ADVERTISEMENT

ಮೊಳಕಾಲ್ಮುರು | ಪರೀಕ್ಷಾರ್ಥ ನೀರು ಹರಿಸುವ ಪ್ರಕ್ರಿಯೆ ಆರಂಭ; ಚಿಗುರಿದ ಆಸೆ

ಜನರಲ್ಲಿ ಚಿಗುರಿದ ಆಸೆ, ಎಲ್ಲವೂ ಅಂದುಕೊಂಡಂತೆ ನಡೆದರೆ 4 ತಿಂಗಳಲ್ಲಿ ನೀರು ಪೂರೈಕೆ

ಕೊಂಡ್ಲಹಳ್ಳಿ ಜಯಪ್ರಕಾಶ
Published 5 ಜುಲೈ 2024, 6:28 IST
Last Updated 5 ಜುಲೈ 2024, 6:28 IST
ಮೊಳಕಾಲ್ಮುರು ತಾಲ್ಲೂಕಿನ ಹಾನಗಲ್‌ ಬಳಿ ಬುಧವಾರ ತುಂಗಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆಯ ನೀರು ಹರಿಯುವುದನ್ನು ಪರೀಕ್ಷಾರ್ಥ ಪ್ರಯೋಗ ಮಾಡುತ್ತಿರುವುದು.
ಮೊಳಕಾಲ್ಮುರು ತಾಲ್ಲೂಕಿನ ಹಾನಗಲ್‌ ಬಳಿ ಬುಧವಾರ ತುಂಗಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆಯ ನೀರು ಹರಿಯುವುದನ್ನು ಪರೀಕ್ಷಾರ್ಥ ಪ್ರಯೋಗ ಮಾಡುತ್ತಿರುವುದು.   

ಮೊಳಕಾಲ್ಮುರು: ಬಹುನಿರೀಕ್ಷಿತ ತುಂಗಭದ್ರಾ ಹಿನ್ನೀರು ಕುಡಿಯುವ ಯೋಜನೆಯಡಿ ಪರೀಕಾರ್ಥ ನೀರು ಹರಿಸುವ ಕಾರ್ಯ 2– 3 ದಿನಗಳಿಂದ ಆರಂಭಗೊಂಡಿದ್ದು ಜನರಲ್ಲಿ ತುಸು ಆಸೆ ಚಿಗುರೊಡೆದಿದೆ.

ಯಾವುದೇ ಶಾಶ್ವತ ನೀರಿನ ಮೂಲವನ್ನು ಹೊಂದದ ಕಾರಣ, ಸದಾ ತೀವ್ರ ಕುಡಿಯುವ ನೀರಿನ ಸಮಸ್ಯೆ ಈ ಭಾಗದ ಜನರನ್ನು ಕಾಡುತ್ತಿತ್ತು. ಫ್ಲೋರೈಡ್‌ ಸಮಸ್ಯೆಯಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಬಗ್ಗೆ ದೂರು ಬಂದ ಕಾರಣ 2013ರಲ್ಲಿ ತುಂಗಭದ್ರಾ ಹಿನ್ನೀರು ಬಳಸಿಕೊಂಡು ಶಾಶ್ವತ ಕುಡಿಯುವ ನೀರು ನೀಡುವ ಯೋಜನೆಗೆ ರಾಜ್ಯಸರ್ಕಾರ ಅನುಮತಿ ನೀಡಿತ್ತು.

ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಬಳಿಯ ಶಿವಪುರ (ಚಿಬಿರಿ) ಬಳಿಯಿಂದ ಹಿನ್ನೀರು ಎತ್ತಿ ನೀರು ಹರಿಸುವುದು ಯೋಜನೆಯ ಗುರಿ. ₹ 2,130 ಕೋಟಿ ವೆಚ್ಚದ ಈ ಕಾಮಗಾರಿ 2018ರಲ್ಲಿ ಆರಂಭವಾಗಿತು. ಹೈದರಾಬಾದ್‌ ಮೂಲದ ಕಂಪನಿ ಗುತ್ತಿಗೆಯನ್ನು ಪಡೆದಿತ್ತು. ಕಾಮಗಾರಿ ಆರಂಭದಲ್ಲಿ ವಿಳಂಬದ ಜತೆಗೆ ಕೋವಿಡ್‌ ಸಮಯದಲ್ಲಿ ಕಾರ್ಯ ಸ್ಥಗಿತವಾದ ಪರಿಣಾಮ 3 ವರ್ಷಗಳ ನಂತರ ಯೋಜನೆಯು ಪ್ರಾಯೋಗಿಕವಾಗಿ ನೀರು ಹರಿಸುವ ಹಂತಕ್ಕೆ ತಲುಪಿದೆ.

ADVERTISEMENT

ವಿಜಯನಗರ ಜಿಲ್ಲೆಯ ಕೂಡ್ಲಿಗಿ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕು, ತುರುವನೂರು ಹೋಬಳಿ, ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ನೀಡುವುದು ಉದ್ದೇಶವಾಗಿದೆ. ಈಗಾಗಲೇ ಗ್ರಾಮಗಳಿಗೆ ಪೈಪ್‌ ಹಾಕುವ ಕಾರ್ಯ, ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ವಾಲ್ವ್‌, ನಿಪ್ಪಲ್ ಅಳವಡಿಕೆ ಕಾರ್ಯ ಪೂರ್ಣವಾಗಿದೆ.

‘ಅರಣ್ಯ ಪ್ರದೇಶದಲ್ಲಿ ಮುಖ್ಯಪೈಪ್‌ ಹಾಕುವುದಕ್ಕೆ ಅರಣ್ಯ ಇಲಾಖೆ ಅನುಮತಿ ಸಿಗದಿರುವುದು ವಿಳಂಬಕ್ಕೆ ಕಾರಣವಾಗಿತ್ತು. ಈಗ ಎಲ್ಲಾ ಪೂರ್ಣವಾಗಿದ್ದು 2–3 ದಿನಗಳಿಂದ ಮುಖ್ಯ ಪೈಪುಗಳಲ್ಲಿ ನೀರು ಹರಿಯುವುದು ಮತ್ತು ಸೋರುವಿಕೆಯನ್ನು ಪರೀಕ್ಷೆ ಮಾಡಲಾಗುತ್ತಿದೆ‘ ಎಂದು ಕಂಪನಿ ಸಿಬ್ಬಂದಿ ತಿಳಿಸಿದರು.

ಶಿವಪುರದಿಂದ ಮರಿಯಮ್ಮನಹಳ್ಳಿ 30 ಕಿ.ಮೀ ದೂರವಿದೆ. ಅಲ್ಲಿಂದ ತುಮಕೂರ್ಲಹಳ್ಳಿ 44 ಕಿ.ಮೀ ಇದ್ದು, ಇಲ್ಲಿಂದ ಚಳ್ಳಕೆರೆ ಗಡಿಯ ಕೆಂಚಮ್ಮನಹಳ್ಳಿ ಅಂದಾಜು 100 ಕಿ.ಮೀ ಇದೆ. ಇಲ್ಲಿ ವಿಭಾಗ ಮಾಡಿ ಕಾಮಗಾರಿ ರೂಪಿಸಲಾಗಿದೆ. ತುಮಕೂರ್ಲಹಳ್ಳಿ ತನಕ ನೀರಿನ ಹರಿವು ಪರೀಕ್ಷಿಸಲಾಗಿದೆ. ಕೆಂಚಮ್ಮನಹಳ್ಳಿ ಸಮೀಪದ ನಿಡಗಲ್ಲುವಿನಿಂದ 20 ಕಿ.ಮೀ ದೂರದ ಪಾವಗಡಕ್ಕೆ ನೀರೆತ್ತಿ ಪೂರೈಸಲಾಗುವುದು. ಪರೀಕ್ಷಾರ್ಥ ನೀರು ಹರಿಸುತ್ತಿರುವುದು ಪೈಪ್‌ಗಳ ಸ್ವಚ್ಛತೆ ಸಹ ಮಾಡಲಾಗುತ್ತಿದೆ. 1,100ಕ್ಕೂ ಹೆಚ್ಚು ಜನವಸತಿ ಪ್ರದೇಶಗಳಿಗೆ ಇದರಿಂದ ಕುಡಿಯುವ ನೀರು ಹರಿಯಲಿದೆ ಎಂದು ಸಿಬ್ಬಂದಿ ಹೇಳಿದರು.

‘3 ದಿನಗಳಲ್ಲಿ 40 ಕಿ.ಮೀ.ನಷ್ಟು ಮುಖ್ಯ ಪೈಪ್‌ ಪರೀಕ್ಷೆ ಪೂರ್ಣವಾಗಿದೆ. ಈ ಕಾರ್ಯಕ್ಕೆ ಅಂದಾಜು 20 ದಿನ ಹಿಡಿದಿದೆ. ಈಗ ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಯುತ್ತಿದೆ. ಇದಾದ ನಂತರ ಗ್ರಾಮಗಳಿಗೆ ಅಳವಡಿಸಿರುವ ಉಪ ಪೈಪ್‌ ಪರೀಕ್ಷೆ ಮಾಡಲಾಗುವುದು. ನಂತರ ಇಲಾಖೆಗೆ ವ್ಯಾಪ್ತಿಗೆ ನೀಡುವ ಕಾರ್ಯಕ್ಕೆ 6 ತಿಂಗಳಿಗೂ ಹೆಚ್ಚಿನ ಸಮಯ ಬೇಕಾಗಬಹುದು’ ಎಂದು ಅಧಿಕಾರಿಗಳು ತಿಳಿಸಿದರು.

‘ಯೋಜನೆ ಆರಂಭದಿಂದಲೂ ಗುತ್ತಿಗೆದಾರರ ಜತೆ ಸಂಪರ್ಕ ಇಟ್ಟುಕೊಂಡು ತೊಡಕುಗಳನ್ನು ನಿವಾರಿಸಲಾಗಿದೆ. ಎಲ್ಲಾ ನಿರೀಕ್ಷೆಯಂತೆ ಆದಲ್ಲಿ ಮುಂದಿನ ಡಿಸೆಂಬರ್‌ ಅಥವಾ ಜನವರಿಯಲ್ಲಿ ಜನತೆಗೆ ಕುಡಿಯುವ ನೀರು ದೊರೆಯುವ ನಿರೀಕ್ಷೆ ಹೊಂದಲಾಗಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.

ಮುಖ್ಯ ಪೈಪ್‌ ಪರೀಕ್ಷೆ ನಂತರ ಗ್ರಾಮಗಳಲ್ಲಿ ನಿರ್ಮಿಸಿರುವ ಟ್ಯಾಂಕ್‌ಗಳಿಗೆ ನೀರು ಹರಿಸಲಾಗುವುದು. ನಂತರ ಮನೆಗಳಿಗೆ ನೀರು ತಲುಪಲಿದೆ. ಈ ಕಾರ್ಯಕ್ಕೆ 4 ತಿಂಗಳ ಸಮಯ ಬೇಕಾಗುವ ಅಂದಾಜಿದೆ.
-ಕೆ.ಆರ್.‌ ಪ್ರಕಾಶ್‌, ಇಒ ತಾ.ಪಂ ಮೊಳಕಾಲ್ಮುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.