ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ರಂಗಭೂಮಿ ಹಾಗೂ ತೊಗಲು ಗೊಂಬೆಯಾಟದ ಹಿರಿಯ ಕಲಾವಿದ ಬೆಳಗಲ್ ವೀರಣ್ಣ ಸಾವಿಗೀಡಾಗಿದ್ದಾರೆ.
ಬಳ್ಳಾರಿಯವರಾದ ವೀರಣ್ಣ ಅವರು ಪುತ್ರ ಹನುಮಂತ ಅವರೊಂದಿಗೆ ಬೆಳಿಗ್ಗೆ ಬೆಂಗಳೂರಿಗೆ ಹೊರಟಾಗ ಈ ಅವಘಡ ಸಂಭವಿಸಿದೆ.
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವೀರಣ್ಣ ಅವರನ್ನು ಚಳ್ಳಕೆರೆ ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಮಾರ್ಗ ಮಧ್ಯೆ ಸಾವಿಗೀಡಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಬೆಳಗಲ್ ವೀರಣ್ಣ (91) ಅವರು ಹಂಪಿ ಕನ್ನಡ ವಿವಿಯ ನಾಡೋಜ, ಕರ್ನಾಟಕ ರಾಜ್ಯೋತ್ಸವ, ಜಾನಪದ ಅಕಾಡೆಮಿ ಮತ್ತಿತರ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಜತೆಗೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ತೊಗಲು ಗೊಂಬೆಯಾಟವನ್ನು ದೇಶ- ವಿದೇಶಗಳಲ್ಲಿ ಪ್ರಖ್ಯಾತಪಡಿಸಿದ್ದ ವೀರಣ್ಞ, ಖ್ಯಾತ ಸಂಗೀತ ಕಲಾವಿದ ಪಂಡಿತ್ ವೆಂಕಟೇಶಕುಮಾರ್ ಅವರ ಮಾವ.
ವೀರಣ್ಣ ಅವರ ಜೊತೆಗಿದ್ದ ಪುತ್ರ ಹನುಮಂತ ಅವರು ತೀವ್ರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.