ಸಿರಿಗೆರೆ: ನಮ್ಮ ರಾಜ್ಯದಲ್ಲಿರುವ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳನ್ನು ಹಾಗೂ ಈ ಇಲಾಖೆಗಳ ಕಚೇರಿಗಳನ್ನು ಒಗ್ಗೂಡಿಸುವ ಮೂಲಕ ಇಲಾಖೆಯಲ್ಲಿರುವ ಅಧಿಕಾರಿಗಳ ಕೊರತೆಯನ್ನು ನೀಗಿಸುವ ಕಾರ್ಯಕ್ಕೆ ಶೀಘ್ರ ಕಾರ್ಯಸೂಚಿ ನೀಡಲಾಗುವುದು’ ಎಂದು ಕೇಂದ್ರದ ಕೃಷಿ ಹಾಗೂ ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಗಳೊಂದಿಗೆ ನಡೆದ ರೈತರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೃಷಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳನ್ನು ಒಟ್ಟುಗೂಡಿಸುವುದರಿಂದ ಅಭಿವೃದ್ಧಿಯ ಕೆಲಸಗಳನ್ನು ಚುರುಕಾಗಿ ಮಾಡಬಹುದು. ಈಗ ಚಾಲ್ತಿಯಲ್ಲಿರುವ ಪದ್ಧತಿಯಿಂದ ಸರ್ಕಾರದ ಸೌಲಭ್ಯಗಳು ಕೆಲವೇ ಜನರ ಪಾಲಾಗುತ್ತಿವೆ. ಜೊತೆಗೆ ಈ ಇಲಾಖೆಗಳ ಮಧ್ಯೆ ಹೊಂದಾಣಿಕೆ ಇಲ್ಲದೇ ಹೋಗಿ ಅಭಿವೃದ್ಧಿಯ ಕೆಲಸಗಳು ತ್ವರಿತವಾಗಿ ಆಗುತ್ತಿಲ್ಲ. ಈ ಇಲಾಖೆಗಳನ್ನು ಒಟ್ಟುಗೂಡಿಸುವ ಅಗತ್ಯ ಇರುವಂತೆ ಕೃಷಿ ಮತ್ತು ತೋಟಗಾರಿಕೆಗೆ ವಿಶ್ವವಿದ್ಯಾಲಯಗಳನ್ನು ಒಂದುಗೂಡಿಸುವ ಅಗತ್ಯ ಇದೆ’ ಎಂದರು.
‘ಸಿರಿಧಾನ್ಯಗಳಿಗೆ ಹೆಚ್ಚು ಬೇಡಿಕೆ ಬಂದಿದ್ದು, ಚಿತ್ರದುರ್ಗ ಸಿರಿ ಧಾನ್ಯಗಳ ತವರು ಎಂದೇ ಹೇಳಲಾಗಿದೆ. ಹೆಚ್ಚು ಪೌಷ್ಟಿಕಾಂಶ, ಖನಿಜಾಂಶ ಇರುವ ಸಿರಿಧಾನ್ಯಗಳಿಗೆ ಬ್ರಾಂಡ್ ಮಾಡಿಕೊಂಡು ಅವುಗಳನ್ನು ಬೇರೆ ದೇಶಗಳಿಗೆ ರಪ್ತು ಮಾಡುವ ಕಡೆಗೆ ಉತ್ಪಾದಕ ಸಂಸ್ಥೆಗಳು ಮುಂದಾಗಬೇಕು’ ಎಂದು ಸಲಹೆ ನೀಡಿದರು.
‘ಅನಿವಾಸಿ ಭಾರತೀಯರೊಬ್ಬರು ದೇಶಕ್ಕೆ ಹಿಂದಿರುಗಿ ಹೊಸದಾಗಿ ಸ್ಟಾರ್ಟ್ ಆಪ್ ಆರಂಭ ಮಾಡಿ ₹55 ಕೋಟಿಯಷ್ಟು ವ್ಯವಹಾರ ಮಾಡಿ ಜಯಶೀಲರಾಗಿದ್ದಾರೆ. ಅಂತಹ ದಿಕ್ಕಿನಲ್ಲಿ ನಮ್ಮ ರೈತ ಉತ್ಪಾದಕ ಕಂಪನಿಗಳು ಯೋಚಿಸಬೇಕು’ ಎಂದು ರೈತರಿಗೆ ಕಿವಿಮಾತು ಹೇಳಿದರು.
‘ರೈತರ ನೈಜ ಸಮಸ್ಯೆಗಳನ್ನು ಅರಿಯಲು ಕೇಂದ್ರ ಸಚಿವರೊಂದಿಗೆ ಸಂವಾದ ಏರ್ಪಡಿಸಿದ್ದು, ರೈತರು ತಮ್ಮ ಸಮಸ್ಯೆಗಳನ್ನು ಅವರಲ್ಲಿ
ಹೇಳಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಲು ಯತ್ನಿಸಬೇಕು. ಫಸಲ್ ಬಿಮಾ ಯೋಜನೆಯಲ್ಲಿನ ನಿಯಮಾವಳಿಗಳನ್ನು ಬದಲಿಸಬೇಕು. ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತ ಜಮಾ ಆದಾಗ ಆ ಹಣವನ್ನು ಸಾಲಕ್ಕೆ ಬ್ಯಾಂಕಿನವರು ಮುರಿದುಕೊಳ್ಳಬಾರದು’ ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ, ಬೆಂಗಳೂರು ಐಸಿಆರ್ ನಿರ್ದೇಶಕ ಡಾ. ವಿ. ವೆಂಕಟಸುಬ್ರಹ್ಮಣ್ಯ, ಚಿತ್ರದುರ್ಗ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಭಾಗವಹಿಸಿದ್ದರು. ಕೆವಿಕೆ ಹಿರಿಯ ವಿಜ್ಞಾನಿ ಡಾ. ಟಿ.ಎನ್. ದೇವರಾಜ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.