ಚಿತ್ರದುರ್ಗ: ‘ಶಿವಮೂರ್ತಿ ಶರಣರು ತಮ್ಮ ವಿರುದ್ಧದ 2ನೇ ಪೋಕ್ಸೊ ಪ್ರಕರಣದಲ್ಲಿ ಜಾಮೀನು ಪಡೆದಿಲ್ಲ. ಆದರೂ ಅವರನ್ನು ಬಿಡುಗಡೆ ಮಾಡಿರುವುದು ಆತಂಕ ಮೂಡಿಸಿದೆ. ಆರೋಪಿ ಪ್ರಭಾವಿಯಾಗಿದ್ದು, ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ. ಆದ್ದರಿಂದ ಅವರನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿ ಸಂತ್ರಸ್ತ ಬಾಲಕಿಯರ ತಾಯಿ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
‘ಕಾರಾಗೃಹದಿಂದ ಹೊರಬಂದ ಸ್ವಾಮೀಜಿಯನ್ನು ಅವರ ಸಹಚರರು ಮತ್ತು ಬೆಂಬಲಿಗರು ಹಾರ ಹಾಕಿ, ಜೈಕಾರ ಕೂಗಿ ಬರಮಾಡಿಕೊಂಡಿರುವುದು ಭಯ ಮೂಡಿಸಿದೆ. ಆರೋಪಿ ಈ ಮೊದಲೇ ಹಲವು ಬಾರಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ. ಅವರು ಈಗ ಹೊರಗಿರುವ ಕಾರಣ ಅವರ ಬೆಂಬಲಿಗರಿಂದ ನನಗೆ, ನನ್ನ ಮಕ್ಕಳಿಗೆ ತೊಂದರೆಯಾಗಬಹುದು. ಹೀಗಾಗಿ ಶರಣರನ್ನು ಬಂಧಿಸಿ ನಮಗೆ ರಕ್ಷಣೆ ನೀಡಿ’ ಎಂದು ಕೋರಿದ್ದಾರೆ.
‘ಪೋಕ್ಸೊ ಪ್ರಕರಣದಲ್ಲಿ ಜಾಮೀನು ಪಡೆಯದೇ ಆರೋಪಿಯೊಬ್ಬರು ಹೊರಗಿರುವುದು ಇದೇ ಮೊದಲೆನಿಸುತ್ತದೆ. ನನ್ನ ಮಕ್ಕಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಇದುವರೆಗೂ ಜಾಮೀನು ಪಡೆದಿಲ್ಲ’ ಎಂದು ತಿಳಿಸಿದ್ದಾರೆ.
ನ. 20ರಂದು ಬಂಧಿಸಿ ಬಿಡುಗಡೆ: ಮಹಿಳೆಯು ಮರುಘಾ ಮಠದಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಅವರು ನೀಡಿದ್ದ ದೂರಿನ ಆಧಾರದಲ್ಲಿ ಶರಣರ ವಿರುದ್ಧ 2 ಪೋಕ್ಸೊ ಪ್ರಕರಣಗಳು ದಾಖಲಾಗಿದ್ದವು. ಮೊದಲ ಪ್ರಕರಣದಲ್ಲಿ 2023ರ ನ.8ರಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. 2ನೇ ಪ್ರಕರಣದಲ್ಲಿ ಜಾಮೀನು ಪಡೆಯದ ಕಾರಣ ಅವರನ್ನು ನ. 20ರಂದು ಮತ್ತೆ ಬಂಧಿಸಲಾಗಿತ್ತು. ಆದರೆ ಹೈಕೋರ್ಟ್ ಸೂಚನೆ ಮೇರೆಗೆ ಅಂದೇ ಬಿಡುಗಡೆ ಮಾಡಲಾಗಿತ್ತು.
ಹೈಕೋರ್ಟ್ ಜಾಮೀನಿಗೆ ತಡೆ ನೀಡಿದ್ದ ಸುಪ್ರೀಂ ಕೋರ್ಟ್, 4 ತಿಂಗಳೊಳಗೆ ಪ್ರಮುಖ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸುವಂತೆ ಸೂಚಿಸಿತ್ತು. ಹೀಗಾಗಿ ಮೇ 24ರಂದು ಕೋರ್ಟ್ ಎದುರು ಶರಣಾಗಿದ್ದ ಶರಣರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದೀಗ ಸಾಕ್ಷ್ಯಗಳ ವಿಚಾರಣೆ ಅಂತ್ಯಗೊಂಡಿದ್ದು, ಜಾಮೀನಿಗಿದ್ದ ತಡೆ ತೆರವುಗೊಂಡಿದೆ. ಹೀಗಾಗಿ ಶರಣರು ಬಿಡುಗಡೆಯಾಗಿದ್ದಾರೆ.
‘2ನೇ ಪೋಕ್ಸೊ ಪ್ರಕರಣದಲ್ಲಿ ಆರೋಪಿಗೆ ಜಾಮೀನು ಸಿಕ್ಕಿರಲಿಲ್ಲ ಎಂಬ ಮಾಹಿತಿ ಇದೆ. ಈ ಕುರಿತು ಸಂತ್ರಸ್ತ ಬಾಲಕಿಯರ ತಾಯಿ ಮನವಿ ಸಲ್ಲಿಸಿದ್ದಾರೆ. ಕಾನೂನು ತಜ್ಞರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಹೇಳಿದ್ದಾರೆ.
‘ಶಿವಮೂರ್ತಿ ಶರಣರು ಜೈಲಿನಿಂದ ಬಿಡುಗಡೆಯಾಗುವಾಗ ಅವರ ಬೆಂಬಲಿಗರು ಹಾರ ತುರಾಯಿ ಹಾಕಿ ಸಂಭ್ರಮಿಸಿದ್ದು, ಪೋಕ್ಸೊ ಕಾನೂನನ್ನು ಗಾಳಿಗೆ ತೂರಿದ್ದಾರೆ. ಪ್ರಕರಣದ ಬಗ್ಗೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ’ ಎಂದು ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.