ಚಿತ್ರದುರ್ಗ: ಕೋಟೆನಾಡಿನ ಜನರ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯ ಮಳೆ ನಿಂತ ಮೇಲೆ ಮೈದುಂಬುತ್ತಿದೆ. ಚಳಿಗಾಲದಲ್ಲಿ ಜೀವಕಳೆ ಪಡೆಯುವ ರಾಜ್ಯದ ಏಕೈಕ ಜಲಾಶಯ ಬಹುಶಃ ಇದೇ ಇರಬೇಕು. ‘ವೇದಾವತಿ’ಯ ಬದಲು ‘ಭದ್ರೆ’ಯ ನೀರು ಜಲಾಶಯದ ಒಡಲು ತುಂಬುತ್ತಿದೆ.
ಭದ್ರಾ ಮೇಲ್ದಂಡೆ ಯೋಜನೆ ಆರಂಭಿಕ ಯಶಸ್ಸಿನ ಫಲ ವಿ.ವಿ.ಸಾಗರದಲ್ಲಿ ಕಾಣತೊಡಗಿದೆ. ಭದ್ರಾ ಜಲಾಶಯದ ನೀರು ಹರಿಯುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟ ನೂರು ಅಡಿ ದಾಟಿದೆ. ದಶಕದಲ್ಲಿ ಎರಡನೇ ಬಾರಿಗೆ ಜಲಾಶಯದ ಮಟ್ಟ ನೂರು ಅಡಿ ತಲುಪಿರುವುದು ರೈತರಲ್ಲಿ ಸಂಭ್ರಮ ಮೂಡಿಸಿದೆ. ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ತಾಲ್ಲೂಕಿನ ರೈತರ ಮೊಗದಲ್ಲಿ ಸಂತಸ ಕಾಣುತ್ತಿದೆ.
ವೇದಾವತಿ ನದಿಗೆ ನಿರ್ಮಿಸಿದ ವಿ.ವಿ.ಸಾಗರ ಜಲಾಶಯಕ್ಕೆ ರಾಜ್ಯದ ಮೊದಲ ಜಲಾಶಯ ಎಂಬ ಹೆಗ್ಗಳಿಕೆಯೂ ಇದೆ. ನದಿ ನೀರು ವ್ಯರ್ಥವಾಗಿ ಹರಿಯುತ್ತಿರುವುದನ್ನು ಗಮನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಜಲಾಶಯ ನಿರ್ಮಾಣಕ್ಕೆ ಮುಂದಾದರು. ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಗ್ರಾಮದ ಸಮೀಪ 1897ರಲ್ಲಿ ಆರಂಭವಾದ ಜಲಾಶಯ ನಿರ್ಮಾಣ ಕಾಮಗಾರಿ ಕೆಲವೇ ವರ್ಷಗಳಲ್ಲಿ ಪೂರ್ಣಗೊಂಡಿತು. ಅಂದಿನ ಕಾಲಕ್ಕೆ ಸುಮಾರು ₹ 45 ಲಕ್ಷ ವೆಚ್ಚವಾಗಿತ್ತು ಎನ್ನಲಾಗಿದೆ.
ಸುಮಾರು 30 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯ ಭರ್ತಿಯಾಗಿದ್ದು ಅಪರೂಪ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ವೇದಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದಂತೆ ಜಲಾಶಯ ಸೊರಗತೊಡಗಿತು. ಮಳೆ ಪ್ರಮಾಣ ಕುಸಿತ, ಮರಳು ಗಣಿಗಾರಿಕೆ, ಬ್ಯಾರೇಜ್ ನಿರ್ಮಾಣ ಸೇರಿ ಹಲವು ಕಾರಣಗಳಿಂದ ಜಲಾಶಯ ಜೀವಕಳೆ ಪಡೆದಿದ್ದು ವಿರಳ. 130 ಅಡಿ ಎತ್ತರದ ಜಲಾಶಯದ ನೀರಿನ ಮಟ್ಟ ನೂರು ಅಡಿ ತಲುಪಿದ್ದು ಕಡಿಮೆ.
1907ರಿಂದ ಜಲಾಶಯದಲ್ಲಿ ನೀರು ಸಂಗ್ರಹ ಆರಂಭವಾಯಿತು. 1911ರಲ್ಲಿ ಜಲಾಶಯದ ನೀರಿನ ಮಟ್ಟ 109 ಅಡಿ ತಲುಪಿತ್ತು. ಸತತ ನಾಲ್ಕು ವರ್ಷ ಜಲಾಶಯದಲ್ಲಿ ಉತ್ತಮ ನೀರಿನ ಸಂಗ್ರಹವಿತ್ತು. 1916ರಿಂದ 24 ಮತ್ತು 1953 ರಿಂದ 67ರವರೆಗೂ ಜಲಾಶಯದ ನೀರಿನ ಮಟ್ಟ ನೂರು ಅಡಿಗೂ ಅಧಿಕವಿತ್ತು. 1933ರಲ್ಲಿ ಜಲಾಶಯ ಗರಿಷ್ಠ ನೀರಿನ ಮಟ್ಟ ತಲುಪಿತ್ತು. 2000ನೇ ಸಾಲಿನಲ್ಲಿ 122 ಅಡಿ ನೀರು ಸಂಗ್ರಹವಾಗಿ ಆಶಾಭಾವನೆ ಮೂಡಿಸಿತ್ತು. 2010ರಲ್ಲಿ 112 ನೀರು ಹರಿದು ಬಂದಿತ್ತು. ಜಲಾಶಯದ ಇತಿಹಾಸದಲ್ಲಿ 58 ಬಾರಿ ನೂರು ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಜಲಾಶಯದ ನೀರಿನ ಮಟ್ಟ 120 ಅಡಿ ದಾಟಿದ್ದು 11 ಬಾರಿ ಮಾತ್ರ.
2010ರಿಂದ ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿತ್ತು. 2019ರಲ್ಲಿ 61 ಅಡಿಗೆ ಕುಸಿದು ಡೆಡ್ ಸ್ಟೋರೇಜ್ ತಲುಪಿತ್ತು. ಅಕ್ಟೋಬರ್ ವೇಳೆಗೆ ಭದ್ರಾ ಮೇಲ್ದಂಡೆಯ ನೂತನ ಕಾಲುವೆ ಮೂಲಕ ಜಲಾಶಯಕ್ಕೆ ನೀರು ಹರಿಸಲು ಆರಂಭಿಸಲಾಯಿತು. ಇದು ವಿ.ವಿ.ಸಾಗರದ ಸೌಂದರ್ಯವನ್ನು ಹೆಚ್ಚಿಸಿತು. ನೀರು ಸಂಗ್ರಹ ಹೆಚ್ಚಿದಂತೆ ಛತ್ರಿ ಬೆಟ್ಟದಿಂದ ಜಲಾಶಯ ಭಾರತ ನಕ್ಷೆಯಂತೆ ಕಾಣುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದುಬರುತ್ತದೆ.
ಭದ್ರಾ ಜಲಾಶಯದ ನೀರನ್ನು ವಿ.ವಿ.ಸಾಗರಕ್ಕೆ ಹರಿಸಬೇಕು ಎಂಬುದು ಚಿತ್ರದುರ್ಗ ಜಿಲ್ಲೆಯ ಬಹುದಿನಗಳ ಬೇಡಿಕೆ. ಭದ್ರಾ ಮೇಲ್ದಂಡೆ ಯೋಜನೆಗೆ ಚಳವಳಿ ಆರಂಭವಾದ ಬಳಿಕ ಈ ಕೂಗು ಇನ್ನಷ್ಟು ಗಟ್ಟಿಯಾಗಿ ಕೇಳಲಾರಂಭಿಸಿತು. ಭದ್ರಾ ನದಿಯಿಂದ ವಿ.ವಿ.ಸಾಗರ ಜಲಾಶಯಕ್ಕೆ ಐದು ಟಿಎಂಸಿ ನೀರು ಹರಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಬದಲಾದ ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್) ನೀರು ಮರುಹಂಚಿಕೆ ಮಾಡಲಾಯಿತು. ಪ್ರತಿ ವರ್ಷ ಎರಡು ಟಿಎಂಸಿ ಅಡಿ ನೀರನ್ನು ವಿ.ವಿ.ಸಾಗರ ಜಲಾಶಯಕ್ಕೆ ಹರಿಸುವಂತೆ ನೀತಿ ರೂಪಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಅಪೂರ್ಣವಾಗಿದ್ದರೂ ಜಲಾಶಯಕ್ಕೆ ಮಾತ್ರ ಭದ್ರಾ ನೀರು ಸೇರುತ್ತಿದೆ.
ವಿ.ವಿ.ಸಾಗರ ಜಲಾಶಯ 12,135 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಇದರಲ್ಲಿ 5,557 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ, ತೆಂಗು, ಅಡಿಕೆ ಸೇರಿ ತೋಟಗಾರಿಕ ಬೆಳೆಗಳಿವೆ. ನೀರಾವರಿ ಸಲಹಾ ಸಮಿತಿಯ ಸೂಚನೆಯ ಮೇರೆಗೆ ವಿಶ್ವೇಶ್ವರಯ್ಯ ಜಲ ನಿಗಮ 2019ರ ಬೇಸಿಗೆಯಲ್ಲಿ ನಾಲೆಗಳಿಗೆ ನೀರು ಹರಿಸಿತ್ತು. ಕೃಷಿ ಚಟುವಟಿಕೆಗೆ ನೀರು ಸಿಕ್ಕ ಬಳಿಕ ಬರದ ನಾಡಿನ ಚಿತ್ರಣ ಬದಲಾಗಿತ್ತು. ಪ್ರಸಕ್ತ ವರ್ಷವೂ ಜಲಾಶಯದಿಂದ ಕೃಷಿಗೆ ನೀರು ಹರಿಸುವ ಸಾಧ್ಯತೆ ಇದೆ.
ಹಿರಿಯೂರಿನಿಂದ ಹೊಸದುರ್ಗ ಮಾರ್ಗವಾಗಿ 18 ಕಿ.ಮೀ ಕ್ರಮಿಸಿದರೆ ಜಲಾಶಯ ಸಿಗುತ್ತದೆ. ಹಸಿರು ಹೊದ್ದು ಮಲಗಿದ ಬೆಟ್ಟದ ಸಾಲು ಕಣ್ಮನ ಸೆಳೆಯುತ್ತದೆ. ಪ್ರಕೃತಿಯನ್ನು ಆಸ್ವಾದಿಸುವ ಪ್ರವಾಸಿಗರಿಗೆ ಇದೊಂದು ಅತ್ಯುತ್ತಮ ತಾಣ. ಅಣೆಕಟ್ಟೆಯ ಕೆಳಭಾಗದಲ್ಲಿ ಶಕ್ತಿದೇವತೆ ಕಣಿವೆ ಮಾರಮ್ಮನ ದೇಗುಲವಿದೆ. ಜಲಾಶಯದ ಹಿನ್ನೀರಿನಲ್ಲಿ ರಂಗನಾಥಸ್ವಾಮಿ ದೇಗುಲವಿದೆ. ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ನೆರವಿನೊಂದಿಗೆ ಜಲಸಾಹಸ ಕ್ರೀಡೆಯನ್ನು ಆರಂಭಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.