ಚಿತ್ರದುರ್ಗ: ಜಿಲ್ಲೆಯ ಮಾರಿಕಣಿವೆಯಲ್ಲಿರುವ ವಾಣಿವಿಲಾಸ ಸಾಗರ ಎರಡು ವರ್ಷಗಳ ನಂತರ ಮತ್ತೆ ಭರ್ತಿಯಾಗುವ ಹಂತ ತಲುಪಿದೆ. ಜಲಾಶಯ ವೀಕ್ಷಣೆಗೆ ರಾಜ್ಯದ ವಿವಿಧೆಡೆಯಿಂದ ನಿತ್ಯ ಸಾವಿರಾರು ಪ್ರವಾಸಿಗರು ಲಗ್ಗೆ ಇಡುತ್ತಿದ್ದು, ಜಲಾಶಯದ ಹಿನ್ನೀರಿಗೆ ಧುಮುಕುವ ದುಸ್ಸಾಹಸಕ್ಕೆ ಕೈಹಾಕುತ್ತ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.
ಖಾಸಗಿ ವ್ಯಕ್ತಿಗಳು ಯಾವುದೇ ಅನುಮತಿಯನ್ನೂ ಪಡೆಯದೆ ಆರಂಭಿಸಿರುವ ದೋಣಿವಿಹಾರದ ಸೌಲಭ್ಯವೂ ಇಲ್ಲಿದೆ. ಆದರೆ, ಇರುವ ಒಂದೇ ಒಂದು ಡೀಸೆಲ್ ಚಾಲಿತ ಮೋಟರ್ ಬೋಟ್ ಕೆಟ್ಟು ಹೋದರೆ ಅಥವಾ ಮಗುಚಿಕೊಂಡರೆ ರಕ್ಷಣೆಗೆ ಮತ್ತೊಂದು ಬೋಟ್‌ನ ವ್ಯವಸ್ಥೆ ಇಲ್ಲದಿರುವುದೂ ಅಪಾಯಕಾರಿಯಾಗಿದೆ.
ಜಲಾಶಯದ ಹಿನ್ನೀರು ಪ್ರದೇಶ ಹೊಸದುರ್ಗ ಪಟ್ಟಣದವರೆಗೂ ಚಾಚಿಕೊಂಡಿದೆ. ವಿಶಾಲವಾದ ಜಲರಾಶಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಎಲ್ಲೆಂದರಲ್ಲಿ ಪ್ರವಾಸಿಗರು ನೀರಿಗಿಳಿದು ಆಟವಾಡುವುದು ಸಾಮಾನ್ಯವಾಗಿದೆ. ಕಣಿವೆ ರಂಗನಾಥಸ್ವಾಮಿ ದೇವಾಲಯದ ಬಳಿಯಿಂದ ಹಿನ್ನೀರು ಪ್ರದೇಶದಲ್ಲಿ ಸ್ಥಳೀಯ ಯುವಕರಿಬ್ಬರು ಬೋಟಿಂಗ್ ನಡೆಸುತ್ತಿದ್ದು, ಪ್ರವಾಸಿಗರಿಂದ ತಲಾ ₹ 200 ವಸೂಲಿ ಮಾಡುತ್ತಿದ್ದಾರೆ.
2008ರಲ್ಲಿ ಇಲ್ಲಿ ಜನರಲ್ ತಿಮ್ಮಯ್ಯ ಜಲಸಾಹಸ ಕ್ರೀಡಾ ಕೇಂದ್ರ ಸ್ಥಾಪಿಸಲಾಗಿತ್ತು. ಅದಕ್ಕಾಗಿ ₹ 2.5 ಕೋಟಿ ವೆಚ್ಚ ಮಾಡಲಾಗಿತ್ತು. ಆದರೆ ಕೇಂದ್ರ ಸ್ಥಗಿತಗೊಂಡು 4 ವರ್ಷಗಳಾಗಿದ್ದು, ಬೋಟ್ ಸೇರಿದಂತೆ ಇತರ ಉಪಕರಣಗಳು ತುಕ್ಕು ಹಿಡಿಯುತ್ತಿವೆ. ಈಗ ಸ್ಥಳೀಯರಿಬ್ಬರು ದೋಣಿವಿಹಾರ ನಡೆಸುತ್ತಿದ್ದಾರೆ.
5–6 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯದ ದೋಣಿಯಲ್ಲಿ 12ರಿಂದ 15 ಜನರನ್ನು ಕೂರಿಸಿಕೊಂಡು 1.5 ಕಿ.ಮೀ ದೂರದವರೆಗೆ ತೆರಳುತ್ತಿದ್ದಾರೆ. ಜೀವರಕ್ಷಕ ಜಾಕೆಟ್ ಬಿಟ್ಟು ಬೇರೆ ಸುರಕ್ಷತಾ ಸಾಧನಗಳಿಲ್ಲ. ಡೀಸೆಲ್ ಮೋಟರ್ ಕೈಕೊಟ್ಟರೆ ರಕ್ಷಣೆಗಾಗಿ ಪರ್ಯಾಯ ದೋಣಿ ಇಲ್ಲ. ಬೋಟ್ ಓಡಿಸುವ ಯುವಕನನ್ನು ಬಿಟ್ಟರೆ ಬೇರೆ ಸಿಬ್ಬಂದಿಯೂ ಜೊತೆಗೆ ಇಲ್ಲ.
‘ಅನಧಿಕೃತವಾಗಿ ಬೋಟಿಂಗ್ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೆವು. ಆದರೆ ಅವರು ಯಾವುದೇ ಕ್ರಮ ಜರುಗಿಸಿಲ್ಲ. ಸ್ಥಳೀಯ ರಾಜಕಾರಣಿಗಳ ಬೆಂಬಲಿಗರೇ ಗುತ್ತಿಗೆ ಪಡೆದಿರುವ ಕಾರಣ ಅನಧಿಕೃತ ದೋಣಿ ವಿಹಾರವನ್ನು ತಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಸ್ಥಳೀಯರೊಬ್ಬರು ದೂರಿದರು.
ಹಿನ್ನೀರು ಬಳಿ ಮೋಜು ಮಸ್ತಿ ತೀವ್ರಗೊಳ್ಳುತ್ತಿದ್ದು ಮದ್ಯಪಾನ ಮಾಡಿ ನೀರಿಗಿಳಿಯುತ್ತಿದ್ದಾರೆ. ಗುಡ್ಡದ ತಟ, ಮರಗಿಡಗಳ ಕೆಳಗೆ ಮದ್ಯಪಾನ ಮಾಡುವವರೇ ಕಾಣಸಿಗುತ್ತಾರೆ. ನೀರಿನಲ್ಲಿ ಮುಳುಗುತ್ತಿದ್ದ ಹಲವನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಹಿರಿಯೂರು ಪಟ್ಟಣದಿಂದ 18 ಕಿ.ಮೀ ದೂರದಲ್ಲಿರುವ ಜಲಾಶಯದ ಮಟ್ಟ 130 ಅಡಿ ಇದೆ. ಪ್ರಸ್ತುತ ನೀರಿನ ಮಟ್ಟ 128.10 ಅಡಿಗೆ ತಲುಪಿದ್ದು ಭರ್ತಿಗೆ 1.90 ಅಡಿ ಬಾಕಿ ಇದೆ. ಭದ್ರಾ ಮೇಲ್ದಂಡೆ ಯೋಜನೆ ಕಾಲುವೆಯಿಂದ ವೇದಾವತಿ ನದಿಗೆ ನಿತ್ಯ 700 ಕ್ಯುಸೆಕ್ ನೀರು ಹರಿಯುತ್ತಿದ್ದು ವಾರದೊಳಗೆ ಜಲಾಶಯ ತುಂಬುವ ನಿರೀಕ್ಷೆ ಇದೆ.
ಡ್ಯಾಂ ಭದ್ರತೆಗೆ ಒಬ್ಬನೇ ಗಾರ್ಡ್!
ವಿ.ವಿ. ಸಾಗರ ತುಂಬಿದ್ದರೂ ಭದ್ರತೆಗೆ ವಿಶ್ವೇಶ್ವರಯ್ಯ ನೀರಾವರಿ ನಿಗಮ ಆದ್ಯತೆ ನೀಡಿಲ್ಲ. ಜಲಾಶಯದ ಮೇಲ್ಭಾಗದಲ್ಲಿ ಗೃಹರಕ್ಷಕ ದಳದ ಒಬ್ಬ ಸಿಬ್ಬಂದಿ ಬಿಟ್ಟರೆ ಬೇರೆ ಯಾವ ಭದ್ರತಾ ವ್ಯವಸ್ಥೆಯೂ ಇಲ್ಲ. ಜಲಾಶಯ ನೋಡಲು ಪ್ರವಾಸಿಗರು 2 ಕಡೆಯಿಂದ ಪ್ರವೇಶಿಸುತ್ತಾರೆ. ಒಂದು ಕಡೆ ಮಾತ್ರ ಗೃಹರಕ್ಷಕ ದಳದ ಸಿಬ್ಬಂದಿ ಇರುತ್ತಾರೆ. ಸಿಬ್ಬಂದಿ ಇಲ್ಲದ ಕಡೆಯಲ್ಲಿ ಪ್ರವಾಸಿಗರು ಗೇಟ್ ಹತ್ತಿ ನೇರವಾಗಿ ಜಲಾಶಯದ ಮೇಲೆ ಹೋಗುತ್ತಾರೆ. ‘89 ವರ್ಷಗಳ ನಂತರ 2022ರಲ್ಲಿ ಜಲಾಶಯ ಭರ್ತಿಯಾಗಿತ್ತು. ಅಲ್ಲಿಯವರೆಗೂ ಈ ಜಾಗದಲ್ಲೊಂದು ಜಲಾಶಯ ಇದೆ ಎಂಬುದೇ ಎಷ್ಟೋ ಜನಕ್ಕೆ ಗೊತ್ತಿರಲಿಲ್ಲ. ಈಗ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ಮಂದೆ ಭದ್ರತೆಗೆ ಪ್ರಮುಖ ಆದ್ಯತೆ ನೀಡಲಾಗುವುದು’ ಎಂದು ವಿಶ್ವೇಶ್ವರಯ್ಯ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಚಂದ್ರಪ್ಪ ತಿಳಿಸಿದರು.
ಮೈಸೂರಿನ ಒಡೆಯರ್ ಕಟ್ಟಿದ ಮಾರಿಕಣಿವೆ
ಮಾರಿಕಣಿವೆ ಪ್ರದೇಶದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ವಿ.ವಿ. ಸಾಗರ ಅಣೆಕಟ್ಟೆ ನಿರ್ಮಿಸಲಾಗಿದೆ. ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಾಯಿ ಕೆಂಪನಂಜಮ್ಮಣ್ಣಿ (ವಾಣಿವಿಲಾಸ ಸನ್ನಿಧಾನ) ನೆನಪಿನಲ್ಲಿ ಜಲಾಶಯ ನಿರ್ಮಿಸಿದ್ದರು. 1897ರಲ್ಲಿ ಆರಂಭವಾದ ಕಾಮಗಾರಿ 1907ರಲ್ಲಿ ಪೂರ್ಣಗೊಂಡಿತ್ತು. ಜಲಾಶಯದಿಂದ ನೀರು ಹರಿಸಲು ಕ್ರಸ್ಟ್ ಗೇಟ್‌ಗಳಿಲ್ಲ. ಕೃಷಿಗಾಗಿ ಇರುವ ಕಾಲುವೆಗೆ ನೀರು ಹರಿಸಲು ತೂಬಿನ ವ್ಯವಸ್ಥೆ ಇದೆ. ಜಲಾಶಯ ಭರ್ತಿಯಾದರೆ ಕೋಡಿಯ ಮೂಲಕ ನೀರು ಹರಿದು ಸಾಗಿ ಬಳ್ಳಾರಿ ಜಿಲ್ಲೆಯ ಗಡಿಯಲ್ಲಿ ತುಂಗಭದ್ರಾ ನದಿ ಸೇರುತ್ತದೆ. ಎರಡು ಗುಡ್ಡಗಳ ನಡುವೆ ನಿರ್ಮಾಣಗೊಂಡಿರುವ ಈ ಜಲಾಶಯ ನೋಡುಗರ ಮನಸೂರೆಗೊಳ್ಳುತ್ತದೆ. ಆದರೂ ಜಲಾಶಯ ಬೆಟ್ಟಗುಡ್ಡಗಳ ಸಾಲಿನ ಮಾರಿಕಣಿವೆ ಪ್ರದೇಶವು ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿಲ್ಲ.
ವಿವಿ ಸಾಗರ ಜಲಾಶಯ ಹಾಗೂ ಹಿನ್ನೀರು ಪ್ರದೇಶದಲ್ಲಿನ ಚಟುವಟಿಕೆಗಳ ಬಗ್ಗೆ ಪರಿಶೀಲಿಸುತ್ತೇನೆ. ಈ ಕುರಿತು ಸ್ಥಳೀಯ ಪೊಲೀಸರು ವಿಶ್ವೇಶ್ವರಯ್ಯ ನೀರಾವರಿ ನಿಗಮದ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ-ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.