ನಾಯಕನಹಟ್ಟಿ: ಸರ್ಕಾರಿ ಆಸ್ಪತ್ರೆಯ ಕಟ್ಟಡದ ಸುತ್ತಮುತ್ತ ಎಲ್ಲೆಂದರಲ್ಲಿ ಬಿದ್ದಿರುವ ಕಸ, ಮಣ್ಣಿನ ರಾಶಿ, ಗಿಡ–ಗಂಟಿಗಳು, ಅವುಗಳಲ್ಲಿ ಯತೇಚ್ಛವಾಗಿ ವಾಸವಾಗಿರುವ ವಿಷಜಂತುಗಳು. ಜೀವ ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬರುವ ರೋಗಿಗಳು...
ಇದು ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ಸ್ಥಿತಿ.
ತಳಕು ಆರೋಗ್ಯ ಕೇಂದ್ರವು 55 ಗ್ರಾಮಗಳ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದೆ. ಇಲ್ಲಿ ನಿತ್ಯ 150ರಿಂದ 200 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಸೋಮವಾರ ಮತ್ತು ಮಂಗಳವಾರ ಈ ಸಂಖ್ಯೆ ದ್ವಿಗುಣವಾಗುತ್ತದೆ. ಆಸ್ಪತ್ರೆಯಲ್ಲಿ ಹೆರಿಗೆ ವಾರ್ಡ್, ಚಿಕಿತ್ಸೆಗಾಗಿ ಎರಡು ಕೊಠಡಿ, ಪ್ರಯೋಗಾಲಯ, ಔಷಧ ವಿತರಣಾ ಕೊಠಡಿ, ಆಂಬುಲೆನ್ಸ್ ಇದೆ.
ಜತೆಗೆ ಆಸ್ಪತ್ರೆಗೆ ನೀರು, ವಿದ್ಯುತ್ ಸೇರಿ ಅಗತ್ಯ ಸೌಕರ್ಯಗಳಿವೆ. ಇಬ್ಬರು ವೈದ್ಯರು, ಮೂವರು ಶುಶ್ರೂಷಕಿಯರು, ಪ್ರಯೋಗಾಲಯ ತಂತ್ರಜ್ಞರು ಇದ್ದಾರೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ಲಭಿಸುತ್ತಿದೆ. ಹಾಗೇ ಅಪಘಾತ, ಗಂಭೀರ ಸ್ವರೂಪದ ಪ್ರಕರಣಗಳಿದ್ದರೆ ತುರ್ತು ಚಿಕಿತ್ಸೆ ನೀಡಿ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ.
ಆದರೆ, ಕಟ್ಟಡದ ಸುತ್ತಮುತ್ತ ಬೆಳೆದಿರುವ ಅನವಶ್ಯಕ ಗಿಡ–ಗಂಟಿಗಳು ಆಸ್ಪತ್ರೆಗೆ ಕಪ್ಪುಚುಕ್ಕಿಯಾಗಿವೆ. ಆಂಬುಲೆನ್ಸ್ ನಿಲುಗಡೆ ಶೆಡ್ ಮತ್ತು ಆಸ್ಪತ್ರೆಯ ಸುತ್ತಲೂ ಎಲ್ಲೆಂದರಲ್ಲಿ ಕಸದ ಮತ್ತು ಮಣ್ಣಿನ ರಾಶಿ ಕಂಡುಬರುತ್ತದೆ. ಹೆರಿಗೆ ವಾರ್ಡ್‌ನ ಹಿಂಬದಿ ಬೃಹತ್ ಪ್ರಮಾಣದಲ್ಲಿ ಸೀಮೆ ಜಾಲಿಗಿಡಗಳು ಬೆಳೆದಿವೆ. ಬಾಣಂತಿ ಕೊಠಡಿಯ ಕಿಟಕಿಯ ಪಕ್ಕದಲ್ಲೇ ಕಸದ ರಾಶಿ ಇದೆ. ಯಥೇಚ್ಛವಾಗಿ ಪೊದೆಗಳು ಬೆಳೆದಿರುವುದರಿಂದ ವಿಷಜಂತುಗಳ ಹಾವಳಿ ಹೆಚ್ಚಾಗಿದೆ. ಆವರಣದಲ್ಲಿ ಪಾಳುಬಿದ್ದ ಬಾವಿ ಇದ್ದು, ಅದರ ಪಕ್ಕದಲ್ಲೇ ಶಿಥಿಲಾವಸ್ಥೆ ತಲುಪಿರುವ ವಸತಿ ಕಟ್ಟಡವಿದೆ. ಅದಕ್ಕೆ ಹೊಂದಿಕೊಂಡಂತೆ 15ಕ್ಕೂ ಹೆಚ್ಚು ವಸತಿ ಸಮುಚ್ಛಯಗಳಿವೆ. ಅವುಗಳಲ್ಲಿ ಆಸ್ಪತ್ರೆಯ ಸಿಬ್ಬಂದಿ ತಂಗಿದ್ದಾರೆ.
ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ ಇದೆ. ಸಾರ್ವಜನಿಕರು ಶೌಚಕ್ಕೆ ಆಸ್ಪತ್ರೆಯ ಹಿಂಬದಿ ಆವರಣವನ್ನು ಅವಲಂಬಿಸಿದ್ದಾರೆ. ಸಾರ್ವಜನಿಕರ ಬೈಕ್‌ಗಳು, ಕಾರುಗಳು ಸೇರಿ ಹಲವು ವಾಹನಗಳ ನಿಲ್ದಾಣವಾಗಿದೆ. ವಾಮಾಚಾರ ಸೇರಿ ಹಲವು ಅಕ್ರಮ ಚಟುವಟಿಕೆಗಳ ತಾಣವಾಗಿ ಇಲ್ಲಿನ ಆಸ್ಪತ್ರೆಯ ಹಿಂಬದಿ ಆವರಣ ರೂಪುಗೊಂಡಿದೆ. ಕೆಲ ದಿನಗಳ ಹಿಂದೆ ರಾತ್ರಿ ವೇಳೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರಿಗೆ ಹಾವು ಕಚ್ಚಿದ ಘಟನೆ ನಡೆದಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಇಲಾಖೆಯ ಅಧಿಕಾರಿಗಳು ಸ್ವಚ್ಛತೆಯತ್ತ ಗಮನಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ.
ಆಸ್ಪತ್ರೆಯ ದುರವಸ್ತೆ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಈ ಬಗ್ಗೆ ಆರೋಗ್ಯ ಸಚಿವರಿಗೆ ದೂರು ನೀಡಲಾಗುವುದು.ಟಿ.ಕೃಷ್ಣಮೂರ್ತಿ ತಳಕು ಗ್ರಾ.ಪಂ. ಸದಸ್ಯ
ಆಸ್ಪತ್ರೆಯಲ್ಲಿ ಹಗಲು ವೇಳೆಯಲ್ಲಿ ಮಾತ್ರ ವೈದ್ಯರು ಚಿಕಿತ್ಸೆ ನೀಡುತ್ತಾರೆ. ರಾತ್ರಿ ವೇಳೆ ಶುಶ್ರೂಷಕಿಯರೇ ಚಿಕಿತ್ಸೆ ನೀಡುತ್ತಾರೆ. ಅದರ ಬದಲಿಗೆ ವೈದ್ಯರು ಕರ್ತವ್ಯ ನಿರ್ವಹಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕುಎಂ.ಮಾರಣ್ಣ ಚನ್ನಗಾನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.