ADVERTISEMENT

ಸಿಎಂ ಸಿದ್ದರಾಮಯ್ಯ–ಡಿಕೆಶಿ ನಡುವೆ ಉತ್ತಮ ಹೊಂದಾಣಿಕೆಯಿದೆ: ವಚನಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 13:39 IST
Last Updated 30 ಜೂನ್ 2024, 13:39 IST
ವಚನಾನಂದ ಸ್ವಾಮೀಜಿ
ವಚನಾನಂದ ಸ್ವಾಮೀಜಿ   

ಚಿತ್ರದುರ್ಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಉತ್ತಮ ಹೊಂದಾಣಿಕೆ ಇದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಅಪ್ರಸ್ತುತ’ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಭಾನುವಾರ ಹೇಳಿದರು.

‘ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಸೇರಿ ಟಿ–20 ಕ್ರಿಕೆಟ್‌ ವಿಶ್ವಕಪ್ ಕಿರೀಟ ಗೆದ್ದುಕೊಟ್ಟಿದ್ದಾರೆ. ಸಿದ್ದರಾಮಯ್ಯ ಮತ್ತು  ಡಿ.ಕೆ.ಶಿವಕುಮಾರ್‌ ಅವರು ಕರ್ನಾಟಕದ ಪಾಲಿಗೆ ಕೊಹ್ಲಿ–ರೋಹಿತ್‌ ಜೋಡಿಯಂತೆ ಇದ್ದಾರೆ. ತತ್ವ, ಸಿದ್ಧಾಂತದ ಆಧಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯ ಇದೆ. ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಮಾತನಾಡಬಾರದು ಎಂದು ಡಿ.ಕೆ.ಶಿವಕುಮಾರ್‌ ಅವರೇ ಸೂಚಿಸಿದ್ದಾರೆ. ಹೀಗಾಗಿ ಈ ವಿಚಾರದ ಚರ್ಚೆ ಅನಗತ್ಯ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಮುಖ್ಯಮಂತ್ರಿ ಬದಲಾವಣೆ ಕುರಿತು ಚಿಂತಿಸಬೇಕಿರುವುದು ಕಾಂಗ್ರೆಸ್‌ ಹೈಕಮಾಂಡ್‌. ಇದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನಡುವಣ ವಿಚಾರ. ಸ್ವಾಮೀಜಿಗಳು ಹೇಳಿದ ತಕ್ಷಣ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ, ಮುಂದೆ ಡಿಕೆಶಿ ಅವರಿಗೂ ಅವಕಾಶ ಇದೆ’ ಎಂದರು.

ADVERTISEMENT

‘ಈ ಹಿಂದೆ ಅನೇಕ ಲಿಂಗಾಯತ ಮುಖಂಡರು ಮುಖ್ಯಮಂತ್ರಿ ಆಗಿದ್ದಾರೆ. ದಲಿತರು ಮುಖ್ಯಮಂತ್ರಿ ಆಗಬೇಕೆಂಬ ಮಾತುಗಳನ್ನೂ ನಾವು ಕೇಳುತ್ತಿದ್ದೇವೆ. ಜಿ.ಪರಮೇಶ್ವರ, ಸತೀಶ್ ಜಾರಕಿಹೊಳಿ ಅವರಿಗೂ ಅವಕಾಶಗಳಿವೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.