ಮೊಳಕಾಲ್ಮುರು: ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಗೇಟ್ ಕಿತ್ತುಹೋಗಿ ಅಪಾರ ಪ್ರಮಾಣದ ನೀರು ಹೊರ ಹರಿಯುತ್ತಿರುವುದು, ಬರಪೀಡಿತ ತಾಲ್ಲೂಕುಗಳ ಜನರ ಬಹು ನಿರೀಕ್ಷಿತ ತುಂಗಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆ ಮೇಲೂ ಈ ವರ್ಷ ಪರಿಣಾಮ ಬೀರುವ ಆತಂಕ ಎದುರಾಗಿದೆ.
10 ವರ್ಷಗಳಿಂದ ಈ ಯೋಜನೆ ಅಡಿ ನೀರು ನೀಡುವ ಕಾರ್ಯಗಳು ನಡೆಯುತ್ತಿವೆ. ಯೋಜನೆ ಅಡಿ ₹ 2,200 ಕೋಟಿ ವೆಚ್ಚದಲ್ಲಿ ತುಮಕೂರು ಜಿಲ್ಲೆಯ ಪಾವಗಡ, ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿ, ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕು ಮತ್ತು ಪಕ್ಕದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ನೀಡಲು ಉದ್ದೇಶಿಸಲಾಗಿದೆ.
ಇದಕ್ಕಾಗಿ ಮರಿಯಮ್ಮನಹಳ್ಳಿ ಸಮೀಪದ ಶಿವಪುರ ಬಳಿ ಜಲಾಶಯದ ಹಿಂದೆ ಜಾಕ್‌ವಾಲ್ ನಿರ್ಮಿಸಲಾಗಿದೆ. ಇಲ್ಲಿಂದ ನೀರನ್ನು ಲಿಫ್ಟ್ ಮಾಡಿ ಗುರುತ್ವಾಕರ್ಷಣೆ ಬಲದಿಂದಲೇ 200ಕ್ಕೂ ಹೆಚ್ಚು ಕಿ.ಮೀ. ದೂರದ ಪಾವಗಡ ತನಕ ಪೈಪ್ ಮೂಲಕ ನೀರು ಹರಿಸಲಾಗುತ್ತದೆ. ಈಗಾಗಲೇ ಯೋಜನೆಯಲ್ಲಿ ಮುಖ್ಯ ಪೈಪು, ನೀರು ಪೂರೈಸುವ ಉಪ ಪೈಪುಗಳು ಮತ್ತು ಟ್ಯಾಂಕ್‌ಗಳನ್ನು ನಿರ್ಮಿಸಿದ್ದು, ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯ ನಡೆಯುತ್ತಿದೆ. ವರ್ಷದ ಕೊನೆಗೆ ಉದ್ಘಾಟನೆಯ ಉದ್ದೇಶವೂ ಇತ್ತು ಎಂದು ತಿಳಿದುಬಂದಿದೆ.
ಮುಖ್ಯಪೈಪ್‌ಗಳಲ್ಲಿ ಪರೀಕ್ಷಾರ್ಥ ನೀರು ಹರಿಸುವ ಕಾರ್ಯ ಯಶಸ್ವಿಯಾಗಿದೆ. ಜತೆಗೆ ಪೈಪ್ ಶುದ್ಧಗೊಳಿಸುವ ಕಾರ್ಯವೂ ನಡೆಯುತ್ತಿದೆ. ಗ್ರಾಮಗಳಿಗೆ ಅಳವಡಿಸಿರುವ ಪೈಪ್‌ಗಳಲ್ಲಿ ನೀರು ಹರಿಸುವ ಪ್ರಾಯೋಗಿಕ ಕಾರ್ಯ ಮಾಡಬೇಕಿದೆ. ತುಂಗಭದ್ರಾ ಅಣೆಕಟ್ಟೆಯ ಗೇಟ್ ಮುರಿದು ಆಗಿರುವ ಸಮಸ್ಯೆಯು ಈ ಯೋಜನೆ ಮೇಲೆ ಅಷ್ಟಾಗಿ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಬೇಸಿಗೆಯಲ್ಲಿ ನೀರಿನ ಲಭ್ಯತೆ ಕಡಿಮೆಯಾದಲ್ಲಿ 2-3 ತಿಂಗಳು ಸಮಸ್ಯೆಯಾಗಬಹುದು ಎಂದು ಯೋಜನೆ ಎಂಜಿನಿಯರ್ ತಿಳಿಸಿದರು.
ಜಲಾಶಯದಲ್ಲಿ ಇಂತಿಷ್ಟು ಅಡಿ ನೀರು ಇದ್ದಲ್ಲಿ ಮಾತ್ರ ಮಳೆಗಾಲದಲ್ಲಿ ಲಿಫ್ಟ್ ಮಾಡಲು ಅವಕಾಶ ನೀಡಲಾಗುತ್ತದೆ. ನಂತರ, ಹಿನ್ನೀರು ಬಳಸಿಕೊಂಡು ನೀರು ನೀಡಲಾಗುವುದು. ಗೇಟ್ ದುರಸ್ತಿಗಾಗಿ ಜಲಾಶಯ ನೀರು ಹೊರಬಿಡುತ್ತಿರುವುದು ಯೋಜನೆ ಮೇಲೂ ಪ್ರಭಾವ ಬೀರಬಹುದು. ಇದು ಊಹಿಸಲೂ ಆಗದಂತಹ ಸ್ಥಿತಿಯಾಗಿರುವ ಕಾರಣ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕಿದೆ ಎಂದು ಅವರು ಹೇಳಿದರು.
ಇನ್ನೂ ಮಳೆಗಾಲ ಇದೆ. ಉತ್ತಮವಾಗಿ ಮಳೆ ಸುರಿದಲ್ಲಿ ಜಲಾಶಯ ಮತ್ತೆ ತುಂಬಬಹುದು. ಒಂದು ವೇಳೆ ಜಲಾಶಯಕ್ಕೆ ನಿರೀಕ್ಷೆಯಷ್ಟು ನೀರು ಬಾರದಿದ್ದಲ್ಲಿ ಹನಿ ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆಗೆ ತೊಂದರೆಯಾಗಬಹುದು. ಕುಡಿಯುವ ನೀರಿನ ಯೋಜನೆಗೆ ತೊಂದರೆಯಾಗುವುದಿಲ್ಲ. ಹಿನ್ನೀರು ಯೋಜನೆ ಹೊಸದಾಗಿದ್ದು ಇನ್ನಷ್ಟೇ ಸೇವೆ ಆರಂಭವಾಗಬೇಕಿದೆ. ಇದರಿಂದ ನಿರ್ದಿಷ್ಟವಾಗಿ ಯಾವ ಪರಿಣಾಮ ಬೀರುತ್ತದೆ ಎಂದು ಹೇಳವುದು ಕಷ್ಟ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ಲೋರೈಡ್‌ಯುಕ್ತ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಈ ಭಾಗದ ಜನರು, ಇನ್ನೇನು ಶುದ್ಧ ನೀರು ಸಿಗಲಿದೆ ಎಂಬ ಸಂತಸದಲ್ಲಿದ್ದರು. ಜಲಾಶಯ ಖಾಲಿ ಆಗುತ್ತೊರುವುದು ಬೇಸರ ಮೂಡಿಸಿದೆ. ಹಿನ್ನೀರು ಫಲಾನುಭವಿ ಕ್ಷೇತ್ರದ ಶಾಸಕರು ಅಧಿಕಾರಿಗಳು ಜಲಾಶಯಕ್ಕೆ ಭೇಟಿ ನೀಡಿ ಯೋಜನೆ ಮೇಲೆ ಆಗಬಹುದಾದ ತೊಂದರೆ ಕುರಿತು ಮಾಹಿತಿ ನೀಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ಕಡಿಮೆಯಾದಲ್ಲಿ ಹಿನ್ನೀರು ಯೋಜನೆ ಅನುಷ್ಠಾನ ಸಹಜವಾಗಿ ವಿಳಂಬ ಆಗುತ್ತದೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಅನಿರೀಕ್ಷಿತ ಘಟನೆ ಬೇಸರ ಆಘಾತ ತರಿಸಿದೆ.
-ಎನ್.ವೈ. ಗೋಪಾಲಕೃಷ್ಣ ಶಾಸಕ ಮೊಳಕಾಲ್ಮುರು
ಜಲಾಶಯದಲ್ಲಿ ಅತ್ಯಂತ ಕಡಿಮೆ ನೀರು ಇದ್ದಾಗಲೂ ನೀರು ನೀಡುವ ರೀತಿಯಲ್ಲಿ ಯೋಜನೆ ನೀಲನಕ್ಷೆ ತಯಾರಿಸಲಾಗಿದೆ. ಘಟನೆಯಿಂದ ಹಿನ್ನೀರು ಯೋಜನೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ವರ್ಷಪೂರ್ತಿ ನೀರು ಸಿಗಲಿದೆ.
-ಟಿ. ರಘುಮೂರ್ತಿ ಶಾಸಕ ಚಳ್ಳಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.