ADVERTISEMENT

ಪುಣ್ಯ ಸ್ಮರಣೆ: ಮನೆ, ಮನದಲ್ಲಿ ಹಣತೆ ಹಚ್ಚಿದ ತರಳಬಾಳು ಶಿವಕುಮಾರ ಶ್ರೀ

ನಡೆ, ನುಡಿಗಳಲ್ಲಿ ಬಸವಣ್ಣನ ಪಡಿಯಚ್ಚಿನಂತೆ ಬದುಕಿದ ಶ್ರೀಗಳ ಆದರ್ಶ ಸದಾ ಜೀವಂತ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 6:57 IST
Last Updated 20 ಸೆಪ್ಟೆಂಬರ್ 2024, 6:57 IST
ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ
ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ   

ಸಿರಿಗೆರೆ: ಕರ್ನಾಟಕದ ಮಠ ಪರಂಪರೆಯಲ್ಲಿ ಬಹುಮುಖ್ಯ ಧಾರ್ಮಿಕ ಕೇಂದ್ರವಾಗಿರುವ ಸಿರಿಗೆರೆಯ ತರಳಬಾಳು ಬೃಹನ್ಮಠಕ್ಕೆ 8 ಶತಮಾನಗಳಷ್ಟು ಹಳೆಯದಾದ ಇತಿಹಾಸವಿದೆ. ಮಠವನ್ನು ಉತ್ತುಂಗಕ್ಕೆ ಕೊಂಡೊಯ್ದ ಕೀರ್ತಿ ಈ ಪೀಠದ 20ನೇ ಜಗದ್ಗುರು ತರಳಬಾಳು ಶಿವಕುಮಾರ ಶಿವಾಚಾರ್ಯರಿಗೆ ಸಲ್ಲುತ್ತದೆ.

1914ರ ಬಸವ ಜಯಂತಿಯಂದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮುತ್ತುಗದೂರು ಗ್ರಾಮದಲ್ಲಿ ಜನಿಸಿದ ಶ್ರೀಗಳು ಸಂಸ್ಕೃತದಲ್ಲಿ ಕಾವ್ಯ ರಚಿಸುವ ಮೇಧಾವಿತನವನ್ನು  ವಿದ್ಯಾರ್ಥಿ ದಿಸೆಯಲ್ಲಿಯೇ ಸಂಪಾದಿಸಿದ್ದರು. ತಂದೆ ಮಹಾದೇವಯ್ಯ, ತಾಯಿ ಬಸಮ್ಮ ದಂಪತಿಯ ಪುತ್ರರಾದ ಅವರು ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಅವರು ಕಾಶಿಯಲ್ಲಿ ಸಂಸ್ಕೃತಾಭ್ಯಾಸ ಮಾಡಿದರು.

ಶ್ರೀ ಗುರುಶಾಂತರಾಜ ದೇಶಿಕೇಂದ್ರ ಶ್ರೀಗಳ ಅಕಾಲಿಕ ಮರಣದ ನಂತರ ಅವರು 1940ರಲ್ಲಿ ತರಳಬಾಳು ಪೀಠಕ್ಕೆ ಪಟ್ಟಾಭಿಷಿಕ್ತರಾದರು. ಅದಕ್ಕೂ ಪೂರ್ವದಲ್ಲಿ 1933ರಲ್ಲಿ ಯಲಹಂಕ ಮಠದ ಚರಪಟ್ಟಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. 38 ವರ್ಷಗಳ ಕಾಲ ಪೀಠದಲ್ಲಿದ್ದ ಅವರು ಜಾತಿಮತಗಳ ಭಿನ್ನತೆಯ ಸಂಕೋಲೆಯನ್ನು ದೂರವಿಟ್ಟು ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಮುಂದಾಗಿದ್ದರು.

ADVERTISEMENT

ಆ ಕಾಲದಲ್ಲಿ ಮಠದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿತ್ತು. ಭಕ್ತರ ಸಾಮಾಜಿಕ ಸ್ಥಿತಿಯೂ ಹೇಳಿಕೊಳ್ಳುವಂತಿರಲಿಲ್ಲ. ಆ ವೇಳೆ ಅವರು ಮಠದ ಭಕ್ತ ಸಮುದಾಯವನ್ನು ಒಟ್ಟುಗೂಡಿಸಲು ಅವಿಶ್ರಾಂತವಾಗಿ ದುಡಿದರು. ಮಠದ ಶಿಷ್ಯರು ಇರುವ ಊರು ಕೇರಿಗಳನ್ನೆಲ್ಲಾ ತಿರುಗಿದರು. ಸೌಲಭ್ಯಗಳೇ ಇಲ್ಲದ ಊರುಗಳ ಗುಡಿ-ಗುಂಡಾರಗಳಲ್ಲಿ ಬಿಡಾರ ಹೂಡಿ, ಉಂಡೋ ಉಪವಾಸವಿದ್ದೋ ಶಿಷ್ಯರನ್ನು ಸಂಘಟಿಸಿದರು.

ಸಮುದಾಯದ ಜನರಲ್ಲಿ ದುಡಿಮೆಯ ಪ್ರಜ್ಞೆ ಮೂಡುವಂತೆ ಮಾಡಿದರು. ಕೃಷಿ, ವ್ಯಾಪಾರ, ತೋಟಗಾರಿಕೆ ಮುಂತಾದ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ಮಾರ್ಗದರ್ಶನ ಮಾಡಿದರು. ಪರಿಣಾಮವಾಗಿ ಸಮಾಜದಲ್ಲಿ ತೀರಾ ಅಸಹನೀಯ ಸ್ಥಿತಿಯಲ್ಲಿದ್ದ ಸಮುದಾಯ ತಲೆ ಎತ್ತುವಂತಾಯಿತು.

ಕೈಯಲ್ಲಿ ಕಾಸಿಲ್ಲದಿದ್ದರೂ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೂ ಮುನ್ನವೇ (1946) ಸಿರಿಗೆರೆಯಲ್ಲಿ ಸರ್ಕಾರದ ಅನುಮತಿಯೊಂದಿಗೆ ಪ್ರೌಢಶಾಲೆ ಆರಂಭಿಸಿದರು. ಆದರೆ, ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಮಠದ ಭಕ್ತರೇ ಆದ ಪದವೀಧರರೂ ಮುಂದೆ ಬರಲಿಲ್ಲ. ಕೆಲವರಂತೂ ಶ್ರೀಗಳು ತಮ್ಮ ಹೆಸರಿಗೆ ಇಂತಿಷ್ಟು ಹಣ ಇಟ್ಟರೆ ನೌಕರಿಗೆ ಬರುತ್ತೇವೆಂಬ ಷರತ್ತು ವಿಧಿಸಿದರು. ಇದಕ್ಕೆ ಧೃತಿಗೆಡದೆ ಅವರು ಷರತ್ತು ವಿಧಿಸಿದವರಿಗೆ ಸವಾಲೆಂಬಂತೆ 1962ರಲ್ಲಿ ಅಧಿಕೃತವಾಗಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ತೆರೆದರು.

ಸಂಸ್ಥೆಯು ಇದೀಗ ರಾಜ್ಯದ 14 ಜಿಲ್ಲೆಗಳಲ್ಲಿ 250ಕ್ಕೂ ಹೆಚ್ಚಿನ ಶಾಲಾ ಕಾಲೇಜುಗಳನ್ನು ನಡೆಸುತ್ತಿದೆ. ಇದರ ಹಿಂದೆ ಶಿವಕುಮಾರ ಶ್ರೀಗಳ ಸಂಕಲ್ಪಶಕ್ತಿ ಇರುವುದನ್ನು ಶಿಷ್ಯಕೋಟಿ ಸ್ಮರಿಸುತ್ತದೆ. ಶ್ರೀಗಳು ತಮ್ಮ ನಡೆ ಮತ್ತು ನುಡಿಗಳಲ್ಲಿ ಬಸವಣ್ಣನ ಪಡಿಯಚ್ಚಿನಂತೆ ಬದುಕಿದವರು. ಬಸವಣ್ಣನ ವಚನ ಸಾಹಿತ್ಯವನ್ನು ಜಗತ್ತಿಗೆ ಸಾರಬೇಕೆಂಬ ಮಹತ್ವಾಕಾಂಕ್ಷೆ ಶ್ರೀಗಳದ್ದಾಗಿತ್ತು. ಇಂಗ್ಲಿಷ್‌, ಹಿಂದಿ ಮತ್ತು ತೆಲುಗು ಭಾಷೆಗೆ ವಚನಗಳನ್ನು ಅನುವಾದ ಮಾಡಿಸಿ ಪ್ರಕಟಿಸಿದ್ದರು. ಇಂದು ಭೌತಿಕವಾಗಿ ಶ್ರೀಗಳಿಲ್ಲ. ದೇಶ – ವಿದೇಶಗಲ್ಲಿ ನೆಲೆಸಿರುವ ಅದೆಷ್ಟೋ ಹಣತೆಗಳು ಇಂದೂ ಪ್ರಕಾಶಿಸುತ್ತಿವೆ. ನಮ್ಮ ಮುಂದೆ ಹಲವು ಆಲೋಚನೆ, ಆದರ್ಶಗಳನ್ನು ಅವರು ಬಿಟ್ಟು ಹೋಗಿದ್ದಾರೆ.

ಶಿವಕುಮಾರ ಶಿವಾಚಾರ್ಯ ಶ್ರೀ

ಪ್ರಜಾಪ್ರಭುತ್ವದ ಮೇಲೆ ಅಪಾರ ನಂಬಿಕೆ

ಶಿವಕುಮಾರ ಶಿವಾಚಾರ್ಯರಿಗೆ ಪ್ರಜಾಪ್ರಭುತ್ವದ ನಿಲುವುಗಳಲ್ಲಿ ಅಪಾರ ನಂಬಿಕೆ ಇತ್ತು. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಆದಾಗ ಪ್ರತಿಭಟಿಸಿದ ಮೊದಲ ಸ್ವಾಮೀಜಿ ಅವರಾಗಿದ್ದರು. ತಾನು ಮೊದಲು ದೇಶದ ಪ್ರಜೆ ನಂತರ ಧಾರ್ಮಿಕ ನೇತಾರ ಎಂಬುದು ಅವರ ಭಾವವಾಗಿತ್ತು. ರಾಜಕಾರಣ ಮಾಡುವುದರಲ್ಲೂ ಅವರು ಒಂದು ಹೆಜ್ಜೆ ಮುಂದಿದ್ದರು. ಚುನಾವಣೆಗಳಲ್ಲಿ ಅವರು ಬೆಂಬಲಿಸಿದ ಅಭ್ಯರ್ಥಿಗಳು ಸೋಲು ಕಂಡ ನಿದರ್ಶನಗಳೇ ಇಲ್ಲ. ಅನಾಮಧೇಯರಾಗಿದ್ದ ವ್ಯಕ್ತಿಗಳನ್ನೂ ಚುನಾವಣೆಯಲ್ಲಿ ಗೆಲ್ಲಿಸುವ ಮತ್ತು ಬೇಡವೆನಿಸಿದವರನ್ನು ಸೋಲಿಸುವ ಛಾತಿ ಶ್ರೀಗಳಲ್ಲಿತ್ತು.

5 ದಿನ ಶ್ರದ್ಧಾಂಜಲಿ ಕಾರ್ಯಕ್ರಮ 
ಇಂದಿನಿಂದ  ಶಿವಕುಮಾರ ಶಿವಾಚಾರ್ಯ ಶ್ರೀಗಳ 32ನೇ ಶ್ರದ್ಧಾಂಜಲಿ ಕಾರ್ಯಕ್ರಮ ಶುಕ್ರವಾರದಿಂದ ಆರಂಭವಾಗಲಿದ್ದು ಮೊದಲ ದಿನ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿವೆ. ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ವಿಧಾನಪರಿಷತ್‌ ಸದಸ್ಯ ಧನಂಜಯ ಸರ್ಜಿ ಭಾಗವಹಿಸುವರು. ಜೊತೆಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಶಿಮುಲ್‌ ಅಧ್ಯಕ್ಷ ವಿದ್ಯಾಧರ್ ಭಾಗವಹಿಸುವರು’ ಎಂದರು. ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಅವರಿಂದ ಹಾಸ್ಯ ಬಸವರಾಜ ಗಿರಿಯಾಪುರ ಅವರ ಉಪನ್ಯಾಸ ಅಕ್ಕನ ಬಳಗದಿಂದ ವಚನಗೀತೆ ವಿದ್ಯಾರ್ಥಿಗಳಿಂದ ನೃತ್ಯ ತರಳಬಾಳು ಕಲಾ ಸಂಘದಿಂದ ಭರತನಾಟ್ಯ ಕಾರ್ಯಕ್ರಮಗಳು ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.