ಬೆಳಕಿನ ಹಬ್ಬ ಸಾಂಸ್ಕೃತಿಕವಾಗಿ ಆಚರಿಸಲಾಗುವ ದೀಪಾವಳಿ ಮಧ್ಯಕರ್ನಾಟಕದ ಜನರ ವಿಶೇಷ. ಈ ಹಬ್ಬದಲ್ಲಿ ವಿಶಿಷ್ಟ ಸಂಪ್ರದಾಯ ಪಾಲನೆಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ತಿಂಗಳವರೆಗೂ ದೀಪಾವಳಿ ಆಚರಿಸಲಾಗುತ್ತದೆ. ಕವಸೆ ಹುಲ್ಲು, ತಂಕಟೆ ಹೂವು ಇಲ್ಲದೆ ದೀಪಾವಳಿ ಪೂರ್ಣಗೊಳ್ಳುವುದಿಲ್ಲ.
ಸಾಮಾನ್ಯವಾಗಿ ಲಕ್ಷ್ಮೀ ಪೂಜೆಗೆ ಕವಸೇ ಹುಲ್ಲನ್ನು ಬಳಸುತ್ತಾರೆ. ಇದಕ್ಕೆ ಅಂಚಿಕಡ್ಡಿ ಹುಲ್ಲು, ಕೌಶಿ ಹುಲ್ಲು ಎಂದೂ ಕರೆಯುತ್ತಾರೆ. ತೆನೆಯೊಡೆದ ಕವಸೆ ಹುಲ್ಲಿನ ಜಡೆ ಹೆಣೆದು ಗಂಟುಕಟ್ಟಿ ಮನೆಗಳ ಮುಂದೆ, ಬಾಗಿಲಿನ ಹೊಸ್ತಿಲಿನ ಎರಡೂ ಬದಿಗಳಲ್ಲಿ, ಮನೆಯ ಒಳಗಿನ ಮೂಲೆಗಳಲ್ಲಿ ಇಡುವುದು ವಾಡಿಕೆ. ಇದು ಲಕ್ಷ್ಮಿಯ ರೂಪವೆಂದು ನಂಬಲಾಗಿದ್ದು, ಶ್ರದ್ಧೆಯಿಂದ ಪೂಜೆ ಸಲ್ಲಿಸುತ್ತಾರೆ.
ದೀಪಾವಳಿ ವೇಳೆಗೆ ಬೆಟ್ಟ– ಗುಡ್ಡಗಳು, ಗುಡ್ಡದ ಅಂಚು, ಹೊಲಗಳ ಬದುಗಳಲ್ಲಿ ಕವಸೇಹುಲ್ಲು ಯಥೇಚ್ಛವಾಗಿ ಬೆಳೆಯುತ್ತದೆ. ಮೂರ್ನಾಲ್ಕು ಅಡಿ ಎತ್ತರ ಬೆಳೆಯುವ ಈ ಹುಲ್ಲು ಅಕ್ಟೋಬರ್, ನವಂಬರ್ ವೇಳೆಗೆ ತೆನೆಯೊಡೆಯುತ್ತದೆ. ದೀಪಾವಳಿಗೆ ಈ ಹುಲ್ಲು ಅಗತ್ಯವಾಗಿ ಬೇಕಾಗಿದ್ದು, ಹಳ್ಳಿಯ ಜನ ಹಬ್ಬದ ದಿನ ಈ ಹುಲ್ಲನ್ನು ಪಟ್ಟಣಕ್ಕೆ ತಂದು ಒಂದು ಕಟ್ಟಿಗೆ ₹ 50ರವರೆಗೂ (ಕೆಲವೊಮ್ಮೆ ಕಡಿಮೆ ಇರುತ್ತದೆ) ಮಾರಾಟ ಮಾಡುತ್ತಾರೆ. ಗ್ರಾಮೀಣ ಭಾಗದಲ್ಲಿ ಹೊಲಗಳ ಬದುಗಳಲ್ಲೇ ಈ ಹುಲ್ಲು ಸಿಗುವುದರಿಂದ ಖರೀದಿಸುವ ಅಗತ್ಯ ಬರುವುದಿಲ್ಲ.
ಕವಸೆ ಹುಲ್ಲು ಮನೆಯಲ್ಲಿನ ಕೆಟ್ಟ ಶಕ್ತಿಗಳನ್ನು ದೂರಮಾಡಿ, ಸಕಾರಾತ್ಮಕ ಭಾವನೆಗಳನ್ನು ಮೂಡಿಸುತ್ತದೆ ಎಂಬ ನಂಬಿಕೆ ಇದೆ. ಈ ಹುಲ್ಲನ್ನು ಪೂಜೆಗೆ ಬಳಸಲು ವೈಜ್ಞಾನಿಕ ಕಾರಣವೂ ಇದೆ. ಕಾರ್ತಿಕ ಮಾಸದಲ್ಲಿ ವಾತಾವರಣದ ಬಿಸಿ ಕಡಿಮೆಯಾಗಿ ಚಳಿ ಆರಂಭವಾಗುತ್ತದೆ. ಕವಸೇ ಹುಲ್ಲನ್ನು ಮನೆಯೊಳಗೆ ಇಡುವುದರಿಂದ ಮನೆಯಲ್ಲಿ ಬೆಚ್ಚಗಿನ ವಾತಾವರಣ ಇರಲಿದೆ. ಇದು ಮನೆಯಲ್ಲಿ ಕ್ರಿಮಿಕೀಟಗಳು ಬರದಂತೆಯೂ ತಡೆಯುತ್ತದೆ.
ಮನೆಯಂಗಳಕ್ಕೆ ತಂಕಟೆ ಹೂ:
ದೀಪಾವಳಿ ವೇಳೆಗೆ ಗುಡ್ಡಗಾಡಿನ ಬಯಲು ಪ್ರದೇಶದಲ್ಲಿ ಹಳದಿ ಬಣ್ಣದ ತಂಕಟೆ ಹೂಗಳು ಅರಳುತ್ತವೆ. ಈ ಹೂವುಗಳನ್ನು ತಂದು ಮನೆಯ ಅಂಗಳ, ದನದ ಕೊಟ್ಟಿಗೆಯಲ್ಲಿ ಹರಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಆಚರಣೆಯಾಗಿದೆ. ಮನೆಯ ಅಂಗಳವನ್ನು ಸಗಣಿಯಿಂದ ಸಾರಿಸಿ, ತಂಕಟೆ ಹೂ ಹರಡುತ್ತಾರೆ.
ಲಂಬಾಣಿ ತಾಂಡಾಗಳಲ್ಲಿ ಮೂರು ದಿನ ವಿಜೃಂಭಣೆಯಿಂದ ದೀಪಾವಳಿ ಆಚರಣೆ ನಡೆಯುತ್ತದೆ. ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳು ತವರು ಮನೆಗೆ ಬಂದು ಸಂತಸದಿಂದ ದೀಪಾವಳಿ ಆಚರಿಸುತ್ತಾರೆ. ಬಂಜಾರ (ಲಂಬಾಣಿ) ಸಮುದಾಯದ, ಇನ್ನೂ ಮದುವೆ ಆಗದೆ ಇರುವ ಕಿಶೋರಿಯರು ಪಕ್ಕದ ಗುಡ್ಡಕ್ಕೆ ಹೋಗಿ ಬಿದಿರು ಪುಟ್ಟಿಯಲ್ಲಿ ತಂಕಟೆ ಹೂ ಬಿಡಿಸಿಕೊಂದು ಬರುತ್ತಾರೆ. ಮದುವೆ ನಿಶ್ಚಯ ಆದವರು ‘ಮುಂದೆ ಗಂಡನ ಮನೆಗೆ ಹೋಗುತ್ತೇನೆ. ಮತ್ತೆ ನಿಮ್ಮನ್ನು ಯಾವಾಗ ನೋಡುತ್ತೇನೋ’ ಎಂದು ತಬ್ಬಿಕೊಂಡು ಅಳುತ್ತಾರೆ. ಯಾವುದೋ ಕಾರಣಕ್ಕೆ ವೈಮನಸ್ಸು ಉಂಟಾದವರು ತಂಕಟೆ ಹೂ ಕೀಳಲು ಹೋದಾಗ ಹಳೆಯ ವೈಷಮ್ಯ ಮರೆತು ಒಂದಾಗುವುದು ಕೂಡ ನಡೆಯುತ್ತದೆ.
ಉದ್ಯೋಗ ಅರಸಿ ದೇಶ–ವಿದೇಶಗಳಲ್ಲಿ ನೆಲಸಿದವರು, ಬೆಂಗಳೂರು ಮತ್ತಿತರ ನಗರಗಳಿಗೆ ಹೋದವರು, ಕಾಫಿ ತೋಟದ ಕೆಲಸಕ್ಕೆಂದು ಬೇರೆ ಕಡೆ ಹೋದ ಕಾರ್ಮಿಕರು, ಬೇರೆ ಊರಲ್ಲಿರುವ ಸರ್ಕಾರಿ ನೌಕರರು ದೀಪಾವಳಿಗೆ ಹುಟ್ಟೂರಿಗೆ ಬರುತ್ತಾರೆ. ಲಂಬಾಣಿ ತಾಂಡಾಗಳಲ್ಲಿ ಎಲ್ಲಾ ಹಬ್ಬಗಳಿಗಿಂತ ದೀಪಾವಳಿಯನ್ನು ಹೆಚ್ಚು ಸಡಗರದಿಂದ ಆಚರಿಸಲಾಗುವುದರಿಂದ ಎಲ್ಲರೂ ಸೇರುತ್ತಾರೆ. ಪೂರ್ವಜರ ಹಬ್ಬದ ಸಂಭ್ರಮವನ್ನು ಇಂದಿಗೂ ಉಳಿಸಿಕೊಂಡಿದ್ದು, ಪ್ರತೀ ಮನೆಮನೆಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟುತ್ತದೆ.
‘ದೀಪಾವಳಿಗೆ ಕವಸೆ ಹುಲ್ಲು ಸಾಂಪ್ರದಾಯಿಕವಾಗಿ ಎಷ್ಟು ಮುಖ್ಯವೋ ವೈಜ್ಞಾನಿಕವಾಗಿವೂ ಆರೋಗ್ಯ ಸ್ನೇಹಿಯಾಗಿದೆ. ಕವಸೆ ಹುಲ್ಲನ್ನು ಮನೆಯಲ್ಲಿ ಇಡುವುದರಿಂದ ಬೆಚ್ಚಗಿನ ವಾತಾವರಣ ಉಂಟಾಗುತ್ತದೆ. ನಕಾರಾತ್ಮಕ ಭಾವನೆ ಹೊರಟು ಹೋಗುತ್ತದೆ’ ಎಂದು ಬಲ್ಲವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.