ADVERTISEMENT

ಪರಶುರಾಂಪುರ | ರಸ್ತೆ ಕಾಮಗಾರಿ ವಿಳಂಬ; ಆಕ್ರೋಶ

ಜೆ.ತಿಮ್ಮಯ್ಯ
Published 13 ಅಕ್ಟೋಬರ್ 2023, 6:31 IST
Last Updated 13 ಅಕ್ಟೋಬರ್ 2023, 6:31 IST
ಪರಶುರಾಂಪುರದ ಹಳೆಕೆರೆ ಕೋಡಿಯ ನೀರು ಹರಿಯುವ ಕಾಲುವೆಗೆ ಸೇತುವೆ ನಿರ್ಮಿಸಲು ರಸ್ತೆಯಲ್ಲಿ ತೆಗೆದಿರುವ ಗುಂಡಿ
ಪರಶುರಾಂಪುರದ ಹಳೆಕೆರೆ ಕೋಡಿಯ ನೀರು ಹರಿಯುವ ಕಾಲುವೆಗೆ ಸೇತುವೆ ನಿರ್ಮಿಸಲು ರಸ್ತೆಯಲ್ಲಿ ತೆಗೆದಿರುವ ಗುಂಡಿ    

ಪರಶುರಾಂಪುರ: ಪರಶುರಾಂಪುರದ ಹಳೆಕೆರೆ ಕೋಡಿಯ ನೀರು ಹರಿಯುವ ಕಾಲುವೆಗೆ ಸೇತುವೆ ನಿರ್ಮಿಸಲು ರಸ್ತೆಯಲ್ಲಿ ಗುಂಡಿ ತೆಗೆದು 2 ತಿಂಗಳು ಕಳೆದರೂ ಕಾಮಗಾರಿ ಆರಂಭಿಸದೆ ವಿಳಂಬ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಅಂತರ ರಾಜ್ಯ ಮತ್ತು ತುಮಕೂರು ಜಿಲ್ಲೆಯನ್ನು ಸಂಪರ್ಕಿಸುವ ಚಿತ್ರದುರ್ಗ ಮತ್ತು ಪಾವಗಡದ ಮುಖ್ಯರಸ್ತೆಯಲ್ಲಿ ಸೇತುವೆ ನಿರ್ಮಿಸಲು ಗುಂಡಿ ತೆಗೆದಿದ್ದು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ.

‘ವಾಹನಗಳು ಓಡಾಡಲು ಪಕ್ಕದಲ್ಲಿ ಮಣ್ಣಿನಿಂದ ತಾತ್ಕಲಿಕವಾಗಿ ರಸ್ತೆ ನಿರ್ಮಾಣ ಮಾಡಿದ್ದು, ಅಕ್ಕ ಪಕ್ಕದ ಮನೆಗಳಿಗೆ ದೂಳು ರಾಚುತ್ತಿದೆ. ಇದರಿಂದ ಊಟ ಮಾಡುವುದೂ ಕಷ್ಟವಾಗಿದೆ’ ಎಂದು ಇಲ್ಲಿನ ನಿವಾಸಿಗಳಾದ ಲೋಕೇಶ್, ನಾಗೇಶ್, ರಾಧಸ್ವಾಮಿ, ಜಂಪಣ್ಣ, ರುದ್ರಣ್ಣ ಅಳಲು ತೋಡಿಕೊಂಡರು.

ADVERTISEMENT

‘ಆಂಧ್ರಪ್ರದೇಶ ಮತ್ತು ತುಮಕೂರು ಕಡೆ ಓಡಾಡುವ ವಾಹನಗಳಿಗೆ ಇದೊಂದೇ ಮಾರ್ಗವಾಗಿರುವುದರಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ರಸ್ತೆ ಆಸುಪಾಸಿನ ಮನೆಯವರಿಗೆ ದೂಳಿನಿಂದ ತೊಂದರೆ ಉಂಟಾಗುತ್ತಿದೆ. ಹಲವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. ಇಲ್ಲವೇ ಸರ್ವೀಸ್ ರಸ್ತೆಯನ್ನು ತೆರವು ಗೊಳಿಸಬೇಕು’ ಎಂಬುದು ಇಲ್ಲಿನ ನಿವಾಸಿ ಒತ್ತಾಯವಾಗಿದೆ.

₹ 2 ಕೋಟಿ ವೆಚ್ಚದಲ್ಲಿ ಇದೇ ರಸ್ತೆಯಲ್ಲಿ ಗೌರಿಪುರದ ಹತ್ತಿರ ಮತ್ತು ಪರಶುರಾಂಪುರದ ಹತ್ತಿರ ಎರಡು ಸೇತುವೆಗಳನ್ನು ನಿರ್ಮಿಸಲು ಯೋಜನಾ ವರದಿಯನ್ನು ತಯಾರಿಸಲಾಗಿತ್ತು. ಆದರೆ ಸೇತುವೆ ಜಾಗದ ಮಣ್ಣು ಪರೀಕ್ಷೆ ಮಾಡಿಸಿದ ನಂತರ ಒಂದೊಂದು ಸೇತುವೆಗೆ ₹ 2 ಕೊಟಿ ಬೇಕಾಗುತ್ತದೆ. ಆದ್ದರಿಂದ ಮತ್ತೊಂದು ಭಾರಿ ಯೋಜನಾ ವರದಿ ತಯಾರಿಸಿ ನಂತರ ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ. ಈ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ರಾಜಪ್ಪ.

ಕಾಮಗಾರಿ ವಿಳಂಬವಾದರೂ ಪರವಾಗಿಲ್ಲ. ಆದರೆ ಸರ್ವೀಸ್ ರಸ್ತೆಗೆ ದಿನಕ್ಕೆ ಎರಡು ಭಾರಿ ನೀರು ಹಾಕಿದರೆ ದೂಳು ಕಡಿಮೆಯಾಗುತ್ತದೆ. ಆ ಕೆಲಸವನ್ನಾದರೂ ಮಾಡಲಿ.
- ಲೋಕೇಶ್, ಸ್ಥಳಿಯ ನಿವಾಸಿ
ಕಾಮಗಾರಿ ಪ್ರಾರಂಭಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ. ಆದರೆ ಯೋಜನಾ ವರದಿ ಬದಲಾಗಿದೆ ಎಂದು ಎಂಜಿನಿಯರ್ ತಿಳಿಸಿದ್ದರಿಂದ ವಿಳಂಬವಾಗಿದೆ.
- ಹನುಮಂತಪ್ಪ, ಗುತ್ತಿಗೆದಾರರು ಚಳ್ಳಕೆರೆ
ಗುತ್ತಿಗೆದಾರರಿಗೆ ಹೇಳಿ ಕಾಮಗಾರಿ ಆರಂಭವಾಗುವವರೆಗೂ ಸರ್ವೀಸ್ ರಸ್ತೆಗೆ ನೀರು ಹಾಕಲು ಸೂಚಿಸುತ್ತೇವೆ.
- ರಾಜಪ್ಪ, ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಚಳ್ಳಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.