ADVERTISEMENT

ವೀರಶೈವ ಪದ ಹುಟ್ಟಿದ್ದು ಹಕ್ಕು ಚಲಾಯಿಸುವುದಕ್ಕಲ್ಲ: ಸಿದ್ಧರಾಮ ಸ್ವಾಮೀಜಿ

‘ವಚನ ಕಮ್ಮಟ’ ಕಾರ್ಯಕ್ರಮದಲ್ಲಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 6:19 IST
Last Updated 5 ಜುಲೈ 2024, 6:19 IST
ಹೊಸದುರ್ಗದ ಸಾಣೇಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ವಚನ ಕಮ್ಮಟ ಶಿಬಿರದಲ್ಲಿ ಗದಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿದರು. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಇದ್ದಾರೆ
ಹೊಸದುರ್ಗದ ಸಾಣೇಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ವಚನ ಕಮ್ಮಟ ಶಿಬಿರದಲ್ಲಿ ಗದಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿದರು. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಇದ್ದಾರೆ   

ಹೊಸದುರ್ಗ: ‘ವೀರಶೈವ’ ಎನ್ನುವ ಪದ ವಚನಗಳಲ್ಲಿ ಬಳಕೆಯಾಗಿಲ್ಲ. ಈ ಪದ ಮೊಟ್ಟಮೊದಲು ಬಳಕೆಯಾಗಿರುವುದು ಭೀಮಕವಿಯ ‘ಬಸವ ಪುರಾಣ’ದಲ್ಲಿ. ಇಂದು ವೀರಶೈವ ಪದದ ಮೇಲೆ ಹಕ್ಕು ಸಾಧಿಸುವ ವ್ಯಕ್ತಿಗಳು ನಮ್ಮ ಮಧ್ಯೆ ಇದ್ದಾರೆ. ವೀರಶೈವ ಪದ ಪ್ರಾಮುಖ್ಯತೆಗೆ ಹುಟ್ಟಿಕೊಂಡಿದೆಯೇ ಹೊರತು ಹಕ್ಕು ಚಲಾಯಿಸುವುದಕ್ಕಲ್ಲ’ ಎಂದು ಗದಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಪ್ರತಿಪಾದಿಸಿದರು.

ತಾಲ್ಲೂಕಿನ ಸಾಣೇಹಳ್ಳಿಯಲ್ಲಿನ ಶ್ಯಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರದಲ್ಲಿ ಗುರುವಾರ ನಡೆದ ವಚನ ಕಮ್ಮಟ ನಾಲ್ಕನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ತಂತ್ರ, ಕಾರ್ಯತಂತ್ರ, ಕುತಂತ್ರದಿಂದ ವೀರಶೈವ ಪದವನ್ನು ಸೇರಿಸಿದರು. ಬಸವಾದಿ ಶರಣರು ಸಂಸ್ಕೃತ ಭಾಷೆಗೆ ಹೆಚ್ಚು ಮಹತ್ವ ಕೊಡಲಿಲ್ಲ’ ಎಂದು  ಹೇಳಿದರು.

ADVERTISEMENT

‘ವೀರಶೈವ ಅಥವಾ ಲಿಂಗಾಯತ ಎನ್ನುವ ಪದಗಳಲ್ಲಿ ಯಾವುದು ಯೋಗ್ಯ, ಯಾವುದು ಅಯೋಗ್ಯ ಎನ್ನುವುದು ಸ್ಪಷ್ಟವಾಗಿ ಬರಬೇಕಾದರೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಬೇಕು. ವೀರಶೈವ ಹಾಗೂ ಲಿಂಗಾಯತ ಪದಗಳನ್ನಿಟ್ಟುಕೊಂಡು ಹೋಗುವವರ ಸಂಖ್ಯೆ ನಮ್ಮಲ್ಲಿ ಹೆಚ್ಚಿದ್ದಾರೆ. ಬಸವಾದಿ ಶಿವಶರಣರು ವಚನಗಳಲ್ಲಿ ಲಿಂಗಾಯತ ಪದವನ್ನು ಬಳಕೆ ಮಾಡಿದ್ದಾರೆ. ಆದರೆ, ಲಿಂಗಾಯತಕ್ಕೆ ಪರ್ಯಾಯವಾಗಿ ವೀರಶೈವ ಎನ್ನುವ ಪದ ಬಂದು ಮೇಲುಗೈ ಸಾಧಿಸಿದ್ದನ್ನು ನೋಡುತ್ತಿದ್ದೇವೆ’ ಎಂದು ಹೇಳಿದರು.

‘ಲಿಂಗಾಯತರು ಕೃಷಿ ಕಾಯಕ ಮಾಡುವಂಥವರು. ಕೃಷಿ ಕಾಯಕ ಯಾರೇ ಮಾಡಿದರೂ ಅವರನ್ನು ಶೂದ್ರ ವರ್ಗಕ್ಕೆ ಸೇರಿಸಲು ಪ್ರತಿಪಾದನೆ ಮಾಡಿದರು. ಅಖಿಲ ಭಾರತ ವೀರಶೈವ ಸಭಾವು ಒತ್ತಾಯದಿಂದ ಬಂದಿರುವಂತಹದ್ದು. ಆದರೆ, ಈಗ ಅದು ಲಿಂಗಾಯತ ಸಭಾ ಎಂದಾಗಬೇಕು’ ಎಂದು ಒತ್ತಾಯಿಸಿದರು.

‘ವೈದಿಕ ಪುರೋಹಿತ ಶಾಹಿಯಿಂದ ಸಾಮಾನ್ಯ ಜನರನ್ನು ಮುಕ್ತಗೊಳಿಸಬೇಕು ಎನ್ನುವ ಕಾರಣಕ್ಕೆ ಬಸವಾದಿ ಶಿವಶರಣರು ವಚನ ಚಳವಳಿ ಮಾಡಿದರು. ಪೂಜಾರಿ ಪುರೋಹಿತರ ಮಧ್ಯೆ ದೊಡ್ಡ ಕಂದಕ ಸೃಷ್ಟಿಯಾಯಿತು. ಇದನ್ನು ಮನಗಂಡೇ ಬಸವಾದಿ ಶರಣರು ಅಂಗೈಯಲ್ಲಿ ಇಷ್ಟಲಿಂಗವನ್ನು ಕರುಣಿಸಿದರು. ನಮ್ಮ ದೇವರನ್ನು ನಾವೇ ಪೂಜಿಸಬೇಕು ಎನ್ನುವ ಧಾರ್ಮಿಕ ಹಿನ್ನಲೆಯಲ್ಲಿ ಇಷ್ಟಲಿಂಗವನ್ನು ಪೂಜಿಸಬಹುದು ಎಂದು ಇಷ್ಟಲಿಂಗದ ಪರಿಕಲ್ಪನೆಯನ್ನು ತಂದುಕೊಟ್ಟರು’ ಎಂದು ಹೇಳಿದರು.

‘ಹಿಂದೂ ಎನ್ನುವುದು ಧರ್ಮವಲ್ಲ. ಅದೊಂದು ಭೌಗೋಳಿಕ ಪ್ರದೇಶ. ಅದೊಂದು ಜೀವನದ ಮಾರ್ಗ. ವೈದಿಕ ಧರ್ಮವನ್ನು ಹಿಂದೂ ಧರ್ಮವೆಂದು ಹೇಳುವವರಿವರು. ಆದರೆ, ಹಿಂದೂ ಎನ್ನುವುದು ಧರ್ಮವಲ್ಲ. ಹಿಂದೂ ಧರ್ಮಕ್ಕೂ ಲಿಂಗಾಯತ ಧರ್ಮಕ್ಕೂ ತುಂಬಾ ವ್ಯತ್ಯಾಸ ಇದೆ. ಲಿಂಗವಂತ ಧರ್ಮ ಏಕ ದೇವನಿಷ್ಠೆ ಹೊಂದಿದವರು. ಹಿಂದೂಗಳ ಪ್ರಭಾವಕ್ಕೆ ಒಳಗಾಗಿ ಲಿಂಗಾಯತರು ಸಹ ಹೋಮ, ಹವನ ಇತ್ಯಾದಿ ವೈದಿಕ ಆಚರಣೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ನಾವೆಲ್ಲರೂ ಹಿಂದೂಗಳಲ್ಲ ಎನ್ನುವುದನ್ನು ಇಲ್ಲಿ ಸೇರಿರುವ ಎಲ್ಲ ಮಠಾಧಿಪತಿಗಳು ಸ್ಪಷ್ಟವಾಗಿ ಹೇಳುವ ಧ್ವನಿ ಬೆಳೆಸಿಕೊಳ್ಳಬೇಕು’ ಎಂದು ತಿಳಿ ಹೇಳಿದರು.

‘ಅಷ್ಟಾವರಣ’ ಕುರಿತು ಮಾತನಾಡಿದ ಬೆಂಗಳೂರಿನ ಬಸವರಾಜ ಸಬರದ ಅವರು, ‘ವಚನ ಸಾಹಿತ್ಯದ ವಿನ್ಯಾಸದಲ್ಲಿ ಧಾರ್ಮಿಕ ಪರಿಕಲ್ಪನೆಗಳಿವೆ. ಚಳವಳಿಗೂ ಧರ್ಮಕ್ಕೂ ಸಂಬಂಧವಿಲ್ಲ. ಜಗತ್ತಿನಲ್ಲಿ ಇವೆರಡೂ ಎಲ್ಲೂ ಕೂಡಿಲ್ಲ. ಆದರೆ, ಶರಣರು ಇವೆರಡನ್ನೂ ಒಂದುಗೂಡಿಸಿದರು. ಶರಣರ ದೃಷ್ಟಿಯಲ್ಲಿ ಧರ್ಮ, ಸಾಹಿತ್ಯ, ಚಳವಳಿ ಬೇರೆ ಬೇರೆ ಅಲ್ಲ. ಅನೇಕ ಗುರುಪರಂಪರೆಯ ಹುಟ್ಟಿಗೆ ಶರಣರ ಗುರುಸಿದ್ಧಾಂತ ಕಾರಣವಾಯಿತು. ಗುರು ಶಿಷ್ಯನನ್ನು ಗುರುವನ್ನಾಗಿ ಮಾಡಬೇಕು. ಕಾವಿ ತೊಟ್ಟವರು ಜಂಗಮರಲ್ಲ; ಬಿಳಿಬಟ್ಟೆ ತೊಟ್ಟವರು ಭಕ್ತರಲ್ಲ. ಇಷ್ಟಲಿಂಗ ತೊಳೆದ ನೀರೇ ಪಾದೋದಕ. ಪಾದೋದಕ ಬರೀ ನೀರಲ್ಲ. ಸಿದ್ಧರಾಮೇಶ್ವರರು ಲಿಂಗದ ಕಳೆಯೇ ಜಂಗಮ ಎನ್ನುವರು’ ಎಂದು ಹೇಳಿದರು.

ಶಿವ ಸಂಚಾರದ ಕಲಾವಿದರು ವಚನ ಗೀತೆಗಳನ್ನು ಹಾಡಿದರು. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೋಟಗಿ ಮಠದ ಚನ್ನಬಸವ ಸ್ವಾಮೀಜಿ ಸೇರಿ 70 ಶಿಬಿರಾರ್ಥಿಗಳಿದ್ದರು.

9ನೇ ತರಗತಿ ಪಠ್ಯ ಪುಸ್ತಕದಲ್ಲಿ ವಿವಾದಗಳಿಲ್ಲ

9ನೇ ತರಗತಿಯ ಪಠ್ಯವು ಬಸವಣ್ಣನವರ ಬಗ್ಗೆ ಯಾವುದೇ ವಿವಾದಗಳಿಲ್ಲದೇ ಪರಿಷ್ಕರಣೆಯಾಗಿದೆ. ಆದರೆ ಇಂದು  ವೀರಶೈವರು ತಮ್ಮ ಅಸ್ಥಿತ್ವ ಉಳಿಸಿಕೊಳ್ಳುವುದಕ್ಕಾಗಿ ಅದರ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದಾರೆ. ಆದ್ದರಿಂದ ನಾವೆಲ್ಲಾ ಸೇರಿ ಲಿಂಗಾಯತ ಧರ್ಮದ ಅಸ್ಮಿತೆಯನ್ನು ಉಳಿಸುವ ಕೆಲಸ ಮಾಡಬೇಕು. – ಗದಗಿನ ತೋಂಟದ ಸಿದ್ಧರಾಮ ಸ್ವಾಮೀಜಿ

ವೀರಶೈವ ಮತ್ತು ಲಿಂಗಾಯತ ವಿಭಿನ್ನ. ವೀರಶೈವ ಎನ್ನುವ ಪದ ಶೈವದಿಂದ ಬಂದಿದೆ. ವೀರಶೈವ ಪದವನ್ನು ಕೆಲವು ಸಂಸ್ಕೃತ ಪದಗಳು ಪ್ರತಿಪಾದಿಸುತ್ತಿರುವುದನ್ನು ಕಾಣುತ್ತೇವೆ.
-ತೋಂಟದ ಸಿದ್ಧರಾಮ ಸ್ವಾಮೀಜಿ, ಗದಗಿನ ತೋಂಟದಾರ್ಯ ಮಠ

ವಚನ ಕಮ್ಮಟದಲ್ಲಿ ಇಂದು ಗೋಷ್ಠಿ 18: ವಚನಗಳ ಭಾಷಾ ಪ್ರಯೋಗ ಮೈಸೂರಿನ ಓ.ಎಲ್. ನಾಗಭೂಷಣಸ್ವಾಮಿ ಅವರಿಂದ ಸಮಯ: ಬೆಳಿಗ್ಗೆ 9.30ರಿಂದ 11 ಗೋಷ್ಠಿ 19: ಬೆಡಗಿನ ವಚನಗಳು ಸಂತೆ ಕಡೂರಿನ ಬಸವ ನವಲಿಂಗ ಶರಣರಿಂದ ಸಮಯ: ಬೆಳಿಗ್ಗೆ 11ರಿಂದ 1 ಸಮಾರೋಪ ಸಮಾರಂಭ: ಸಾನ್ನಿಧ್ಯ ಇಳಕಲ್‌ನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನದ ಗುರುಮಹಾಂತ ಸ್ವಾಮೀಜಿ ಹಾಗೂ ಬೆಂಗಳೂರಿನ ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ. ಸ್ಥಳ: ಶಾಮನೂರು ಶಿವಶಂಕರಪ್ಪ ರಂಗಮಂದಿರ ಹೊಸದುರ್ಗ ಸಮಯ: ಮಧ್ಯಾಹ್ನ 3ಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.