ADVERTISEMENT

ಕೃಷಿಯೊಂದನ್ನೇ ನಂಬಿದರೆ ಆರ್ಥಿಕ ಸಂಕಷ್ಟ: ರಜನೀಕಾಂತ್

ಉಪ ಕಸುಬುಗಳ ಮೂಲಕ ಆರ್ಥಿಕ ಚೇತರಿಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 14:36 IST
Last Updated 1 ಜನವರಿ 2024, 14:36 IST
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತರು ಹಾಗೂ ಇಲಾಖೆ ಅಧಿಕಾರಿಗಳು
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತರು ಹಾಗೂ ಇಲಾಖೆ ಅಧಿಕಾರಿಗಳು    

ಹಿರಿಯೂರು: ‘ರೈತರು ಕೃಷಿಯೊಂದನ್ನೇ ನಂಬಿ ಕುಳಿತರೆ ಆರ್ಥಿಕ ಸಂಕಷ್ಟ ಖಚಿತ. ಜೇನು ಸಾಕಣೆ, ಕುರಿ–ಮೇಕೆ ಸಾಕಣೆ, ಹೈನುಗಾರಿಕೆಯಂತಹ ಉಪ ಕಸುಬುಗಳ ಮೂಲಕ ಆರ್ಥಿಕ ಚೇತರಿಕೆ ಹೊಂದಬೇಕು’ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್. ರಜನೀಕಾಂತ್ ಸಲಹೆ ನೀಡಿದರು.

ತಾಲ್ಲೂಕಿನ ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಶನಿವಾರ ಜಿಲ್ಲೆಯ ರೈತರಿಗೆ ‘ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ’ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ಹವಾಮಾನ ವೈಪರೀತ್ಯದಲ್ಲಿ ರೈತರು ಕೃಷಿಯೊಂದನ್ನೇ ನಂಬಿ ಕೂರಬಾರದು. ಕೃಷಿಯೊಂದಿಗೆ ಉಪ ಕಸುಬುಗಳಿದ್ದರೆ ಒಂದರಲ್ಲಿ ನಷ್ಟವಾದರೆ ಮತ್ತೊಂದು ಕೈಹಿಡಿಯುತ್ತದೆ. ಸಮಗ್ರ ಕೃಷಿ ಪದ್ಧತಿಯಿಂದ ಮಾತ್ರ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಕುರಿ–ಮೇಕೆ ಸಾಕಣೆ ಮಾಡುವವರು ಉತ್ತಮ ತಳಿಯ ಆಯ್ಕೆ, ಕುರಿ ಶೆಡ್ ಮತ್ತು ಮೇವಿನ ನಿರ್ವಹಣೆ, ಆರೋಗ್ಯದ ಬಗ್ಗೆ ಇಂತಹ ತರಬೇತಿಗಳಲ್ಲಿ ಮಾಹಿತಿ ಪಡೆಯಬೇಕು’ ಎಂದು ಅವರು ಹೇಳಿದರು.

ADVERTISEMENT

ಪಶುಸಂಗೋಪನಾ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ದೊಡ್ಡಮಲ್ಲಯ್ಯ, ‘ಕುರಿ–ಮೇಕೆ ಸಾಕಣೆಯಲ್ಲಿ ಯಶಸ್ಸು ಕಂಡಿರುವ ಬಿ.ಜಿ. ಕೆರೆ ಗ್ರಾಮದ ವೀರಭದ್ರಪ್ಪ, ಶಿರಾ ತಾಲ್ಲೂಕಿನ ದಿವಂಗತ ದೊಡ್ಡಜ್ಜಿ, ಸುಬ್ಬಾರೆಡ್ಡಿ, ವೀರಕೆಂಪಣ್ಣ ಅವರ ಕುಟುಂಬಗಳನ್ನು ಸಂಪರ್ಕಿಸಬೇಕು. ರೈತರು ಸಂಘಟಿತರಾಗಿ ಕುರಿ ಫೆಡರೇಷನ್ ಆರಂಭಿಸಿದರೆ ಸಮಗ್ರವಾಗಿ ಮುನ್ನಡೆಯಬಹುದು’ ಎಂದು ಸಲಹೆ ನೀಡಿದರು.

ಚಿತ್ರದುರ್ಗದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಸಿ. ತಿಪ್ಪೇಸ್ವಾಮಿ ಮಾತನಾಡಿ, ‘ಜಿಲ್ಲೆಯಲ್ಲಿ 13.50 ಲಕ್ಷ ಕುರಿ ಮತ್ತು 3.85 ಲಕ್ಷ ಮೇಕೆಗಳಿದ್ದು, ರಾಜ್ಯದಲ್ಲಿಯೇ ಹೆಚ್ಚು ಕುರಿ– ಮೇಕೆಗಳಿರುವ ಜಿಲ್ಲೆಯಾಗಿದೆ. ಕುರಿ– ಮೇಕೆ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಸಾಕಣೆಗೆ ಉತ್ತಮ ಅವಕಾಶಗಳಿವೆ. ಡೆಕನಿ, ಬನ್ನೂರು ಮತ್ತು ಬಳ್ಳಾರಿ ತಳಿಯ ಕುರಿಗಳು, ನಂದಿದುರ್ಗ ತಳಿಯ ಮೇಕೆಗಳು ಹೆಸರುವಾಸಿಯಾಗಿವೆ. 25–30 ಕುರಿಗಳಿಗೆ ಒಂದು ಟಗರು ಸಾಕಿದಲ್ಲಿ ಗಣನೀಯವಾಗಿ ವಂಶಾಭಿವೃದ್ಧಿ ಆಗುತ್ತದೆ’ ಎಂದರು.

ಕೃಷಿ ಅಧಿಕಾರಿಗಳಾದ ಎಂ.ಜೆ. ಪವಿತ್ರಾ ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಪ್ರಯೋಜನ ಪಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು. ಕೃಷಿ ಅಧಿಕಾರಿ ಟಿ.ಪಿ.ರಂಜಿತಾ, ಕೃಷಿ ನಿರ್ದೇಶಕರಾದ ಉಷಾರಾಣಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.