ADVERTISEMENT

ಮೊಳಕಾಲ್ಮುರು: ರಸ್ತೆಯಲ್ಲಿ ಬಿಡಾಡಿ ದನಗಳ ದಂಡು; ವಾಹನ ಸವಾರರ ಅಳಲು

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 13:58 IST
Last Updated 5 ಜುಲೈ 2024, 13:58 IST
ಮೊಳಕಾಲ್ಮುರಿನ ಮುಖ್ಯರಸ್ತೆಯಲ್ಲಿ ವಾಹನಗಳು ಓಡಾಡದಂತೆ ಬಿಡಾಡಿ ದನಗಳು ಅಡ್ಡಿ ಮಲಗಿರುವುದು
ಮೊಳಕಾಲ್ಮುರಿನ ಮುಖ್ಯರಸ್ತೆಯಲ್ಲಿ ವಾಹನಗಳು ಓಡಾಡದಂತೆ ಬಿಡಾಡಿ ದನಗಳು ಅಡ್ಡಿ ಮಲಗಿರುವುದು   

ಮೊಳಕಾಲ್ಮುರು: ಇಲ್ಲಿನ ರಾಯದುರ್ಗ– ಹಾನಗಲ್‌ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಬಿಡಾಡಿ ದನಗಳ ಹಾವಳಿ ವಿಪರೀತವಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ರಸ್ತೆಯಲ್ಲಿನ ಪಟ್ಟಣ ಪಂಚಾಯಿತಿ, ಬಸ್‌ ನಿಲ್ದಾಣ, ಬಿಇಒ ಕಚೇರಿ, ನೂತನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಆಟೊ ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ಬೆಳಿಗ್ಗೆಯಿಂದಲೂ ಹತ್ತಾರು ದನಗಳು ರಸ್ತೆಯಲ್ಲಿ ಮಲಗಿರುತ್ತವೆ. ದ್ವಿಚಕ್ರ ವಾಹನಗಳಿಗೆ ಅಡ್ಡ ಬಂದು ಅನೇಕರು ಬಿದ್ದಿರುವ ಉದಾಹರಣೆಗಳು ಸಹ ಇದೆ. ಇನ್ನು ದೊಡ್ಡ ವಾಹನಗಳ ಸವಾರರು ವಾಹನದಿಂದ ಇಳಿದು ದನಗಳನ್ನು ಆಚೆಗೆ ಹೊಡೆದು ಮುಂದಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ವಾಹನ ಸವಾರರು ದೂರಿದ್ದಾರೆ.

‘ಕೆಲ ಜಾನುವಾರು ಮಾಲೀಕರು ದನಗಳನ್ನು ಹಾಲು ಕರೆದುಕೊಂಡು ರಸ್ತೆಗೆ ಬಿಡುತ್ತಾರೆ. ಮತ್ತೆ ಸಂಜೆ ವಾಪಸ್‌ ಹೊಡೆದುಕೊಂಡು ಹೋಗುತ್ತಾರೆ. ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ದನಗಳ ಕಾಟದಿಂದಾಗಿ ರಸ್ತೆ ಬದಿಯಲ್ಲಿ ಸೊಪ್ಪು, ತರಕಾರಿ, ಹಣ್ಣು ವ್ಯಾಪಾರ ಮಾಡುವವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ರಸ್ತೆಬದಿ ವ್ಯಾಪಾರಿ ಪಾಪಕ್ಕ ಮನವಿ ಮಾಡಿದರು.

ADVERTISEMENT

ಈ ಬಗ್ಗೆ ಸ್ಪಷ್ಟನೆ ನೀಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಿಂಗರಾಜ್‌, ‘ಪಟ್ಟಣ ಪಂಚಾಯಿತಿಗೆ ಸೇರಿದ ದನಗಳನ್ನು ಕೂಡಿ ಹಾಕುವ ಮನೆ ಇಲ್ಲ, ಬಿಡಾಡಿ ದನಗಳ ಬಗ್ಗೆ ಬರುತ್ತಿರುವ ದೂರಿನ ಬಗ್ಗೆ ಪಟ್ಟಣ ಪಂಚಾಯಿತಿ ಆಡಳಿತ ಅಧಿಕಾರಿಯಾಗಿರುವ ತಹಶೀಲ್ದಾರ್‌ ಗಮನಕ್ಕೆ ತಂದಿದ್ದು, ಯಾವುದಾದರೂ ಗೋಶಾಲೆಗೆ ಅವುಗಳನ್ನು ಸೇರಿಸುವಂತೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.