ಪರಶುರಾಂಪುರ: ಹೋಬಳಿ ವ್ಯಾಪ್ತಿಯ ಗ್ರಾಮಗಳಿಂದ ಚಳ್ಳಕೆರೆ ಮತ್ತು ಚಿತ್ರದುರ್ಗದಲ್ಲಿನ ಶಾಲೆ– ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್ ಪಾಸ್ ನೀಡಲಾಗಿದೆ. ಆದರೆ, ಸಂಚಾರ ನಡೆಸಲು ಸಾರಿಗೆ ಸಂಸ್ಥೆಯ ಬಸ್‌ಗಳ ಸಮರ್ಪಕ ಸೌಲಭ್ಯವೇ ಇಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕುರಿತು ಗಮನಹರಿಸಬೇಕಿದೆ ಎಂಬುದು ಸಂಕಷ್ಟಕ್ಕೊಳಗಾಗಿರುವ ವಿದ್ಯಾರ್ಥಿಗಳ ಮನವಿಯಾಗಿದೆ.
ಪರಶುರಾಂಪುರವು ಅತಿ ದೊಡ್ಡ ಹೋಬಳಿ ಕೇಂದ್ರವಾಗಿದ್ದು, 60ಕ್ಕೂ ಹೆಚ್ಚು ಗ್ರಾಮಗಳನ್ನು ಒಳಗೊಂಡಿದೆ. ಪ್ರತಿದಿನ ನೂರಾರು ವಿದ್ಯಾರ್ಥಿಗಳು ಪದವಿ, ನರ್ಸಿಂಗ್, ಬಿ.ಇಡಿ ಸೇರಿದಂತೆ ವಿವಿಧ ಕೋರ್ಸ್ ಅಧ್ಯಯನಕ್ಕೆ ತಾಲ್ಲೂಕು ಕೇಂದ್ರ ಚಳ್ಳಕೆರೆ ಮತ್ತು ಜಿಲ್ಲಾ ಕೇಂದ್ರ ಚಿತ್ರದುರ್ಗಕ್ಕೆ ಹೋಗಿ ಬರುತ್ತಾರೆ.
ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳು ಪಾಸ್ ನೀಡಿರುವುದರಿಂದ ನಿತ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲೇ ಪ್ರಯಾಣಿಸುತ್ತಾರೆ. ಕಾಲೇಜಿಗೆ ಹೋಗುವ ಸಮಯಕ್ಕೆ ಕೇವಲ ಒಂದು ಬಸ್ ಲಭ್ಯವಿದ್ದು, ಅದರಲ್ಲಿ ಜಾಗವಿಲ್ಲದೆ ಬಾಗಿಲಲ್ಲಿ ನೇತಾಡಿಕೊಂಡು ಹೋಗುವ ಸ್ಥಿತಿ ಇದೆ. ಮಹಿಳೆಯರಿಗೆ ಗೆ ಉಚಿತ ಪ್ರಯಾಣ ಸೌಲಭ್ಯ ನೀಡಿದಾಗಿನಿಂದ ಬಸ್‌ಗಳಲ್ಲಿ ದಟ್ಟನೆ ಹೆಚ್ಚಿ ಸಮಸ್ಯೆ ತಲೆದೋರಿದೆ. ಇದಕ್ಕೆ ಪರಿಹಾರ ಕಲ್ಪಿಸಲು ಮತ್ತೊಂದು ಬಸ್ ಬಿಡಬೇಕು ಎಂಬುದು ವಿದ್ಯಾರ್ಥಿಗಳಾದ ರಮೇಶ, ಯುವರಾಜ, ಶಂಕರ, ತೇಜಸ್ವಿನಿ, ರೋಜಾ, ಲಾವಣ್ಯ ಮತ್ತಿತರರ ಆಗ್ರಹ.
60 ಕಿ.ಮೀ. ನಿಗದಿ ಸಮಸ್ಯೆ: ಹೋಬಳಿಯ ಟಿ.ಎನ್. ಕೋಟೆ, ದೊಡ್ಡಚೆಲ್ಲೂರು, ಚಿಕ್ಕಚೆಲ್ಲೂರು, ಗೌರಿಪುರ, ಕ್ಯಾದಿಗುಂಟೆ, ಸಿದ್ದೇಶ್ವರನದುರ್ಗ, ಪಿಲ್ಲಹಳ್ಳಿ ಪರಶುರಾಂಪುರ, ಕೊರ್ಲಕುಂಟೆ, ಚೌಳೂರು ಮತ್ತಿತರ ಗ್ರಾಮಗಳ ವಿದ್ಯಾರ್ಥಿಗಳು ಹೋಬಳಿಯ ಜುಂಜರಗುಂಟೆ ಗೇಟ್‌ವರೆಗೂ ಹಣ ಕೊಟ್ಟು ಸಂಚರಿಸಬೇಕು, ಅಲ್ಲಿಂದ ಪಾಸ್ ತೋರಿಸಿ ಪ್ರಯಾಣಿಸುತ್ತಾರೆ. ಬಸ್‌ಪಾಸ್‌ಗೆ ಕೇವಲ 60 ಕಿ.ಮೀ. ನಿಗದಿ ಪಡಿಸಿರುವುದೇ ಈ ಸಮಸ್ಯೆಗೆ ಕಾರಣ.
‘ನಾವು ಇದೇ ಜಿಲ್ಲೆಯವರು. ಆದರೂ ನಮಗೇಕೆ ಈ ರೀತಿ ನಿಯಮ ಎಂಬುದು ಅರ್ಥವಾಗುತ್ತಿಲ್ಲ. ಜಿಲ್ಲೆ ರಿಸುವಾಗ 60 ಕಿ.ಮೀ ಗಡಿ ಗುರುತಿಸಿ ರಚಿಸಬೇಕಿತ್ತು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ರಾಜ್ಯದಾದ್ಯಂತ ಪ್ರಯಾಣ ಶುಲ್ಕ ಇಲ್ಲ. ವಿದ್ಯಾರ್ಥಿಗಳಿಗೆ ಈ ನಿಯಮವೇಕೆ? ಎಂಬುದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.
ಬಸ್‌ಗಳ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ಮತ್ತೊಂದು ಬಸ್ ಈ ಸಮಯಕ್ಕೆ ಬಿಡೋದು ಕಷ್ಟ. ರಿಯಾಯಿತಿ ದರದ ಪಾಸ್ ನೀಡಲು 60 ಕಿ.ಮೀ. ಮಿತಿ ಹೇರಿರುವುದನ್ನು ಹೇಳಿಯೇ ಕೊಡಲಾಗಿದೆ.-ಪ್ರಭು, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಚಳ್ಳಕೆರೆ
ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ 60 ಕಿ.ಮೀ ಮಾತ್ರ ನಿಗದಿಪಡಿಸಿರುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ತಮ್ಮ ಊರಿನಿಂದ ಜಿಲ್ಲಾ ಕೇಂದ್ರಗಳಿಗೆ ಪಾಸ್ ತೋರಿಸಿ ಪ್ರಯಾಣಿಸಲು ಅವಕಾಶ ನೀಡಬೇಕು-ಶಿವರಾಜ, ವಿದ್ಯಾರ್ಥಿ ಪರಶುರಾಂಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.