ADVERTISEMENT

ಚಿತ್ರದುರ್ಗ: ಮಾರಿಕಣಿವೆ ಹಿನ್ನೀರಿನಲ್ಲಿ ದೋಣಿ ವಿಹಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 14:29 IST
Last Updated 25 ನವೆಂಬರ್ 2024, 14:29 IST

ಚಿತ್ರದುರ್ಗ: ವಾಣಿ ವಿಲಾಸ ಸಾಗರ ಹಿನ್ನೀರು ಪ್ರದೇಶದಲ್ಲಿ ಯಾವುದೇ ಸುರಕ್ಷತಾ ಸೌಲಭ್ಯಗಳಿಲ್ಲದೇ ಅನಧಿಕೃತವಾಗಿ ನಡೆಯುತ್ತಿದ್ದ ದೋಣಿ ವಿಹಾರವನ್ನು ಹೊಸದುರ್ಗ ಪೊಲೀಸ್‌ ಠಾಣೆ ಪೊಲೀಸರು ಸ್ಥಗಿತಗೊಳಿಸಿದ್ದಾರೆ.

‘ಮಾರಿ ಕಣಿವೆ; ಅಪಾಯಕಾರಿ ದೋಣಿ ವಿಹಾರ’ ಶೀರ್ಷಿಕೆಯಡಿ ಈಚೆಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ವರದಿಯಿಂದ ಎಚ್ಚೆತ್ತುಕೊಂಡು ಪೊಲೀಸರು ದೋಣಿ ವಿಹಾರ ನಡೆಸುತ್ತಿದ್ದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ, ವಿಶ್ವೇಶ್ವರಯ್ಯ ನೀರಾವರಿ ನಿಗಮದಿಂದ ಅನುಮತಿ ಪಡೆಯದೇ ದೋಣಿ ವಿಹಾರ ನಡೆಸಕೂಡದು ಎಂದು ತಾಕೀತು ಮಾಡಿದ್ದಾರೆ.

ಹಿನ್ನೀರು ಪ್ರದೇಶದಲ್ಲಿ ಕೆಲ ಪ್ರವಾಸಿಗರು ಈಗಲೂ ಮೋಜು, ಮಸ್ತಿ ಮುಂದುವರಿಸಿದ್ದಾರೆ. ಮರ, ಗಿಡಗಳು ನೀರಿನಲ್ಲಿ ಮುಳುಗಿದ್ದು ಅಂತಹ ಪ್ರದೇಶದಲ್ಲಿ ನೀರಿಗೆ ಇಳಿದು ಈಜುತ್ತಿದ್ದಾರೆ. ಜಲಾಶಯ ಕೋಡಿ ಬೀಳಲು 1.50 ಅಡಿ ಮಾತ್ರ ಬಾಕಿ ಉಳಿದಿದ್ದು ಹಿನ್ನೀರು ಪ್ರದೇಶದಲ್ಲಿ ಅಪಾಯಕಾರಿ ಪರಿಸ್ಥಿತಿ ಇದೆ.

ADVERTISEMENT

‘ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆದು ಆ ಕುರಿತ ದಾಖಲೆಗಳನ್ನು ಠಾಣೆಗೆ ಹಾಜರುಪಡಿಸುವವರೆಗೂ ದೋಣಿ ವಿಹಾರ ನಡೆಸುವಂತಿಲ್ಲ ಎಂದು ಸೂಚಿಸಲಾಗಿದೆ. ಹಿನ್ನೀರು ಪ್ರದೇಶದಲ್ಲಿ ಪೊಲೀಸ್‌ ಬೀಟಿಂಗ್‌ ಹೆಚ್ಚಿಸಲಾಗಿದೆ. ಶೀಘ್ರ ಅಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು’ ಎಂದು ಹೊಸದುರ್ಗ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಭೀಮನಗೌಡ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.