ಹಿರಿಯೂರು: ‘ದಕ್ಷಿಣದ ಕಾಶಿ’ ಎಂದು ಖ್ಯಾತಿ ಪಡೆದಿರುವ ನಗರದ ತೇರುಮಲ್ಲೇಶ್ವರಸ್ವಾಮಿ ಬ್ರಹ್ಮರಥೋತ್ಸವ ಫೆ.17ರಂದು ಮಧ್ಯಾಹ್ನ 12ಕ್ಕೆ ವೈಭವದಿಂದ ಜರುಗಲಿದೆ.
ರಥೋತ್ಸವಕ್ಕಾಗಿ ದೇವಾಲಯದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ದೇವಾಲಯ ವಿವಿಧ ಅಲಂಕಾರದಿಂದ ಕಂಗೊಳಿಸುತ್ತಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ. 17ರಂದು ಬೆಳಿಗ್ಗೆ ಗಂಗಾಪೂಜೆ, ಸಂಜೆ ಚಂದ್ರಮೌಳೇಶ್ವರ–ಉಮಾಮಹೇಶ್ವರಸ್ವಾಮಿ ರಥೋತ್ಸವ ಜರುಗಲಿದೆ.
ಪಾಳೆಯಗಾರರ ವಂಶಸ್ಥ ರಾಜಾಕೆಂಚಪ್ಪ ನಾಯಕ 1446ರಲ್ಲಿ ನಿರ್ಮಿಸಿರುವ ತೇರುಮಲ್ಲೇಶ್ವರಸ್ವಾಮಿ ದೇಗುಲದ ಮೂಲವಿಗ್ರಹ ಕಾಶಿಯಲ್ಲಿರುವಂತೆ ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ಕಾರಣಕ್ಕೆ ಈ ದೇಗುಲವನ್ನು ‘ದಕ್ಷಿಣದ ಕಾಶಿ’ ಎಂದೇ ಕರೆಯಲಾಗುತ್ತಿದೆ.
ದೇವಾಲಯದ ಐತಿಹ್ಯ: ಶ್ರೀಶೈಲ ಮಲ್ಲಿಕಾರ್ಜುನನ ಪರಮಭಕ್ತೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮ ತನ್ನ ಇಳಿ ವಯಸ್ಸಿನಲ್ಲಿ ಶ್ರೀಶೈಲಕ್ಕೆ ನಡೆದುಕೊಂಡು ಹೋಗಿ ದರ್ಶನ ಮಾಡಿ ಬರುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಆಕೆಯ ಕನಸಿನಲ್ಲಿ ಕಾಣಿಸಿಕೊಂಡು, ‘ನಾನು ನೀನಿದ್ದಲ್ಲಿಯೇ ನೆಲೆಸುತ್ತೇನೆ’ ಎಂದು ಮಾತುಕೊಟ್ಟಿದ್ದರ ಪರಿಣಾಮ ಮಲ್ಲೇಶ್ವರಸ್ವಾಮಿ ದೇಗುಲ ಇಲ್ಲಿ ನಿರ್ಮಾಣವಾಗಲು ಕಾರಣ ಎನ್ನುವುದು ಈ ಭಾಗದ ಜನರ ನಂಬಿಕೆ. ದೇಗುಲದಲ್ಲಿರುವ ಲಿಂಗವನ್ನು ಮಲ್ಲಮ್ಮ ಪ್ರತಿಷ್ಠಾಪಿಸಿರುವ ಬಗ್ಗೆ ಹಲವು ಜನಪದ ಕತೆಗಳಿವೆ.
ಹಿರಿಯೂರಿನಲ್ಲಿ ನೆಲೆಸಿದ್ದ ಮಲ್ಲಮ್ಮ ಆಗಾಗ ಕಾಲ್ನಡಿಗೆಯಲ್ಲಿ ಶ್ರೀಶೈಲಕ್ಕೆ ಹೋಗಿ ತನ್ನ ಇಷ್ಟದೈವ ಚನ್ನಮಲ್ಲಿ ಕಾರ್ಜುನನ ದರ್ಶನ ಮಾಡಿ ಬರುತ್ತಿದ್ದಳು. ಒಮ್ಮೆ ಹೀಗೆಯೇ ಶ್ರೀಶೈಲಕ್ಕೆ ಪ್ರಯಾಣಿಸುವಾಗ ದಣಿವಾದಂತಾಗಿ ಎಲೆ ಅಡಿಕೆ ಮೆಲ್ಲಲು ಬಯಸಿ, ಅಡಿಕೆಯನ್ನು ಪುಡಿ ಮಾಡಿಕೊಳ್ಳಲು ಕಲ್ಲೊಂದನ್ನು ಎತ್ತಿಕೊಂಡು, ಪುಡಿ ಮಾಡಿದ ನಂತರ ಎಸೆದು ತನ್ನ ಪ್ರಯಾಣ ಮುಂದುವರಿಸುತ್ತಾಳೆ. ಮುಂದೆ ದಾರಿಯಲ್ಲಿ ಎರಡು–ಮೂರು ಬಾರಿ ಅಡಿಕೆ ಪುಡಿ ಮಾಡುವಾಗಲೂ ಅದೇ ಕಲ್ಲು ಸಿಕ್ಕಿದ್ದಲ್ಲದೆ ಮನೆಗೆ ಮರಳಿ ಬಂದಾಗಲೂ ತನ್ನ ಅಡಿಕೆ ಚೀಲದಲ್ಲಿ ಆ ಕಲ್ಲು ಗೋಚರಿಸುತ್ತದೆ. ಅಚ್ಚರಿಗೊಂಡ ಮಲ್ಲಮ್ಮ ಅದನ್ನು ಹೊರಗೆ ಎಸೆದಾಗ ಅದು ಮನೆಯ ಒಳಗಿದ್ದ ಒಳಕಲ್ಲಿನಲ್ಲಿ ಬಂದು ಕುಳಿತುಕೊಳ್ಳುತ್ತದೆ.
ಚನ್ನಮಲ್ಲಿಕಾರ್ಜುನನ ಸ್ಮರಣೆಯಲ್ಲಿ ಮಲಗಿದ್ದ ಮಲ್ಲಮ್ಮನಿಗೆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ದೇವರು ‘ಇನ್ನು ನಿನಗೆ ವಯಸ್ಸಾಯಿತು. ಶ್ರೀಶೈಲಕ್ಕೆ ಬರುವ ತೊಂದರೆ ತೆಗೆದುಕೊಳ್ಳಬೇಡ. ಕಲ್ಲಿನ ರೂಪದಲ್ಲಿ ಬಂದವನು ನಾನೇ, ಇಲ್ಲಿಯೇ ನನ್ನನ್ನು ಪೂಜಿಸು’ ಎಂದು ಹೇಳಿ ಮಾಯವಾದನಂತೆ. ಕನಸಿನಿಂದ ಎಚ್ಚರಗೊಂಡು ನೋಡಿದಾಗ ಒಳಕಲ್ಲಿನಲ್ಲಿ ಇದ್ದ ಕಲ್ಲು ಲಿಂಗವಾಗಿತ್ತು. ಈ ಘಟನೆಯ ನಂತರ ಮಲ್ಲಮ್ಮನ ಮನೆಯೇ ಮಲ್ಲೇಶ್ವರ ದೇಗುಲವಾಯಿತು.
ಮಲ್ಲೇಶ್ವರ ದೇಗುಲ ಉದ್ಭವವಾದ ಕೆಲವು ವರ್ಷಗಳ ಬಳಿಕ ನೆರೆಯ ಹೊಸದುರ್ಗ ತಾಲ್ಲೂಕಿನ ಯಗಟಿ ಎಂಬಲ್ಲಿ ಮಲ್ಲೇಶ್ವರಸ್ವಾಮಿಯ ರಥೋತ್ಸವ ನಡೆಯುತ್ತಿದ್ದಾಗ ಭೀಕರ ಗಾಳಿ–ಮಳೆ ಆರಂಭವಾಗಿ ವೇದಾವತಿ ನದಿಯಲ್ಲಿ ಪ್ರವಾಹ ಬಂದು, ಆ ಪ್ರವಾಹದಲ್ಲಿ ಕೊಚ್ಚಿ ಹೋದ ಮಲ್ಲೇಶ್ವರನ ರಥ ಹಿರಿಯೂರಿನ ಮಲ್ಲೇಶ್ವರ ದೇವಸ್ಥಾನದ ಹತ್ತಿರ ನಿಂತಿತು. ಆಗ ಭಕ್ತರು ರಥವನ್ನು ಎತ್ತಿ ದೇವಸ್ಥಾನದ ಹತ್ತಿರಕ್ಕೆ ತಂದರು.
ಅಂದಿನಿಂದ ಇಲ್ಲಿಯ ಮಲ್ಲೇಶ್ವರನನ್ನು ತೇರುಮಲ್ಲೇಶ್ವರ ಎಂದು ಕರೆಯಲಾಗುತ್ತಿದೆ ಎಂಬ ಪ್ರತೀತಿಯಿದೆ.
ಅಂದಿನಿಂದ ಪ್ರತಿ ವರ್ಷ ಮಾಘ ಮಾಸದ ಮಘಾ ನಕ್ಷತ್ರದಲ್ಲಿ ಸ್ವಾಮಿಯ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ತುಮಕೂರು, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲದೆ ಆಂಧ್ರ, ತಮಿಳುನಾಡುಗಳಿಂದಲೂ ಭಕ್ತರು ರಥೋತ್ಸವಕ್ಕೆ ಬರುತ್ತಾರೆ. ಕೋವಿಡ್ ಕಾರಣ ಈ ಬಾರಿ ರಥೋತ್ಸವ ಸರಳವಾಗಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.