ADVERTISEMENT

ಯೋಗ, ಸಂಗೀತ, ನೃತ್ಯವನ್ನು ಪಠ್ಯದಲ್ಲಿ ಸೇರಿಸಿ: ತರಳಬಾಳು ಶ್ರೀ

ಸಿರಿಗೆರೆಯಲ್ಲಿ ರಾಜ್ಯಮಟ್ಟದ ಯೋಗ ಸ್ಪರ್ಧೆಗಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2023, 14:28 IST
Last Updated 18 ಅಕ್ಟೋಬರ್ 2023, 14:28 IST
ಬೆಂಗಳೂರು ವಿಭಾಗ ಮಟ್ಟ ಹಾಗೂ ರಾಜ್ಯ ಮಟ್ಟದ ಯೋಗಾಸನಾ ಸ್ಪರ್ಧೆಯನ್ನು ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು
ಬೆಂಗಳೂರು ವಿಭಾಗ ಮಟ್ಟ ಹಾಗೂ ರಾಜ್ಯ ಮಟ್ಟದ ಯೋಗಾಸನಾ ಸ್ಪರ್ಧೆಯನ್ನು ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು   

ಸಿರಿಗೆರೆ: ಶಾಲಾ ಪಠ್ಯಕ್ರಮದಲ್ಲಿ ಯೋಗ, ಸಂಗೀತ, ನೃತ್ಯವನ್ನು ಸೇರಿಸುವ ಅಗತ್ಯವಿದೆ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಸಿರಿಗೆರೆಯಲ್ಲಿ ಬುಧವಾರ ನಡೆದ 14ರಿಂದ 17 ವರ್ಷ ವಯೋಮಿತಿಯೊಳಗಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ– ಬಾಲಕಿಯರ ಬೆಂಗಳೂರು ವಿಭಾಗ ಮಟ್ಟ ಹಾಗೂ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

‘ಯೋಗ ಎಂದರೆ ಕೇವಲ ಆಸನಗಳಲ್ಲ. ಯೋಗಾಸನ ಮನಸ್ಸನ್ನು ಹತೋಟಿಗೆ ತರುವ ಸಾಧನವಿದ್ದಂತೆ. ಯೋಗದಿಂದ ಶರೀರ ಮತ್ತು ಮನಸ್ಸಿಗೆ ಹತ್ತಿರದ ಸಂಬಂಧವಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಒಂದರಿಂದ ಹತ್ತನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಯೋಗ ಶಿಕ್ಷಣ ನೀಡಬೇಕು ಎಂದು ಪ್ರಸ್ತಾಪಿಸಿರುವುದು ಮೆಚ್ಚುಗೆಯ ವಿಷಯ. ಯೋಗ, ಸಂಗೀತ, ನೃತ್ಯದಿಂದ ಮಕ್ಕಳ ಮನಸ್ಸು ಹದಗೊಳ್ಳುತ್ತದೆ’ ಎಂದು ತಿಳಿಸಿದರು.

ADVERTISEMENT

‘ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೆ ಯಾವುದೂ ಇಲ್ಲ. ಸಿರಿಗೆರೆಯಲ್ಲಿ ಮಕ್ಕಳು ಯೋಗ ಪ್ರದರ್ಶಿಸುತ್ತಿರುವುದನ್ನು ನೋಡಿದರೆ ಮನಸ್ಸಿಗೆ ಸಂತೋಷ ಉಂಟಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ತಿಳಿದುಕೊಂಡು ಲವಲವಿಕೆಯಿಂದ ಕೆಲಸ ಮಾಡುತ್ತಿರುವುದೇ ಉತ್ತಮ ಆರೋಗ್ಯಕ್ಕೆ ಕಾರಣ’ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಟಿ.ಜಿ.ಲೀಲಾವತಿ, ದೈಹಿಕ ಶಿಕ್ಷಣಾಧಿಕಾರಿ ಎ.ಪರಶುರಾಮಪ್ಪ, ಮಂಜುಳಾ, ವೆಂಕಟೇಶಪ್ಪ, ಜಿಲ್ಲೆಯ ಎಲ್ಲ ದೈಹಿಕ ಶಿಕ್ಷಣ ಶಿಕ್ಷಕರು ಹಾಜರಿದ್ದರು.

ಹನ್ನೊಂದು ಜಿಲ್ಲೆಗಳಿಂದ ಯೋಗಪಟುಗಳು ಪಾಲ್ಗೊಂಡಿದ್ದರು.

‘ಇಸ್ರೇಲ್ ಮತ್ತು ಗಾಜಾಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಸಾವಿರಾರು ಜನ ಹತರಾಗಿದ್ದು, ಹಿಂಸೆಗೊಳಗಾದವರ ದುಃಖದಲ್ಲಿ ನಾವು ಭಾಗಿಯಾಗೋಣ’ ಎಂದು ಒಂದು ನಿಮಿಷ ಮೌನ ಆಚರಿಸಿ ಶೀಘ್ರವೇ ಯುದ್ಧ ಅಂತ್ಯಗೊಳ್ಳಲಿ ಎಂದು ಕಾರ್ಯಕ್ರಮದಲ್ಲಿ ಪ್ರಾರ್ಥಿಸಲಾಯಿತು.

ಮಲ್ಲಕಂಬ ಮಲ್ಲಿಹಗ್ಗ ಪ್ರದರ್ಶನ

ರಾಜ್ಯದ ಹಲವು ಜಿಲ್ಲೆಗಳಿಂದ ಬಂದಿದ್ದ ಯೋಗಸ್ಪರ್ಧಿಗಳ ಗಮನ ಸೆಳೆಯಲು ತರಳಬಾಳು ಕಲಾ ಸಂಘದ ಬಾಲಕರಿಂದ ಮಲ್ಲಕಂಬ ಮತ್ತು ಬಾಲಕಿಯರಿಂದ ಮಲ್ಲಿಹಗ್ಗ ಪ್ರದರ್ಶನ ಏರ್ಪಡಿಸಲಾಗಿತ್ತು. ಯೋಗಸ್ಪರ್ಧಿಗಳು ತದೇಕಚಿತ್ತದಿಂದ ಪ್ರದರ್ಶನವನ್ನು ವೀಕ್ಷಿಸಿದರು. ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದ ಶಾಸಕ ಚಂದ್ರಪ್ಪ ₹ 5000 ಬಹುಮಾನ ನೀಡಿದರು. ಮಕ್ಕಳ ಈ ಎರಡೂ ಪ್ರಯೋಗಗಳು ವಿಶ್ವವಿಖ್ಯಾತ ದಸರೆಯಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ತರಳಬಾಳು ಶ್ರೀ ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.