ಹೊಳಲ್ಕೆರೆ: ರೈತ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗಬೇಕು ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಗುಂಡೇರಿಯಲ್ಲಿ ಕೋಡಿ ಬಿದ್ದಿರುವ ಕೆರೆಗೆ ಶನಿವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
‘ರೈತ ಬಿಸಿಲು, ಚಳಿ, ಮಳೆ ಎನ್ನದೆ ಹೊಲದಲ್ಲಿ ಕಟ್ಟಪಟ್ಟು ದುಡಿಯುತ್ತಾನೆ. ಆದರೆ, ಕೊನೆಯಲ್ಲಿ ಅವನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಪ್ರಕೃತಿ ವಿಕೋಪದಿಂದಲೂ ರೈತ ಬೆಳೆ ಕಳೆದುಕೊಳ್ಳುತ್ತಾನೆ. ಮಠದ ಜಮೀನಿನಲ್ಲಿ ರಾಗಿ ಬೆಳೆಯಲಾಗಿತ್ತು. ಬೆಳೆ ಚೆನ್ನಾಗಿ ಬಂದಿತ್ತು. ಆದರೆ, ಕಟಾವಿನ ಸಮಯದಲ್ಲಿ ಹೆಚ್ಚು ಮಳೆ ಸುರಿದಿದ್ದರಿಂದ ಬೆಳೆ ನೆಲಕ್ಕೆ ಬಿದ್ದು ಹಾಳಾಯಿತು. ರೈತ ಉತ್ತಮ ಮಳೆ, ಬೆಳೆಗೆ ಸೂಕ್ತ ಬೆಲೆ ನಿರೀಕ್ಷಿಸುತ್ತಾನೆ. ಎರಡೂ ಬಂದರೆ ಸಂತೃಪ್ತನಾಗುತ್ತಾನೆ. ಈಚೆಗೆ ಪ್ರಕೃತಿಯ ಮುನಿಸು ಹೆಚ್ಚಾಗುತ್ತಿದೆ. ಇದಕ್ಕೆ ಮನುಷ್ಯನ ದುರಾಸೆಯೇ ಕಾರಣ. ಕಾಡುಗಳನ್ನು ಕಡಿದು ಬಯಲು ಮಾಡುತ್ತಿರುವುದರಿಂದ ಪ್ರವಾಹ ಹೆಚ್ಚಾಗಿ ಕಷ್ಟ, ನಷ್ಟಗಳು ಸಂಭವಿಸುತ್ತಿವೆ’ ಎಂದರು.
‘ಈ ಬಾರಿ ಉತ್ತಮ ಮಳೆ ಬಂದಿರುವುದರಿಂದ ಕೆರೆಗಳು ತುಂಬಿವೆ. ಕೆರೆ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ನೀರನ್ನು ಅಪವ್ಯಯ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು. ನೀರಿನ ಶುಚಿತ್ವ ಕಾಪಾಡಬೇಕು. ನಾವು ಕೊಳ್ಳುಬಾಕ ಸಂಸ್ಕೃತಿಗೆ ಶರಣಾಗಿದ್ದು, ದುಂದುವೆಚ್ಚ ಮಾಡುತ್ತಿದ್ದೇವೆ. ಸರಳ ಜೀವನ ನಡೆಸುವುದನ್ನು ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.
ಬಿಜೆಪಿ ಯುವ ಮುಖಂಡ ರಘುಚಂದನ್ ಮಾತನಾಡಿ, ‘ಗುಂಡೇರಿ ಕೆರೆ 2010ರಲ್ಲಿ ತುಂಬಿದ್ದು ಬಿಟ್ಟರೆ ಈಗ ತುಂಬಿದೆ. 2013ರಿಂದ 2018ರ ವರೆಗೆ ಬರಗಾಲ ಬಂದಿತ್ತು. ಅಡಿಕೆ ತೋಟಗಳೇ ಆಸರೆಯಾಗಿರುವ ತಾಲ್ಲೂಕಿನ ರೈತರು ಆಗ ತೋಟ ಉಳಿಸಿಕೊಳ್ಳಲು ಇನ್ನಿಲ್ಲದ ಸಾಹಸ ಮಾಡಿದರು. ಒಡವೆ ಅಡವಿಟ್ಟು ಸಾಲ ಮಾಡಿ ಹೊಸದಾಗಿ ಕೊಳವೆಬಾವಿ ಕೊರೆಯಿಸಿದರು. ಅಲ್ಲಿಯೂ ನೀರು ಸಿಗದಿದ್ದಾಗ ಒಂದು ಟ್ಯಾಂಕರ್‌ಗೆ ₹ 3,000, ₹ 4,000 ಕೊಟ್ಟು ನೀರು ಹಾಯಿಸಿದರು. ಕೆಲವರ ತೋಟಗಳು ಉಳಿದರೆ, ಮತ್ತೆ ಕೆಲವರ ತೋಟಗಳು ಒಣಗಿದವು. ಈಗ ದೇವರ ದಯೆಯಿಂದ ಉತ್ತಮ ಮಳೆ ಬಂದಿದ್ದು, ರೈತರ ಮೊಗದಲ್ಲಿ ಸಂತಸ ಕಾಣುತ್ತಿದೆ’ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಎಂ.ಬಿ. ಸಿದ್ದೇಶ್, ತಹಶೀಲ್ದಾರ್ ರಮೇಶಾಚಾರಿ, ನಿವೃತ್ತ ಎಂಜಿನಿಯರ್ ದೇವೇಂದ್ರಪ್ಪ, ಡಿ.ಎನ್. ಶಂಕರಪ್ಪ, ಹೊನ್ನಾಳಿ ಶಂಕ್ರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರಪ್ಪ, ಉಪಾಧ್ಯಕ್ಷೆ ಮಮತಾ ಸಿದ್ದಪ್ಪ, ಎಪಿಎಂಸಿ ಚಿದಾನಂದ್, ಕುಮಾರಣ್ಣ, ಚಂದ್ರಶೇಖರ, ಗಿರೀಶ್, ರಾಜಣ್ಣ, ಜಯಣ್ಣ, ಪರಿಮಳ, ಶಶಿಕಲಾ, ಲಲಿತಮ್ಮ, ನಟರಾಜು, ಹಾಲೇಶ್ ಇದ್ದರು.
*
ನಾವು ಪ್ರಕೃತಿಯನ್ನು ಕಾಪಾಡಿದರೆ ಅದು ನಮಗೆ ವರವಾಗುತ್ತದೆ. ಘಾಸಿಗೊಳಿಸಿದರೆ ಶಾಪವಾಗಿ ಕಾಡುತ್ತದೆ.
ಸಾಣೇಹಳ್ಳಿ ಶ್ರೀ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.