ಚಿತ್ರದುರ್ಗ: ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮಿ ಹಬ್ಬಕ್ಕೆ ಗುರುವಾರ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಹೂ, ಹಣ್ಣು ದರ ಏರಿಕೆಯ ನಡುವೆಯೂ ವಹಿವಾಟು ಭರ್ಜರಿಯಾಗಿ ನಡೆಯಿತು.
ವರಮಹಾಲಕ್ಷ್ಮಿ ಹಬ್ಬದ ಮೇಲೆ ಎರಡು ವರ್ಷ ಕೋವಿಡ್ ಆತಂಕ ಆವರಿಸಿತ್ತು. ಸಾಂಕ್ರಾಮಿಕ ರೋಗದ ಭೀತಿ ದೂರವಾಗಿರುವುದರಿಂದ ಈ ಬಾರಿ ಹಬ್ಬ ಕಳೆಗಟ್ಟುವ ಲಕ್ಷಣಗಳು ಗೋಚರಿಸಿದವು. ಹಬ್ಬದ ಮುನ್ನಾದಿನ ಮಾರುಕಟ್ಟೆಯಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು. ಪೂಜಾ ಸಾಮಗ್ರಿಗಳನ್ನು ಖರೀದಿಸಿದ ಜನರು ಹಬ್ಬಕ್ಕೆ ಸಿದ್ಧತೆ ಮಾಡಿಕೊಂಡರು.
ಮಹಿಳೆಯರು ವರಮಹಾಲಕ್ಷ್ಮಿ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಮನೆ, ದೇಗುಲಗಳಲ್ಲಿ ಸಂಭ್ರಮ ಕಳೆಗಟ್ಟುತ್ತದೆ. ಮನೆಗಳಲ್ಲಿ ಮಂಟಪ ನಿರ್ಮಿಸಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಬಾಳೆಕಂದು, ಮಾವಿನ ತೋರಣ ಕಟ್ಟಿ ಸಿಂಗರಿಸ
ಲಾಗುತ್ತದೆ. ಮಹಿಳೆಯರು ಲಕ್ಷ್ಮಿಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೆ. ಅಭರಣ ಅಲಂಕಾರ, ಹೂ, ಹಣ್ಣು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಹಬ್ಬದ ಅಂಗವಾಗಿ ಮಾರುಕಟ್ಟೆಯೂ ಕಳೆಗಟ್ಟಿತ್ತು. ಎಲ್ಲೆಲ್ಲೂ ಜನ ಸಂದಣಿ ಕಂಡುಬಂತು. ಗಾಂಧಿ ವೃತ್ತ, ಮೆದೇಹಳ್ಳಿ ರಸ್ತೆ, ಸಂತೆಹೊಂಡದ ಸುತ್ತಲಿನ ಪ್ರದೇಶದಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಹೂವು, ಹಣ್ಣು, ಕಾಯಿ, ಎಲೆ, ಹೊಂಬಾಳೆ, ಬಾಳೆಗಿಡ ಖರೀದಿಗೆ ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೇವಿಯ ಅಲಂಕಾರಕ್ಕೆ ತರಹೇವಾರಿ ಪುಷ್ಪ, ಹಾರಗಳನ್ನು ಖರೀದಿಸಿದರು. ಹೂ, ಹಣ್ಣಿನ ದರ ವಿಚಾರಿಸಿ ವ್ಯಾಪಾರಿಗಳೊಂದಿಗೆ ಚೌಕಾಸಿ ನಡೆಸಿದರು.
ಕೋಟೆಯ ಮೇಲುದುರ್ಗದಲ್ಲಿರುವ ಏಕನಾಥೇಶ್ವರಿ ದೇವಿ, ಕೋಟೆ ರಸ್ತೆಯಲ್ಲಿನ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿ, ಹೊಳಲ್ಕೆರೆ ರಸ್ತೆಯಲ್ಲಿನ ನಗರ ದೇವತೆ ಬರಗೇರಮ್ಮ, ತ್ರಿಪುರ ಸುಂದರಿ ತಿಪ್ಪಿನ ಘಟ್ಟಮ್ಮ, ಗೌರಸಂದ್ರ ಮಾರಮ್ಮ, ಕನ್ಯಕಾ ಪರಮೇಶ್ವರಿ ದೇವಿ, ಅಂತರಘಟ್ಟಮ್ಮ, ಚೌಡೇಶ್ವರಿ ಸೇರಿ ಹಲವು ದೇಗುಲಗಳಲ್ಲಿ ಹಬ್ಬಕ್ಕೆ ಭರದ ಸಿದ್ಧತೆ ಮಾಡಿಕೊಳ್ಳಲಾಯಿತು. ಶುಕ್ರವಾರ ನಸುಕಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ.
ಹಬ್ಬದ ಕಾರಣಕ್ಕೆ ಹೂ ಮತ್ತು ಹಣ್ಣಿದ ಬೆಲೆ ಗಗನಮುಖಿಯಾಗಿತ್ತು. ಎಪಿಎಂಸಿ ಆವರಣದಲ್ಲಿರುವ ಹೂವಿನ ಸಗಟು ಮಾರುಕಟ್ಟೆಯಲ್ಲಿ ಗ್ರಾಹಕರು ಹೆಚ್ಚಾಗಿದ್ದರು. ಬಗೆಬಗೆಯ ಪುಷ್ಪಗಳನ್ನು ಖರೀದಿಸಲು ಮುಗಿಬಿದ್ದರು. ಸಂತೆಹೊಂಡದ ರಸ್ತೆ, ಗಾಂಧಿ ವೃತ್ತದಲ್ಲಿಯೂ ಹೂ ಮತ್ತು ಹಣ್ಣು ಮಾರಾಟ ಭರ್ಜರಿಯಾಗಿ ನಡೆಯಿತು.
ಒಂದು ಮಾರು ಕನಕಾಂಬರ, ಮಲ್ಲಿಗೆ, ಸೇವಂತಿ ಹೂವಿನ ದರ ₹ 100, ಕಾಕಡ ₹ 80, ದುಂಡು ಮಲ್ಲಿಗೆ ₹ 150 ಇತ್ತು. ಮಹಾಲಕ್ಷ್ಮಿಗೆ ಪ್ರಿಯವಾದ ಕಮಲದ ಹೂ ಒಂದಕ್ಕೆ₹ 50ಗೆ ಮಾರಾಟವಾಗುತ್ತಿತ್ತು. ಜೋಡಿ ಬಾಳೆಕಂದು ₹ 30ರಿಂದ 40ಕ್ಕೆ ಮಾರಾಟವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.