ADVERTISEMENT

ದರ್ಶನ್‌ ಅಭಿಮಾನಿಯಿಂದ ಬೆದರಿಕೆ ಕರೆ: ಮಾಜಿ ಶಾಸಕ ತಿಪ್ಪಾರೆಡ್ಡಿ

ಚಿತ್ರದುರ್ಗದ ಮಾಜಿ ಶಾಸಕ ತಿಪ್ಪಾರೆಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:15 IST
Last Updated 13 ಜೂನ್ 2024, 14:15 IST
ಜಿ.ಎಚ್.ತಿಪ್ಪಾರೆಡ್ಡಿ
ಜಿ.ಎಚ್.ತಿಪ್ಪಾರೆಡ್ಡಿ   

ಚಿತ್ರದುರ್ಗ: ರೇಣುಕಸ್ವಾಮಿ ಕೊಲೆ ಖಂಡಿಸಿ ಬುಧವಾರ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ, ಪ್ರಕರಣದ ಆರೋಪಿ ನಟ ದರ್ಶನ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದರ್ಶನ್‌ ಅಭಿಮಾನಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಮಾಜಿ ಶಾಸಕ, ಬಿಜೆಪಿ ಮುಖಂಡ ಜಿ.ಎಚ್‌.ತಿಪ್ಪಾರೆಡ್ಡಿ ಅವರಿಗೆ ಕರೆ ಮಾಡಿ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದ್ದಾನೆ.

‘ರೇಣುಕಸ್ವಾಮಿ ಕೊಲೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಯಿತು. ಪ್ರತಿಭಟನೆ ನಡೆಸಿ ಮನೆಗೆ ತೆರಳುವಾಗ ಬಂದ ಕರೆಯನ್ನು ಸ್ವೀಕರಿಸಿದೆ. ನೀನು ತಿಪ್ಪಾರೆಡ್ಡಿನಾ? ಎಂದು ಕರೆ ಮಾಡಿದವನು ಪ್ರಶ್ನಿಸಿದ. ನಾನು ಹೌದು ಎಂದು ತಿಳಿಸಿದೆ. ಡಿ ಬಾಸ್‌ ವಿರುದ್ಧ ಮಾತನಾಡಲು ನಿನ್ನ ಬಳಿ ಸಾಕ್ಷಿ ಏನಿದೆ? ಎಂದು ಪ್ರಶ್ನಿಸಿದ. ನಿನ್ನ ಹೆಸರೇನು ಎಂದು ಕೇಳಿದ್ದಕ್ಕೆ ಆತ ಉತ್ತರಿಸಲಿಲ್ಲ. ಹೀಗಾಗಿ ನಾನು ಕರೆ ಸ್ಥಗಿತಗೊಳಿಸಿದೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಕಿಡಿಗೇಡಿಗಳ ಇಂತಹ ಕರೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಕರೆ ಬಂದ ಮೊಬೈಲ್‌ ಸಂಖ್ಯೆಯನ್ನು ಬ್ಲಾಕ್‌ ಮಾಡಿದ್ದೇನೆ. ದಬಾಯಿಸುವ ಇಂತಹ ಕರೆಗಳು ಹಿಂದೆಯೂ ಸಾಕಷ್ಟು ಬಂದಿದ್ದು ನಿರ್ಲಕ್ಷ್ಯ ವಹಿಸಿದ್ದೇನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ’ ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.