ADVERTISEMENT

ಕರಿಯಾಲ: ‘ಇಲ್ಲ’ಗಳ ಊರಲ್ಲಿ ಸೌಲಭ್ಯ ಮರೀಚಿಕೆ

ಪಂಚಾಯಿತಿ ಕಚೇರಿಗೂ, ಅಂಗನವಾಡಿಗೂ ಸ್ವಂತ ಕಟ್ಟಡ ಇಲ್ಲ; ಶಾಲೆಯ ಸ್ಥಿತಿಯೂ ಅಯೋಮಯ...

ಸುವರ್ಣಾ ಬಸವರಾಜ್
Published 5 ನವೆಂಬರ್ 2024, 5:54 IST
Last Updated 5 ನವೆಂಬರ್ 2024, 5:54 IST
ಹಿರಿಯೂರು ತಾಲ್ಲೂಕಿನ ಕರಿಯಾಲ ಗ್ರಾಮ ಪಂಚಾಯಿತಿಯ ಕಟ್ಟಡ ನಿರುಪಯುಕ್ತವಾಗಿರುವುದು
ಹಿರಿಯೂರು ತಾಲ್ಲೂಕಿನ ಕರಿಯಾಲ ಗ್ರಾಮ ಪಂಚಾಯಿತಿಯ ಕಟ್ಟಡ ನಿರುಪಯುಕ್ತವಾಗಿರುವುದು   

ಹಿರಿಯೂರು: ಒಟ್ಟು 13 ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿರುವ ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯಿತಿ ಹತ್ತಾರು ಸಮಸ್ಯೆಗಳ ಆಗರವಾಗಿದೆ.

15 ಸದಸ್ಯ ಬಲದ ಈ ಪಂಚಾಯಿತಿಗೆ ಆಡಳಿತ ನಡೆಸುವ ಕಚೇರಿಗೆ ಸ್ವಂತ ಕಟ್ಟಡವಿಲ್ಲ. ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ಮೃತಪಟ್ಟವರ ಸಂಸ್ಕಾರಕ್ಕೆ ಅಗತ್ಯ ಸ್ಮಶಾನ ಜಾಗವಿಲ್ಲ.

ಈ ಊರಿನ ಅಂಗನವಾಡಿಗೂ ಸ್ವಂತ ಕಟ್ಟಡವಿಲ್ಲದ್ದರಿಂದ ಮಹಿಳಾ ಭವನದಲ್ಲಿ ನಡೆಯುತ್ತಿದೆ. 1957ರಲ್ಲೇ ಆರಂಭವಾಗಿರುವ ಸರ್ಕಾರಿ ಶಾಲೆಯ ಕಟ್ಟಡವೂ ಸಂಪೂರ್ಣ ಶಿಥಿಲವಾಗಿದೆ.

ADVERTISEMENT

1994ರಲ್ಲಿ ಗ್ರಾಮ ಪಂಚಾಯಿತಿ ವ್ಯವಸ್ಥೆ ಜಾರಿಗೆ ಬಂದ ನಂತರ ಈ ಊರು ಪಂಚಾಯಿತಿಯ ಮುಖ್ಯ ಕೇಂದ್ರವಾಯಿತು. ಆಗ 250ರಷ್ಟಿದ್ದ ಜನಸಂಖ್ಯೆ ಸದ್ಯ ಒಂದು ಸಾವಿರ ದಾಟಿದೆ. ಜನಸಂಖ್ಯೆ ಹೆಚ್ಚಿದಂತೆ ಸೌಲಭ್ಯಗಳು ಹೆಚ್ಚಲಿಲ್ಲ. ಊರಿನ ಪಂಚಾಯಿತಿಯೇ ಸಮಸ್ಯೆಗಳಿಂದ ತುಂಬಿಹೋಗಿ ಶಾಪಗ್ರಸ್ತವಾದಂತಿದೆ. 

ಓಣಿ ಹಟ್ಟಿ, ಮರಡಿಹಟ್ಟಿ, ಬೆಣ್ಣೆ ಈರಪ್ಪನ ಹಟ್ಟಿ, ಗಾಯತ್ರಿಪುರ, ಓಬಳಾಪುರ, ಓಬಳಾಪುರ ತಾಂಡ, ಕಿಲ್ಲಾರದಹಳ್ಳಿ, ಕಿಲಾರದ ಹಳ್ಳಿ ಗೊಲ್ಲರಹಟ್ಟಿ, ಮೂಡ್ಲಹಟ್ಟಿ, ಹಳೇ ಕರಿಯಾಲ, ಆಂಜನೇಯನ ಬಡಾವಣೆ, ಬಾಗಲಾರ ಹಟ್ಟಿಗಳು ಕರಿಯಾಲ ಗ್ರಾಮ ಪಂಚಾಯಿತಿಗೆ ಒಳಪಟ್ಟಿವೆ. 

14 ವರ್ಷದಲ್ಲೇ ಹಾಳಾಯಿತು ಕಟ್ಟಡ: 

1994ರಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಪಂಚಾಯಿತಿ ಆಡಳಿತ ಕಚೇರಿಯು, 1996ರಲ್ಲಿ ಸ್ವಂತದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಕಾಮಗಾರಿ ಕಳಪೆಯಾಗಿದ್ದ ಕಾರಣ ಕೆಲವೇ ವರ್ಷಗಳಲ್ಲಿ ಆ ಕಟ್ಟಡ ಸೋರತೊಡಗಿತು. ಕಡತಗಳು ಒದ್ದೆಯಾಗಿ ಹಾಳಾಗುತ್ತವೆ ಎಂಬ ಕಾರಣಕ್ಕೆ 2010ರಲ್ಲಿ ಗ್ರಾಮದಲ್ಲಿದ್ದ ವಾಲ್ಮೀಕಿ ಭವನಕ್ಕೆ ಗ್ರಾಮ ಪಂಚಾಯಿತಿ ಕಚೇರಿಯನ್ನು ಸ್ಥಳಾಂತರಿಸಲಾಯಿತು. ಐದು ವರ್ಷದಿಂದ ವಾಲ್ಮೀಕಿ ಭವನವೂ ಸೋರುತ್ತಿದ್ದು, ಕಡತಗಳನ್ನು ನಿರ್ವಹಿಸುವುದು ಪಂಚಾಯಿತಿ ಆಡಳಿತಕ್ಕೆ ದೊಡ್ಡ ಸವಾಲಾಗಿದೆ. 

ನೀಗದ ನೀರಿನ ಸಮಸ್ಯೆ: 

ಗಾಯತ್ರಿ ಜಲಾಶಯ ಕೂಗಳತೆಯ ದೂರದಲ್ಲಿದ್ದರೂ, ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. 4 ಕೊಳವೆಬಾವಿ ಕೊರೆಸಿದರೂ ನೀರು ಸಿಗದ ಕಾರಣಕ್ಕೆ ರೈತರ 4 ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿತ್ತು. ನಿರಂತರ ಮಳೆಯ ಕಾರಣಕ್ಕೆ ಒಂದು ಕೊಳವೆ ಬಾವಿಯಲ್ಲಿ ಸ್ವಲ್ಪ ನೀರು ಕಾಣಿಸಿಕೊಂಡಿದ್ದು, 15 ದಿನದಿಂದ ಪಂಚಾಯಿತಿ ಕೊಳವೆ ಬಾವಿಯಿಂದ ನೀರು ಕೊಡಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. 

ಸ್ವಚ್ಛತೆ ಇಲ್ಲ: 

‌ಗ್ರಾಮದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಚರಂಡಿಯಲ್ಲಿ ಆಳೆತ್ತರಕ್ಕೆ ಗಿಡಗಳು ಬೆಳೆದು, ಹೂಳು ತುಂಬಿಕೊಂಡಿದೆ. ಕಿರುನೀರು ಸರಬರಾಜು, ಶುದ್ಧ ಕುಡಿಯುವ ನೀರಿನ ಘಟಕಗಳ ಸುತ್ತಮುತ್ತ ಕೊಳಚೆ ತುಂಬಿದೆ. ಗ್ರಾಮದಲ್ಲಿ ಹಾದುಹೋಗಿರುವ ಗಾಯತ್ರಿ ಜಲಾಶಯದ ಬಲನಾಲೆ ತ್ಯಾಜ್ಯಮಯವಾಗಿದೆ. ಇಡೀ ಗ್ರಾಮ ಸೊಳ್ಳೆಗಳ ಉತ್ಪಾದನಾ ತಾಣವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಮಣ್ಣ ಹೇಳಿದರು. 

ನಿವೇಶನ ಸಮಸ್ಯೆ: 

‘ನಿವೇಶನದ ಕೊರತೆಯಿಂದ ಒಂದೇ ಮನೆಯಲ್ಲಿ ಮೂರ್ನಾಲ್ಕು ಕುಟುಂಬಗಳು ಚಿಕ್ಕಚಿಕ್ಕ ಜಾಗದಲ್ಲಿ ನೆಲೆಸುವಂತಾಗಿದೆ. ಗ್ರಾಮಕ್ಕೆ ಹೊಂದಿಕೊಂಡು ಸರ್ಕಾರಿ ಭೂಮಿ ಇದ್ದರೂ, ಕಂದಾಯ ಇಲಾಖೆಯವರು ನಿವೇಶನ ವ್ಯವಸ್ಥೆ ಕಲ್ಪಿಸಿಲ್ಲ. ಗ್ರಾಮಕ್ಕೆ ಮಂಜೂರು ಮಾಡಿರುವ ಸ್ಮಶಾನದ ಜಾಗ ಎಲ್ಲಿದೆ ಎಂದು ತೋರಿಸಿಲ್ಲ. ಜಾಗ ಹದ್ದುಬಸ್ತು ಮಾಡಿಕೊಟ್ಟರೆ ಪಂಚಾಯಿತಿಯಿಂದ ಅಭಿವೃದ್ಧಿ ಮಾಡಬಹುದು’ ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯಿತಿ ಆಡಳಿತ ನಡೆಯುತ್ತಿರುವ ವಾಲ್ಮೀಕಿ ಭವನ
ಕರಿಯಾಲ ಗ್ರಾಮದಲ್ಲಿ ಹಾದು ಹೋಗಿರುವ ಗಾಯತ್ರಿ ಜಲಾಶಯದ ಬಲನಾಲೆಯ ತುಂಬ ಗಿಡಗಳು ಬೆಳೆದಿರುವುದು
1994ರಲ್ಲಿ ಕುಡಿಯುವ ನೀರಿನ ಪೈಪ್‌ಲೈನನ್ನು ಅವೈಜ್ಞಾನಿಕವಾಗಿ ಅಳವಡಿಸಲಾಗಿದೆ. ಹೊಸದಾಗಿ ಪೈಪ್‌ಲೈನ್ ಕಾಮಗಾರಿ ಮಾಡಬೇಕಿದೆ. ಪಂಚಾಯಿತಿಗೆ ಸ್ವಂತ ಕಟ್ಟಡ ಬೇಕು. ಸರ್ಕಾರದಿಂದ ಅನುದಾನ ಬೇಕು
–ಭಾಗ್ಯಮ್ಮ ಅಧ್ಯಕ್ಷೆ ಗ್ರಾಮಪಂಚಾಯಿತಿ ಕರಿಯಾಲ

ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ 

‘ಕರಿಯಾಲ ಗ್ರಾಮ ಪಂಚಾಯಿತಿ ಗ್ರೇಡ್–2 ಪಂಚಾಯಿತಿಯಾಗಿದ್ದು 15ನೇ ಹಣಕಾಸು ಯೋಜನೆಯಲ್ಲಿ ಬಂದಿರುವ ₹ 30 ಲಕ್ಷದಲ್ಲಿ ಶೇ 14ರಷ್ಟು ವಿದ್ಯುತ್ ಬಿಲ್ ಅಂಗವಿಕಲರಿಗೆ ಶೇ 5ರಷ್ಟು ಎಸ್‌ಸಿ /ಎಸ್‌ಟಿ ಶೇ 25ರಷ್ಟು ಅನುದಾನ ಮೀಸಲಿಟ್ಟರೆ ಅಭಿವೃದ್ಧಿಗೆ ಹಣವೇ ಉಳಿಯುವುದಿಲ್ಲ. ಸತತ ಬರಗಾಲದ ಕಾರಣಕ್ಕೆ ಮನೆ ಕಂದಾಯ ವಸೂಲಿ ಆಗುತ್ತಿಲ್ಲ. ಇರುವ ಅನುದಾನದಲ್ಲಿಯೇ ಕುಡಿಯುವ ನೀರು ಸ್ವಚ್ಛತೆ ನಿರ್ವಹಣೆ ಮಾಡುತ್ತಿದ್ದೇವೆ. ಹಳೆಯ ಪಂಚಾಯಿತಿ ಕಟ್ಟಡದ ನೆಲಸಮಕ್ಕೆ ಪತ್ರ ಬರೆದಿದ್ದೇವೆ. ಹೊಸಕಟ್ಟಡಕ್ಕೆ ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೇವೆ’ ಎಂದು ಪಿಡಿಒ ಮಹಂತೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.