ADVERTISEMENT

64 ವರ್ಷದ ನಂತರ ವಾಣಿವಿಲಾಸಕ್ಕೆ ದಾಖಲೆಯ ನೀರು

ಮೈದುಂಬಿ ಹರಿದ ವೇದಾವತಿ ನದಿ * ಭದ್ರಾ ಮೇಲ್ದಂಡೆ ಯೋಜನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 4:06 IST
Last Updated 10 ಡಿಸೆಂಬರ್ 2021, 4:06 IST
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ ಗುರುವಾರ 125 ಅಡಿ ತಲುಪಿದ ಸಂದರ್ಭದಲ್ಲಿ ಕಂಡು ಬಂದ ದೃಶ್ಯ.
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ ಗುರುವಾರ 125 ಅಡಿ ತಲುಪಿದ ಸಂದರ್ಭದಲ್ಲಿ ಕಂಡು ಬಂದ ದೃಶ್ಯ.   

ಸುವರ್ಣಾ ಬಸವರಾಜ್

ಹಿರಿಯೂರು: ವೇದಾವತಿ ನದಿ 64 ವರ್ಷಗಳ ನಂತರ ಮೈದುಂಬಿ ಹರಿದ ಕಾರಣ ತಾಲ್ಲೂಕಿನ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ 125 ಅಡಿ ತಲುಪಿದೆ.

ಇದರ ಜತೆಗೆ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ವರುಣನ ಕೃಪೆಯಿಂದಲೂ ಜಲಾಶಯದ ನೀರಿನಮಟ್ಟ ಗುರುವಾರ 125 ಅಡಿ ದಾಟಿದೆ. ಇನ್ನು ಅರ್ಧ ಅಡಿ ನೀರು ಬಂದರೆ 1932ರಲ್ಲಿ ದಾಖಲಾಗಿದ್ದ 125.50 ಅಡಿ ನೀರಿನ ದಾಖಲೆಯನ್ನು ಸರಿಗಟ್ಟಲಿದೆ. ಜಲಾಶಯದ ಭರ್ತಿಗೆ ಕೇವಲ 5 ಅಡಿ ನೀರು ಬೇಕಿದ್ದು, ಕೋಡಿ ಬೀಳುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ತುದಿಗಾಲಲ್ಲಿ ಕಾಯುತ್ತಿದ್ದಾರೆ.

ADVERTISEMENT

ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಯಲ್ಲಿ ಜನಿಸಿರುವ ವೇದಾ ನದಿಗೆ ಸಖರಾಯಪಟ್ಟಣದ ಸಮೀಪದಲ್ಲಿ ಕೆರೆ ನಿರ್ಮಿಸಲಾಗಿದೆ. ಆವತಿ ನದಿಗೆ ಮದಗದಕೆರೆ ನಿರ್ಮಿಸಲಾಗಿದೆ. ಈ ಎರಡೂ ಕೆರೆಗಳು ಕೋಡಿ ಬಿದ್ದ ನಂತರ ಕಡೂರು ತಾಲ್ಲೂಕಿನ ದೇವನೂರಿನ ಸಮೀಪ ಸಂಗಮವಾಗಿ ‘ವೇದಾವತಿ’ಯಾಗಿ ಹರಿದು ಬರುತ್ತದೆ. ನದಿಗೆ ಅಡ್ಡಲಾಗಿ ಹಿರಿಯೂರು ತಾಲ್ಲೂಕಿನ ಮಾರಿಕಣಿವೆ ಸಮೀಪ ಅಣೆಕಟ್ಟೆ ನಿರ್ಮಾಣ ಕಾಮಗಾರಿಯನ್ನು 1897ರಲ್ಲಿ ಆರಂಭಿಸಿ, 1907ರಲ್ಲಿ ಪೂರ್ಣಗೊಳಿಸಲಾಗಿದೆ.

ಬಯಲುಸೀಮೆಯ ಜನರ ನೀರಿನ ಬೇಗೆಯನ್ನು ನೀಗಿಸಲು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಾಯಿ ಕೆಂಪನಂಜಮ್ಮಣ್ಣಿ ಅವರ ಹೆಸರಿನಲ್ಲಿ ಕಟ್ಟಿಸಿರುವ ವಾಣಿವಿಲಾಸ ಜಲಾಶಯದ ಕೋಡಿ ಬೀಳುವ ಹಾದಿಯಲ್ಲಿದ್ದು, 112 ವರ್ಷಗಳ ಇತಿಹಾಸ ಹೊಂದಿರುವ ಜಲಾಶಯ ಮತ್ತೊಮ್ಮೆ ತನ್ನ ಗತವೈಭವವನ್ನು ಮೆಲುಕು ಹಾಕಲಿದೆ.

₹ 45 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ವಾಣಿವಿಲಾಸ ಜಲಾಶಯದ ಅಣೆಕಟ್ಟು 405.40 ಮೀಟರ್ (1,330 ಅಡಿ) ಉದ್ದ, 43.28 ಮೀ. (142 ಅಡಿ) ಎತ್ತರವಿದೆ. ಜಲಾಶಯದ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ 30 ಟಿಎಂಸಿ ಅಡಿ ಇದ್ದು, 2,075 ಚದರ ಮೈಲಿ ಕ್ಯಾಚ್‌ಮೆಂಟ್ ಪ್ರದೇಶ ಹೊಂದಿದೆ. ಸಮುದ್ರಮಟ್ಟದಿಂದ 2,050 ಅಡಿ ಎತ್ತರದಲ್ಲಿರುವ ಇದರ ಪೂರ್ಣಮಟ್ಟ 130 ಅಡಿ. 29,985 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಉಣಿಸುವ ಸಾಮರ್ಥ್ಯ ಹೊಂದಿದೆ.

ಒಡೆಯರ್ ಭೇಟಿ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1901ರಲ್ಲಿ ಜಲಾಶಯಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಯೋಜನೆಗೆ ಅವಿಸ್ಮರಣೀಯ ಕಾಣಿಕೆ ನೀಡಿರುವ ಎಂಜಿನಿಯರ್‌ಗಳಾದ
ಎಚ್.ಡಿ. ರೈಸ್, ಮೆಕನೀಲ್ ಕ್ಯಾಂಪ್ ಬೆಲ್, ಸಿ.ಟಿ. ದಲಾಲ್ ಅವರನ್ನು ಬಯಲುಸೀಮೆಯ ಜನ ಮರೆತಿಲ್ಲ.

ಮರೆಯಾದ ಆತಂಕ: 2019ರಲ್ಲಿ ಜಲಾಶಯ ಡೆಡ್ ಸ್ಟೋರೇಜ್ ತಲುಪಿತ್ತು. ನೀರಿನ ವಿಚಾರದಲ್ಲಿ ಚಳ್ಳಕೆರೆ, ಮೊಳಕಾಲ್ಮುರು ಹಾಗೂ ಹಿರಿಯೂರು ತಾಲ್ಲೂಕುಗಳ ರೈತರ ನಡುವೆ ಸಣ್ಣ ಪ್ರಮಾಣದ ಸಂಘರ್ಷ ಏರ್ಪಟ್ಟಿತ್ತು. ಅದೇ ವರ್ಷ ನಿರೀಕ್ಷೆಗೂ ಮೀರಿ ಸುರಿದ ಹಿಂಗಾರು ಮಳೆ, ಭದ್ರಾ ಯೋಜನೆಯಿಂದ ತಾತ್ಕಾಲಿಕವಾಗಿ ನೀರು ಹರಿಸಿದ್ದರಿಂದ 102 ಅಡಿ ನೀರು ಬಂದಿತ್ತು. 2020ರಲ್ಲಿ 106 ಅಡಿ ನೀರು ಸಂಗ್ರಹವಾಗಿತ್ತು. ಪ್ರಸ್ತುತ ವರ್ಷ ನೀರಿನ ಮಟ್ಟ 125 ಅಡಿ ತಲುಪಿರುವ ಕಾರಣ ಅಚ್ಚುಕಟ್ಟು ಪ್ರದೇಶದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

2018–19ನೇ ಸಾಲಿನಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿಲ್ಲದೆ ಒಣಗಿದ್ದ 17 ಸಾವಿರ ಎಕರೆ ಅಡಿಕೆ, ತೆಂಗಿನ ತೋಟಗಳಲ್ಲಿ ಮತ್ತೆ ಕೆಲಸ ಆರಂಭವಾಗಿದೆ. ಎರಡು ತಿಂಗಳುಗಳಿಂದ ವೇದಾವತಿ ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ನದಿಪಾತ್ರದಲ್ಲಿನ ಎಲ್ಲಾ ಬ್ಯಾರೇಜ್‌ಗಳು ಭರ್ತಿಯಾಗಿದ್ದು, ನೀರಿಗಾಗಿ ಸಾರ್ವಜನಿಕರ ಒತ್ತಾಯ ಕೇಳಿ ಬರುತ್ತಿಲ್ಲ.

ಪ್ರವಾಸಿ ತಾಣವಾಗಿಸಲು ಒತ್ತಾಯ

ವಾಣಿವಿಲಾಸ ಜಲಾಶಯದಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ಜಲರಾಶಿಯನ್ನು ಕಣ್ತುಂಬಿಕೊಳ್ಳಲು ಅಣೆಕಟ್ಟೆಯ ಮುಂಭಾಗದಲ್ಲಿನ ಛತ್ರಿ ಗುಡ್ಡಕ್ಕೆ, ಹೊಸದುರ್ಗ ತಾಲ್ಲೂಕಿನಲ್ಲಿರುವ ಬೇವಿನಹಳ್ಳಿಗೆ, ಅಣೆಕಟ್ಟೆಯ ಎಡಭಾಗದಲ್ಲಿ ಜಲಾಶಯದ ಹಿನ್ನೀರಿನವರೆಗೆ ಚಾಚಿಕೊಂಡಿರುವ ಉತ್ತರೆ ಗುಡ್ಡದ ಮೂಲಕ ಹೋಗಬೇಕು. ರಸ್ತೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ವಿವಿಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪೆರಿಸ್ವಾಮಿ ಆಗ್ರಹಿಸಿದ್ದಾರೆ.

‘ಅಣೆಕಟ್ಟೆಯ ಕೆಳಭಾಗದಲ್ಲಿರುವ ಉದ್ಯಾನಗಳ ಅಭಿವೃದ್ಧಿ, ಶೌಚಾಲಯ ವ್ಯವಸ್ಥೆ, ವಸತಿ ಗೃಹಗಳ ನಿರ್ಮಾಣ, ಅಣೆಕಟ್ಟೆ ಮೇಲ್ಭಾಗದಿಂದ ಜಲಾಶಯ ವೀಕ್ಷಣೆಗೆ ಅವಕಾಶ, ಅಣೆಕಟ್ಟೆಯ ಎದುರಿಗಿರುವ ಎರಡು ಗುಡ್ಡಗಳ ನಡುವೆ ಕೇಬಲ್ ಕಾರು ವ್ಯವಸ್ಥೆಯೂ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಿದಲ್ಲಿ ಉತ್ತಮ ಪ್ರವಾಸಿ ತಾಣವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.