ಮೊಳಕಾಲ್ಮುರು: ಸಿಬ್ಬಂದಿ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ಪಶು ಚಿಕಿತ್ಸಾ ಕೇಂದ್ರ ಇದ್ದೂ ಇಲ್ಲದಂತಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಸವಿದ್ದು, ಈ ಜನಾಂಗದವರ ಕುಲಕಸುಬು ಕುರಿ, ಮೇಕೆ, ಜಾನುವಾರು ಸಾಕಣೆಯಾಗಿದೆ.
ಜಿಲ್ಲೆಯಲ್ಲಿ ಹೆಚ್ಚು ಕುರಿ, ಮೇಕೆ ಸಾಕಣೆ ಮಾಡುವ ತಾಲ್ಲೂಕಾಗಿಯೂ ಮೊಳಕಾಲ್ಮುರು ಗುರುತಿಸಿಕೊಂಡಿದೆ. ಇಲಾಖೆ ಅಂಕಿ-ಅಂಶಗಳ ಪ್ರಕಾರ ತಾಲ್ಲೂಕಿನಲ್ಲಿ 31,000 ಜಾನುವಾರು, 2.21 ಲಕ್ಷದಷ್ಟು ಕುರಿ, ಮೇಕೆ ಸಾಕಣೆ ನಡೆಯುತ್ತಿದೆ. ಇವುಗಳ ಆರೋಗ್ಯ ತಪಾಸಣೆಗಾಗಿ ಮೊಳಕಾಲ್ಮುರಿನಲ್ಲಿ ತಾಲ್ಲೂಕು ಪಶು ಚಿಕಿತ್ಸಾ ಕೇಂದ್ರ ಮತ್ತು ವೆಂಕಟಾಪುರ, ರಾಂಪುರ, ನಾಗಸಮುದ್ರ, ದೇವಸಮುದ್ರ, ಕೋನಸಾಗರದಲ್ಲಿ ಉಪ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದಕ್ಕೆ ಮಂಜೂರಾಗಿರುವ 9 ಪಶು ವೈದ್ಯಾಧಿಕಾರಿ ಹುದ್ದೆಗಳ ಪೈಕಿ 7 ಹುದ್ದೆಗಳು ಖಾಲಿ ಇವೆ.
ಪಶು ವೈದ್ಯಕೀಯ ಪರಿವೀಕ್ಷಕಕರ ಒಟ್ಟು 6 ಮಂಜೂರಾತಿ ಹುದ್ದೆಗಳಿದ್ದು, ಇದರಲ್ಲಿ ತುಮಕೂರ್ಲಹಳ್ಳಿ ಹಾಗೂ ತಮ್ಮೇನಹಳ್ಳಿ ಉಪ ಕೇಂದ್ರ ಹೊರತುಪಡಿಸಿದಲ್ಲಿ ಎಲ್ಲಾ ಕೇಂದ್ರಗಳಲ್ಲಿಯೂ ಖಾಲಿಯಿದೆ. ಕಿರಿಯ ಪಶು ವೈದ್ಯಕೀಯ ಪರಿವೀಕ್ಷಕರ 9 ಹುದ್ದೆಗಳಲ್ಲಿ 8 ಹುದ್ದೆಗಳು ಖಾಲಿ ಇವೆ. ಪಶು ವೈದ್ಯಕೀಯ ಪರಿವೀಕ್ಷಕರ 6 ಹುದ್ದೆಗಳಲ್ಲಿ 5 ಖಾಲಿ ಇವೆ. ‘ಡಿ’ ಗ್ರೂಪ್‌ನ ಎಲ್ಲಾ ಹುದ್ದೆಗಳು ಖಾಲಿ ಇದೆ ಎಂದು ಇಲಾಖೆ ತಾಲ್ಲೂಕು ನಿರ್ದೇಶಕ ಡಾ. ರಂಗಪ್ಪ ತಿಳಿಸಿದರು.
‘ಡಿ’ ಗ್ರೂಪ್‌ನ ಹುದ್ದೆಗಳನ್ನು ಕೆಲ ಕೇಂದ್ರಗಳಲ್ಲಿ ಹೊರಗೊತ್ತಿಗೆ ಮೂಲಕ ನೀಡಿದ್ದರೂ ಸಮರ್ಪಕವಾಗಿ ದೊರೆಯುತ್ತಿಲ್ಲ. ತಾಲ್ಲೂಕಿಗೆ ಮಂಜೂರಾಗಿರುವ ಒಟ್ಟು 55 ಹುದ್ದೆಗಳ ಪೈಕಿ 15 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 40 ಹುದ್ದೆಗಳು ಖಾಲಿ ಇವೆ. ಈ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಜಾನುವಾರುಗಳಿಗೆ ಲಸಿಕೆ ಹಾಕುವ ಸಮಯದಲ್ಲಿ ಹೋಬಳಿವಾರು ವಿಭಾಗ ಮಾಡಿಕೊಂಡು, ಇರುವ ಸಿಬ್ಬಂದಿಯನ್ನು ಒಂದೇ ಹೋಬಳಿಗೆ ನಿಯೋಜಿಸಲಾಗುತ್ತಿದೆ. ಪ್ರಕೃತಿ ವಿಕೋಪ, ಜಾನುವಾರು ಮೃತಪಟ್ಟ ಸಮಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ತೊಂದರೆಯಾಗುತ್ತಿದೆ. ಇರುವ ಸಿಬ್ಬಂದಿಗೆ ತರಬೇತಿ ನೀಡಿ ಸೇವೆ ಪಡೆಯಲಾಗುತ್ತಿದೆ. ಸರ್ಕಾರ ಹೊಸ ನೇಮಕಾತಿ ಮಾಡಿದಲ್ಲಿ ಮಾತ್ರ ಸಿಬ್ಬಂದಿ ಲಭ್ಯವಾಗಬಹುದು ಎಂದು ಅವರು ಹೇಳಿದರು.
ಕಳೆದ ವರ್ಷ ಚರ್ಮಗಂಟು ರೋಗ, ಸಪ್ಪೆ ರೋಗ, ಕುರಿಗಳಿಗೆ ಕಾಲುಬಾಯಿ ರೋಗ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಸಕಾಲಕ್ಕೆ ಔಷಧ, ಚಿಕಿತ್ಸೆ, ಮಾಹಿತಿ ದೊರೆಯದೇ ನಷ್ಟ ಅನುಭವಿಸಿದವು. ಸರ್ಕಾರ ಜನರ ಆರೋಗ್ಯಕ್ಕೆ ನೀಡುವ ಪ್ರಾಮುಖ್ಯವನ್ನು ಪ್ರಾಣಿಗಳಿಗೂ ನೀಡಬೇಕು. ಹೀಗಾದಲ್ಲಿ ಮಾತ್ರ ಜಾನುವಾರು ಸಾಕಣೆಯನ್ನು ಉಪ ಕಸುಬಾಗಿ ಕೈಗೊಂಡು ಲಾಭ ಕಾಣಲು ಸಾಧ್ಯ ಎಂದು ಕೋನಸಾಗರದ ಪಾಪಣ್ಣ ಹೇಳಿದರು.
ಸಿಬ್ಬಂದಿ ಭರ್ತಿ ಕುರಿತು ಈಚೆಗೆ ತಾಲ್ಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಲಾಗಿದೆ. ಅಗತ್ಯ ಬಿದ್ದಲ್ಲಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು.-ಧನಂಜಯ ರಾಜ್ಯ ಜಂಟಿ ಕಾರ್ಯದರ್ಶಿ ಮಾನವ ಹಕ್ಕುಗಳ ಜನಸೇವಾ ಸಮಿತಿ
ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ಗಮನಕ್ಕೆ ಬಂದಿದೆ. ಇದು ರಾಜ್ಯಮಟ್ಟದ ಸಮಸ್ಯೆಯಾಗಿದೆ. ಈ ಬಗ್ಗೆ ಸಚಿವರ ಗಮನಕ್ಕೆ ತಂದು ಸಿಬ್ಬಂದಿ ನೇಮಕಾತಿಗೆ ಶ್ರಮಿಸಲಾಗುವುದು.ಎನ್.ವೈ. ಗೋಪಾಲಕೃಷ್ಣ ಶಾಸಕ ಮೊಳಕಾಲ್ಮುರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.