌, ಡಿಡಿಪಿಐ ಆಂಥೋನಿ, ಡಿಡಿಪಿಯು ಶೋಭಾ, ಜಿಲ್ಲಾ ಪಂಚಾಯಿತಿ ಸಿಇಒ ಸಿ.ಸತ್ಯಭಾಮ, ಉಪನ್ಯಾಸಕಿ ನಯನ ಇದ್ದಾರೆ.   

ಚಿತ್ರದುರ್ಗ: ಜಿಲ್ಲಾಡಳಿತ ಇದೇ ಮೊಲದ ಬಾರಿಗೆ ಆಯೋಜಿಸಿದ್ದ ‘ಎಸ್ಸೆಸ್ಸೆಲ್ಸಿ ನಂತರ ಮುಂದೇನು?’ ಮಾರ್ಗದರ್ಶನ ಶಿಬಿರಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ, ನಿರೀಕ್ಷೆಗೆ ತಕ್ಕಷ್ಟು ಸಲಹೆ, ಸೂಚನೆ ಸಿಗಲಿಲ್ಲ ಎಂಬುದು ವಿದ್ಯಾರ್ಥಿಗಳ ಕೊರಗು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಮಾರಂಭಕ್ಕೆ ತಾಲ್ಲೂಕು ವ್ಯಾಪ್ತಿಯ ಹಲವು ಹಳ್ಳಿಯ ವಿದ್ಯಾರ್ಥಿಗಳು ಬಂದಿದ್ದರು. ಮಕ್ಕಳ ಭವಿಷ್ಯ ರೂಪಿಸುವ ಪೋಷಕರು ಕೂಡ ಸಮಾರಂಭದಲ್ಲಿ ಹಾಜರಿದ್ದರು. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳು ಹುಮ್ಮಸ್ಸಿನಿಂದಲೇ ಪಾಲ್ಗೊಂಡಿದ್ದರು.

ಎಸ್ಸೆಸ್ಸೆಲ್ಸಿ ಬಳಿಕ ವ್ಯಾಸಂಗ ಮುಂದುವರಿಸಲು ಇರುವ ಅವಕಾಶಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಯಿತು. ಪಿಯುಸಿ, ಡಿಪ್ಲೊಮ, ಐಟಿಐ ಸೇರಿ ಇತರ ಕೋರ್ಸ್‌ಗಳ ಬಗ್ಗೆ ಪರಿಣತರು ವಿವರಿಸಿದರು. ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳು ಹಾಗೂ ಪೋಷಕರು ಅನುಮಾನಗಳನ್ನು ಬಗೆಹರಿಸಿಕೊಂಡರು.

ADVERTISEMENT

ಡಿಪ್ಲೊಮ ಕಾಲೇಜಿನ ಉಪನ್ಯಾಸಕಿ ನಯನ ಮಾತನಾಡಿ, ‘ಪ್ರೌಢಶಾಲೆ ಹಂತ ಪೂರೈಸಿದ ಬಹುತೇಕ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಬಗ್ಗೆ ಅರಿವು ಕಡಿಮೆ. ಕೋರ್ಸ್‌ ಆಯ್ಕೆ ಮಾಡಿಕೊಳ್ಳುವುದಕ್ಕೂ ಮುನ್ನ ಅವಕಾಶಗಳ ಬಗ್ಗೆ ಅರಿಯುವ ಅಗತ್ಯವಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂತಹ ಮಾರ್ಗದರ್ಶನ ಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಎಸ್ಸೆಸ್ಸೆಲ್ಸಿ ಬಳಿಕ ಪದವಿ ಪೂರ್ವ ಶಿಕ್ಷಣಕ್ಕೆ ಸೇರುವುದು ವಾಡಿಕೆ. ತಾಂತ್ರಿಕ ಶಿಕ್ಷಣ ಪಡೆಯುವ ಹಂಬಲ ಇರುವವರು ಡಿಪ್ಲೊಮಾ ಪ್ರವೇಶ ಪಡೆಯುವುದು ಹೆಚ್ಚು ಸೂಕ್ತ. ಪಿಯು ಹಂತದಲ್ಲಿ ವಿಜ್ಞಾನ ವ್ಯಾಸಂಗ ಮಾಡಿ ನಂತರ ಎಂಜಿನಿಯರಿಂಗ್‌ ಪ್ರವೇಶ ಬಯಸುತ್ತಾರೆ. ಎಸ್ಸೆಸ್ಸೆಲ್ಸಿ ಬಳಿಕ ಡಿಪ್ಲೊಮ ಸೇರಿದರೆ ವೃತ್ತಿಪರ ತರಬೇತಿ ಪಡೆಯಲು ಅನುಕೂಲವಾಗುತ್ತದೆ’ ಎಂದು ಸಲಹೆ ನೀಡಿದರು.

‘ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಮೂರು ವರ್ಷದ ಶುಲ್ಕ ₹ 10 ಸಾವಿರ ಮೀರುವುದಿಲ್ಲ. ಡಿಪ್ಲೊಮ ಮುಗಿದ ಬಳಿಕ ಕೆಲಸಕ್ಕೆ ಸೇರುವ ಅವಕಾಶವೂ ಇದೆ. ಉದ್ಯೋಗ ಮಾಡುತ್ತಲೇ ಸಂಜೆ ಕಾಲೇಜುಗಳಲ್ಲಿ ವ್ಯಾಸಂಗ ಮುಂದುವರಿಸಬಹುದು. ಜೀವವಿಜ್ಞಾನ, ರಸಾಯನವಿಜ್ಞಾನದಲ್ಲಿ ಆಸಕ್ತಿ ಇಲ್ಲದವರಿಗೆ ತಾಂತ್ರಿಕ ಕೋರ್ಸ್‌ಗಳು ಹೆಚ್ಚು ಸೂಕ್ತ’ ಎಂದು ಮಾಹಿತಿ ನೀಡಿದರು.

ಉಪನ್ಯಾಸಕ ಪ್ರದೀಪಕುಮಾರ್‌, ‘ಮಕ್ಕಳು ವೈದ್ಯ ಅಥವಾ ಎಂಜಿನಿಯರ್‌ ಆಗಬೇಕು ಎಂಬುದೇ ಬಹುತೇಕ ಪೋಷಕರ ಕನಸು. ಪೂರ್ವನಿರ್ಧಾರಿತ ಮಾರ್ಗದಲ್ಲಿ ಸಾಗುವುದಕ್ಕಿಂತ ಮಕ್ಕಳ ಮನಸ್ಥಿತಿಯನ್ನು ಅರಿತು ನಡೆಯುವುದು ಸೂಕ್ತ. ಡಿಪ್ಲೊಮ ಮೂಲಕವೂ ಎಂಜಿನಿಯರಿಂಗ್ ಪ್ರವೇಶ ಪಡೆಯಬಹುದು’ ಎಂದು ಹೇಳಿದರು.

‘ಡಿಪ್ಲೊಮದಲ್ಲಿ 30ಕ್ಕೂ ಹೆಚ್ಚು ವಿಭಾಗಗಳಿವೆ. ತಾಂತ್ರಿಕ ಹಾಗೂ ತಾಂತ್ರಿಕೇತರ ವಿಭಾಗದ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು. ಫ್ಯಾಷನ್‌ ಡಿಸೈನಿಂಗ್‌, ಟೆಕ್ಸ್‌ಟೈಲ್‌ ಇಂಡಸ್ಟ್ರೀಯಂಥ ತಾಂತ್ರಿಕೇತರ ವಿಭಾಗಗಳಲ್ಲಿ ಪರಿಣತಿ ಪಡೆದರೆ ಹೆಚ್ಚು ಉದ್ಯೋಗಾವಕಾಶಗಳಿವೆ’ ಎಂದು ವಿವರಿಸಿದರು.

ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ಗೋಕುಲ್‌ ಪ್ರವೀಣ್‌ ಇತಿಹಾಸ ಅಧ್ಯಯನದಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶೋಭಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆಂಥೋನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.