ಮೊಳಕಾಲ್ಮುರು: ದಾಖಲೆಯ ಜಿಗಿತ ಕಂಡಿದ್ದ ಟೊಮೆಟೊ ದರ ಏಕಾಏಕಿ ಕುಸಿದಿದ್ದು, ಬೆಳೆಗಾರರು ಚಿಂತಿತರಾಗಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಕೋಲಾರ ಮತ್ತು ಸ್ಥಳೀಯ ಹಲವು ಮಾರುಕಟ್ಟೆಗಳಿಗೆ ಪ್ರಮುಖವಾಗಿ ಚಳ್ಳಕೆರೆ, ಮೊಳಕಾಲ್ಮುರು ಮತ್ತು ನೆರೆಯ ಸೀಮಾಂಧ್ರ ಗಡಿ ಗ್ರಾಮಗಳ ಟೊಮೆಟೊ ಪೂರೈಕೆಯಾಗುತ್ತಿತ್ತು. ಅವಳಿ ತಾಲ್ಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೋಲಾರ ಮಾದರಿಯಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ತಿಂಗಳ ಹಿಂದೆ ಪ್ರತಿ 15 ಕೆ.ಜಿ ಟೊಮೆಟೊ ಬಾಕ್ಸ್‌ಗೆ ₹ 2,700 ದರ ಇತ್ತು. ಹಲವು ಬೆಳೆಗಾರರಿಗೆ ಪ್ರತಿ ಬಾಕ್ಸ್‌ಗೆ ₹ 2,000 ದರ ಸಿಕ್ಕಿದೆ. ಈಗ ಪ್ರತಿ ಬಾಕ್ಸ್ ದರ ₹ 100ರಿಂದ ₹ 600ಕ್ಕೆ ಕುಸಿತವಾಗಿದ್ದು, ಹೊಸದಾಗಿ ನಾಟಿ ಮಾಡಿದವರು ದಿಕ್ಕು ತೋಚದಂತಾಗಿದ್ದಾರೆ.
ಪ್ರಸ್ತುತ ಮೊಳಕಾಲ್ಮುರು ತಾಲ್ಲೂಕಿನಲ್ಲಿ 400 ಮತ್ತು ಚಳ್ಳಕೆರೆ ತಾಲ್ಲೂಕಿನಲ್ಲಿ 4,500 ಹೆಕ್ಟೇರ್ ಸೇರಿ 4,900 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ನಾಟಿ ಮಾಡಲಾಗಿದೆ. 2 ತಿಂಗಳ ಹಿಂದೆ 350ರಿಂದ 400 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ನಾಟಿಯಾಗಿತ್ತು. ಏಪ್ರಿಲ್ ತಿಂಗಳಲ್ಲಿ ನಾಟಿ ಮಾಡಿದ್ದ ಬೆಳೆಗಾರರಿಗೆ ಮಾತ್ರ ಲಾಟರಿ ದರ ಸಿಕ್ಕಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರ್.ವಿರೂಪಾಕ್ಷಪ್ಪ ತಿಳಿಸಿದರು.
ಟೊಮೆಟೊ ಬೆಳೆಗೆ ರೋಗ ಬಾಧೆ ಸಾಮಾನ್ಯ. ಸಾವಯವ ಗೊಬ್ಬರ ಬಳಕೆ ಮಾಡುವ ತೋಟಗಳಲ್ಲಿ ರೋಗಬಾಧೆ ಕಡಿಮೆ. ರಾಸಾಯನಿಕ ಗೊಬ್ಬರ ಬಳಸುವ ತೋಟಗಳಲ್ಲಿ ರೋಗ ಕಾಣಿಸಿಕೊಳ್ಳುವ ಜತೆಗೆ ಗಿಡಗಳ ಆಯಸ್ಸು ಕಡಿಮೆಯಾಗುತ್ತಿದೆ. ಈ ಬಗ್ಗೆ ಬೆಳೆಗಾರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.
ಮಳೆ ಇಲ್ಲದಿರುವುದರಿಂದ ಮಾರುಕಟ್ಟೆಗೆ ಹೆಚ್ಚು ಟೊಮೆಟೊ ಬೆಳೆ ಬರುತ್ತಿದೆ. ಇದರಿಂದ ದರ ಕುಸಿದಿದೆ. ಮುಂದಿನ ಕೆಲ ತಿಂಗಳುಗಳಲ್ಲಿ ಬಾಕ್ಸ್ ಟೊಮೆಟೊ ದರ ₹ 500ರಿಂದ ₹ 600ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಚಿಕ್ಕಮ್ಮನಹಳ್ಳಿಯ ಎಸ್ಆರ್‌ಟಿ ಟೊಮೆಟೊ ಸಗಟು ಮಾರುಕಟ್ಟೆ ಮಾಲೀಕ ವೆಂಕಟೇಶ್ ರೆಡ್ಡಿ ತಿಳಿಸಿದರು.
ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಹೆಚ್ಚು ದರವಿದ್ದಾಗ ಕೂಲಿ ಹೆಚ್ಚು ನೀಡಿದ್ದೇವೆ. ದರ ಕುಸಿತವಾದಾಗಲೂ ಅದೇ ಕೂಲಿ ಕೇಳುತ್ತಿರುವುದು ಸಂಕಷ್ಟಕ್ಕೀಡು ಮಾಡಿದೆ.ತಿಪ್ಪೇಸ್ವಾಮಿ ಬೆಳೆಗಾರ ಮಾರಮ್ಮನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.