ADVERTISEMENT

ಪಿಯು ಕಾಲೇಜಿಗಿಲ್ಲ ಕಾಯಂ ಉಪನ್ಯಾಸಕರ ‘ಭಾಗ್ಯ’

ಅವೈಜ್ಞಾನಿಕ ನಿರ್ಧಾರ ಕೈಬಿಟ್ಟು ಕಾಲೇಜನ್ನು ‘ಸಿ’ ಗ್ರೇಡ್‌ಗೆ ಸೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಮೇ 2023, 23:32 IST
Last Updated 30 ಮೇ 2023, 23:32 IST
ಮೊಳಕಾಲ್ಮುರಿನ ಸರ್ಕಾರಿ ಪಿಯು ಕಾಲೇಜು
ಮೊಳಕಾಲ್ಮುರಿನ ಸರ್ಕಾರಿ ಪಿಯು ಕಾಲೇಜು   

-ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು: ಸ್ಥಳೀಯ ಸರ್ಕಾರಿ ಪಿಯು ಕಾಲೇಜಿನ ಗ್ರೇಡ್‌ ಅನ್ನು ಸರ್ಕಾರ ಅವೈಜ್ಞಾನಿಕವಾಗಿ ಬದಲಾವಣೆ ಮಾಡಿರುವ ಪರಿಣಾಮ ಕಾಲೇಜಿಗೆ ಉಪನ್ಯಾಸಕರ ನೇಮಕಕ್ಕೆ ಅಡ್ಡಿಯಾಗಿದೆ.

ನಾಲ್ಕು ವರ್ಷಗಳ ಹಿಂದೆ ಸೌಲಭ್ಯಗಳು ಇಲ್ಲದಿದ್ದರೂ ಕಾಲೇಜನ್ನು ತರಾತುರಿಯಲ್ಲಿ ‘ಸಿ’ ಗ್ರೇಡ್‌ನಿಂದ ‘ಎ’ ಗ್ರೇಡ್‌ಗೆ ಬದಲಾಯಿಸಲಾಯಿತು. ಆಗ ಕಾಲೇಜಿನಲ್ಲಿದ್ದ ಉಪನ್ಯಾಸಕರನ್ನು ‘ಎ’ ಗ್ರೇಡ್‌ನ ದಾವಣಗೆರೆ, ಚಿತ್ರದುರ್ಗ, ತುಮಕೂರು ಮುಂತಾದ ಕಾಲೇಜುಗಳಿಗೆ ಕಡ್ಡಾಯ ವರ್ಗಾವಣೆ ಮಾಡಲಾಯಿತು. ನಂತರ ನಡೆದ ‘ಎ’ ಗ್ರೇಡ್ ಕಾಲೇಜುಗಳ ವರ್ಗಾವಣೆಯಲ್ಲಿ ಹಿಂದುಳಿದ ಪ್ರದೇಶ ಎಂಬ ಕಾರಣಕ್ಕಾಗಿ ಉಪನ್ಯಾಸಕರು ಈ ಕಾಲೇಜನ್ನು ಆಯ್ಕೆ ಮಾಡಿಕೊಳ್ಳದ ಕಾರಣ ಹುದ್ದೆಗಳು ಖಾಲಿ ಇವೆ.

ADVERTISEMENT

ಕಾಲೇಜನ್ನು ‘ಎ’ ಗ್ರೇಡ್‌ಗೆ ಸೇರ್ಪಡೆ ಮಾಡಿದ್ದರಿಂದ ಆದ ತೊಂದರೆ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಅಂದಿನ ಸಚಿವ ಶ್ರೀರಾಮುಲು ಅವರು ಬೆಳಗಾವಿ ಅಧಿವೇಶನದಲ್ಲಿ ಇದನ್ನು ಪ್ರಶ್ನಿಸಿದ್ದರು. ನಂತರದಲ್ಲಿ ‘ಬಿ’ ಗ್ರೇಡ್‌ಗೆ ಸೇರ್ಪಡೆ ಮಾಡಲಾಯಿತು. ಇದರಿಂದ ಏನೂ ಪ್ರಯೋಜನವಾಗಿಲ್ಲ. ಆದಕಾರಣ ಕಾಲೇಜನ್ನು ‘ಸಿ’ ಗ್ರೇಡ್‌ಗೆ ಸೇರಿಸಿ ಅನುಕೂಲ ಮಾಡಿಕೊಡಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಡಾ.ಪಿ.ಎಂ. ಮಂಜುನಾಥ್ ಮತ್ತು ಸಿಡಿಸಿಸಿ ಮಾಜಿ ಸದಸ್ಯ ಕಿರಣ್ ಗಾಯಕವಾಡ್ ಒತ್ತಾಯಿಸಿದ್ದಾರೆ.

ಕಾಲೇಜಿನಲ್ಲಿ ಒಟ್ಟು 22 ಹುದ್ದೆಗಳ ಮಂಜೂರಾತಿಯಿದ್ದು, ಇದರಲ್ಲಿ 15 ಉಪನ್ಯಾಸಕರ ಹುದ್ದೆಗಳಲ್ಲಿ 11 ಹುದ್ದೆಗಳು ಖಾಲಿ ಇವೆ. 4 ಉಪನ್ಯಾಸಕ ಹುದ್ದೆಗಳಲ್ಲಿ 2 ಇಂಗ್ಲಿಷ್, ತಲಾ ಒಬ್ಬರು ಗಣಿತ ಮತ್ತು ಭೌತವಿಜ್ಞಾನ ಉಪನ್ಯಾಸಕರು ಇದ್ದಾರೆ. ಆದಕಾರಣ 3 ವರ್ಷಗಳಿಂದ ಅತಿಥಿ ಉಪನ್ಯಾಸಕರ ಮೂಲಕ ಪೂರ್ಣ ಪ್ರಮಾಣದ ಬೋಧನೆ ಮಾಡಿಸಲಾಗುತ್ತಿದೆ. ಕಾಯಂ ಹುದ್ದೆ ಭರ್ತಿಗೆ ವರ್ಗಾವಣೆ ಮತ್ತು ನೂತನ ನೇಮಕಾತಿಯ ಕೌನ್ಸೆಲಿಂಗ್‌ನಲ್ಲಿ ಬಿತ್ತರಿಸಲು ಗ್ರೇಡ್ ಸಮಸ್ಯೆ ಅಡ್ಡಿಯಾಗಿದೆ ಎಂದು ಪ್ರಾಂಶುಪಾಲ ಗೋವಿಂದಪ್ಪ ಹೇಳಿದರು.

ತಾಲ್ಲೂಕಿನ ದೊಡ್ಡ ಕಾಲೇಜು ಎಂದು ಹೆಸರು ಪಡೆದಿರುವ ಇಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿವೆ. ಮೂರು ವಿಭಾಗಗಳಿಂದ ಕಳೆದ ವರ್ಷ ಪ್ರಥಮ ವರ್ಷ 354, ದ್ವಿತೀಯ ವರ್ಷ 258 ಸೇರಿ ಒಟ್ಟು 612 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದರು. ಈ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಬಂದಿರುವ ಕಾರಣ ಪ್ರಥಮ ವರ್ಷಕ್ಕೆ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು, ದ್ವಿತೀಯ ವರ್ಷಕ್ಕೆ ಇನ್ನೂ ಹೆಚ್ಚುವರಿ 25–30 ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಮೂಲಕ 700ಕ್ಕೂ ಹೆಚ್ಚು ಪ್ರವೇಶಾತಿ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ತರಗತಿಗಳ ಸಂಖ್ಯೆಯನ್ನೂ ಹೆಚ್ಚಿಸಬೇಕಾಗಿದೆ. ಇದಕ್ಕೆ ಹೆಚ್ಚು ಉಪನ್ಯಾಸಕರ ಅಗತ್ಯವಿದೆ. ಈ ಬಗ್ಗೆ ಉಪ ನಿರ್ದೇಶಕರ ಗಮನಕ್ಕೆ ತರಲಾಗುವುದು. ಕಾಲೇಜು ಆರಂಭವಾಗಿ 34 ವರ್ಷಗಳು ಕಳೆದಿದ್ದು, ಆಗ ನಿರ್ಮಿಸಿರುವ ಬಹುತೇಕ ಕೊಠಡಿಗಳು ಶಿಥಲಗೊಂಡಿವೆ. ಎರಡು ಕೊಳವೆಬಾವಿಗಳಿವೆ. ಕುಡಿಯುವ ನೀರು ಶುದ್ಧೀಕರಣ ಘಟಕವಿಲ್ಲದ ಕಾರಣ ಕೊಳವೆಬಾವಿ ನೀರನ್ನು ನೇರವಾಗಿ ಕುಡಿಯುವ ಅನಿವಾರ್ಯತೆಯಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಂಥಾಲದಲ್ಲಿ ಪಠ್ಯಪುಸ್ತಕಗಳಿಲ್ಲದೇ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಒಬ್ಬ ವಿದ್ಯಾರ್ಥಿಗೆ 2 ವಿಷಯಕ್ಕೂ ಹೆಚ್ಚು ಪುಸ್ತಕ ಕೊಡಲು ಸಾಧ್ಯವಾಗುತ್ತಿಲ್ಲ. ಇದನ್ನು ಸರಿಪಡಿಸಲು ₹ 3 ಲಕ್ಷ ಅನುದಾನ ಬೇಕಿದೆ.

-ಗೋವಿಂದಪ್ ಪ್ರಾಂಶುಪಾಲ

ಶೀಘ್ರವೇ ಕಾಲೇಜಿನ ಸಭೆ ಕರೆದು ಸಮಸ್ಯೆ ಆಲಿಸಿ ಸಮಗ್ರ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಉಪನ್ಯಾಸಕರ ನೇಮಕ ಸೇರಿ ಎಲ್ಲಾ ಸಮಸ್ಯೆ ಬಗೆಹರಿಸಲು ಶ್ರಮಿಸಲಾಗುವುದು.

-ಎನ್.ವೈ. ಗೋಪಾಲಕೃಷ್ಣ ಶಾಸಕ ಮೊಳಕಾಲ್ಮುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.