ADVERTISEMENT

ಸಿರಿಗೆರೆ ಮಠದ ಹೆಜ್ಜೆ ಗುರುತು ಸ್ಮರಣೀಯ

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 5:40 IST
Last Updated 22 ಸೆಪ್ಟೆಂಬರ್ 2022, 5:40 IST
ಸಿರಿಗೆರೆಯ ಬೃಹನ್ಮಠದಲ್ಲಿ ಬುಧವಾರ ನಡೆದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿರಿಗೆರೆ ಶ್ರೀ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಎಚ್‌. ಆಂಜನೇಯ ಇದ್ದರು.
ಸಿರಿಗೆರೆಯ ಬೃಹನ್ಮಠದಲ್ಲಿ ಬುಧವಾರ ನಡೆದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿರಿಗೆರೆ ಶ್ರೀ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಎಚ್‌. ಆಂಜನೇಯ ಇದ್ದರು.   

ಸಿರಿಗೆರೆ: ‘ನಮ್ಮ ದೇಶ ಹಲವು ಧರ್ಮ, ಜಾತಿ, ಸಂಸ್ಕೃತಿಗಳ ತವರು. ವಿವಿಧತೆಯಲ್ಲಿ ಏಕತೆ ಕಾಪಾಡಿಕೊಂಡ ನೆಲ ಇದು. ನಾಡಿನ ಧಾರ್ಮಿಕ ಕ್ಷೇತ್ರದಲ್ಲಿ ಸಿರಿಗೆರೆ ಮಠದ ಹೆಜ್ಜೆ ಗುರುತುಗಳು ಅವಿಸ್ಮರಣೀಯ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಇಲ್ಲಿನ ತರಳಬಾಳು ಬೃಹನ್ಮಠದಲ್ಲಿ ಬುಧವಾರ ನಡೆದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 30ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ಸಮಾನತೆಗೆ, ಅಜ್ಞಾನದ ಕತ್ತಲೆಯಲ್ಲಿದ್ದ ಜನರಿಗೆ ಬೆಳಕನ್ನು ನೀಡಿದ್ದು ಸಿರಿಗೆರೆ ಮಠ. ಸರ್ವರ ಬಾಳು ಹಸನಾಗಬೇಕು ಎಂಬುದು ಮಠದ ಧ್ಯೇಯ.ರಾಜಕಾರಣಿಗಳಿಗೆ ಕಿವಿ ಹಿಂಡಿ ಬುದ್ಧಿ ಹೇಳುವ ಶಕ್ತಿ ಇರುವುದು ಸಿರಿಗೆರೆ ಶ್ರೀಗೆ ಮಾತ್ರ ಎಂದರು.

ADVERTISEMENT

ಶ್ರೀಗಳ ಆದೇಶದ ಮೇರೆಗೆ ಈ ಭಾಗದ ಎರಡು ಏತ ನೀರಾವರಿ ಯೋಜನೆಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅನುದಾನ ಮಂಜೂರು ಮಾಡಿದ್ದರು ಎಂದು ಹೇಳಿದರು.

‘ವಿಕಾಸಕ್ಕಾಗಿ ಮಕ್ಕಳು ಜ್ಞಾನವಂತರಾಗಬೇಕು. ತಂದೆ–ತಾಯಿಯ ಜೊತೆ ಬೆರೆಯಬೇಕು. ಬೌದ್ಧಿಕಬೆಳವಣಿಗೆ ಆಗಬೇಕು. ಸಮಯ ವ್ಯರ್ಥ ಮಾಡದೇ ಸದುಪಯೋಗಪಡಿಸಿಕೊಂಡು ಮುಂದೆ ಉತ್ತಮನಾಯಕರಾಗಬೇಕು’ ಎಂದು
‌ಸಾನ್ನಿಧ್ಯ ವಹಿಸಿದ್ದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

‘ಸಿರಿಗೆರೆ ಶ್ರೀಮಠ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಯಲ್ಲಿ ಛಾಪು ಮೂಡಿಸಿದೆ. ಶ್ರೀಮಠ ಶಾಲಾ-ಕಾಲೇಜುಗಳನ್ನು ತೆರೆದು ವಿದ್ಯಾದಾನ ಮಾಡಿದೆ. ಎಲ್ಲಾ ಜಾತಿಯ ಮಕ್ಕಳನ್ನು ಒಂದೇ ವೇದಿಕೆಯಲ್ಲಿ ಕುಳಿತು ಸಹಪಂಕ್ತಿ ಭೋಜನ ಮಾಡುವುದಕ್ಕೆ ಕಲ್ಪಿಸಿಕೊಟ್ಟರು’ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.

‘ಚಿತ್ರದುರ್ಗ ಹಾಗೂ ದಾವಣಗೆರೆ ಅವಳಿ ಜಿಲ್ಲೆಗಳು ಪ್ರಗತಿ ಹೊಂದಲು ಹಿರಿಯ ಶ್ರೀಗಳು ಹಾಗೂ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರಣ. ಶ್ರೀಗಳ ಕೆರೆ ತುಂಬುವ ಕಾರ್ಯ ಅಪರೂಪವಾಗಿದ್ದು, ಶ್ರೀಗಳು ಮಠದ ಪರಂಪರೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು’ ಎಂದು ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

‌ಸಂಘಟನೆಗಳ ಮೂಲಕ ವೀರಶೈವ ಸಂಘಗಳನ್ನು ಒಂದುಗೂಡಿಸಿದರು ಹಿರಿಯ ಶ್ರೀಗಳು. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಹಿರಿಯ ಶ್ರೀಗಳು ಅಭಿನಂದನಾರ್ಹರು ಎಂದು ಹೊನ್ನಾಳಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ, ದಾವಣಗೆರೆ ವಿ.ವಿ. ಕುಲಪತಿ ಪ್ರೊ.ಬಿ.ಡಿ. ಕುಂಬಾರ,ಡಾ. ಶ್ರೀನಿವಾಸ ಕರಿಯಣ್ಣ ಹಾಗೂ ಮುಖಂಡರು, ಜನಪ್ರತಿನಿಧಿಗಳು ಇದ್ದರು.

ಅರಸೀಕೆರೆ ವಚನ ವರ್ಷಿಣಿ ವಚನಗಾಯನ ತಂಡ ವಚನಗೀತೆ ನಡೆಸಿಕೊಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.