ಹಿರಿಯೂರು: ‘ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 3,500 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆಯಾಗಿದೆ. ದೇಶದಲ್ಲಿ ಸೂರ್ಯಕಾಂತಿ ಬೆಳೆಯಲ್ಲಿ ಶೇ 48ರಷ್ಟು ಪಾಲು ಪಡೆದಿರುವ ಕರ್ನಾಟಕ ಅಗ್ರ ಸ್ಥಾನದಲ್ಲಿದೆ’ ಎಂದು ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ್ ತಿಳಿಸಿದರು.
ತಾಲ್ಲೂಕಿನ ಬಬ್ಬೂರು ಫಾರಂ ಕೃಷಿ ತರಬೇತಿ ಕೇಂದ್ರದಲ್ಲಿ ಸೋಮವಾರ ಹೈದರಾಬಾದ್‌ನ ಎಣ್ಣೆಕಾಳು ಬೆಳೆಗಳ ಸಂಶೋಧನಾ ಕೇಂದ್ರ ಮತ್ತು ಅಖಿಲ ಭಾರತೀಯ ಸುಸಂಘಟಿತ ಸೂರ್ಯಕಾಂತಿ ವಿಭಾಗ ಹಾಗೂ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೂರ್ಯಕಾಂತಿ ಮತ್ತು ಹರಳು ಬೆಳೆ ಸುಧಾರಿತ ಬೇಸಾಯ ತಾಂತ್ರಿಕತೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ವ್ಯಾಪಕ ಪ್ರಚಾರ ಮಾಡಿ ಆಸಕ್ತ ರೈತರನ್ನು ಆಹ್ವಾನಿಸಿ, ಹಂಗಾಮು ಆಧಾರಿತ ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳ ಕುರಿತು ಸಾಂಸ್ಥಿಕ ಮತ್ತು ಗೂಗಲ್ ಮೀಟ್ ಮೂಲಕ ಆನ್‌ಲೈನ್ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸೂರ್ಯಕಾಂತಿ ಎಣ್ಣೆಗೆ ತುಂಬಾ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆ ಹೆಚ್ಚಿಸಬೇಕಿದೆ’ ಎಂದು ಹೇಳಿದರು.
‘ಕೇಂದ್ರ ಸರ್ಕಾರ ಪ್ರಸಕ್ತ ಹಂಗಾಮಿಗೆ ಸೂರ್ಯಕಾಂತಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ ₹ 7,280 ನಿಗದಿ ಪಡಿಸಿದೆ. ಇದಲ್ಲದೆ ಜಿಲ್ಲೆಯಲ್ಲಿ 650 ಹೆಕ್ಟೇರ್ ಪ್ರದೇಶದಲ್ಲಿ ಹರಳು ಬಿತ್ತನೆ ಆಗಿದ್ದು, ಶೇಂಗಾ ಜೊತೆ ಮಿಶ್ರ ಬೆಳೆಯಾಗಿ ಹರಳು ಹಾಕಿದಲ್ಲಿ ಹೆಚ್ಚು ಲಾಭ ಪಡೆಯಬಹುದು. ಏಕಬೆಳೆಯಾಗಿ ಅಥವಾ ಬದುಗಳ ಮೇಲೂ ಹರಳು ಬೆಳೆಯಬಹುದು. ಕೆಬಿಎಸ್‌ಎಚ್– 78 ಸೂರ್ಯಕಾಂತಿ ತಳಿ, ಐಸಿಎಚ್– 5, ಐಸಿಎಚ್– 66 ಹರಳುಬೆಳೆಯ ಸಂಕರಣ ತಳಿಗಳನ್ನು ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಒಟ್ಟು 750 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು, ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ರೈತರು ಪ್ರಾತ್ಯಕ್ಷಿಕೆ ಮೂಲಕ ಬೆಳೆಗಳ ಮಾಹಿತಿ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.
ಬೇಸಾಯ ಶಾಸ್ತ್ರಜ್ಞ ಕೆ.ಎಸ್.ಸೋಮಶೇಖರ್ ಮಾತನಾಡಿ, ‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹೊಸದಾಗಿ ಬಿಡುಗಡೆ ಮಾಡಿರುವ ಕೆಬಿಎಸ್ಎಚ್–90 ಸೂರ್ಯಕಾಂತಿ ತಳಿಯ ಪ್ರಾತ್ಯಕ್ಷಿಕೆಯನ್ನು ಹಿರಿಯೂರು ತಾಲ್ಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ಏರ್ಪಡಿಸಲಾಗಿದೆ. ನೀರು ಬಸಿದು ಹೋಗುವಂತಹ ಎಲ್ಲ ತರಹದ ಫಲವತ್ತಾದ ಮಣ್ಣಿನಲ್ಲಿ ವರ್ಷದ ಮೂರೂ ಹಂಗಾಮಿನಲ್ಲೂ ಸೂರ್ಯಕಾಂತಿ ಬೆಳೆಯಬಹುದು. ಇಲ್ಲಿ ತಿಳಿಸಿರುವ ತಳಿಗಳು ಅಲ್ಪಾವಧಿ ಆಗಿದ್ದು, ಕೃಷಿ ತಜ್ಞರು ಹೇಳುವ ಸಲಹೆಗಳನ್ನು ತಪ್ಪದೆ ಪಾಲಿಸಿದರೆ ಉತ್ತಮ ಇಳುವರಿ ಪಡೆಯಬಹುದು’ ಎಂದರು.
ಸಸ್ಯರೋಗ ಶಾಸ್ತ್ರಜ್ಞರಾದ ಸಿ.ಪಿ. ಮಂಜುಳಾ ಬೀಜೋಪಚಾರದ ಪ್ರಾಮುಖ್ಯತೆ ಬಗ್ಗೆ, ರುದ್ರಮುನಿ ಅವರು ರೋಗ ನಿಯಂತ್ರಣ ಕುರಿತು ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ ಒ.ಕುಮಾರ್ ಕಾರ್ಯಾಗಾರ ಉದ್ಘಾಟಿಸಿದರು. ಬೆಂಗಳೂರಿನ ವಿಜ್ಞಾನಿ ಎಸ್.ಡಿ.ನೆಹರೂ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎನ್.ಪಿ.ಶಿವಶಂಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.