ADVERTISEMENT

ಪ್ರಜ್ಞಾವಂತಿಕೆಯಿಂದ ಮತದಾನ ಮಾಡಿ

ದೇವಾಲಯ ಲೋಕಾರ್ಪಣೆ: ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಮೇ 2022, 2:39 IST
Last Updated 8 ಮೇ 2022, 2:39 IST
ಹೊಸದುರ್ಗ ತಾಲ್ಲೂಕಿನ ಜೋಡಿ ತುಂಬಿನಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಆಂಜನೇಯಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಧಾರ್ಮಿಕ ಸಭೆಯಲ್ಲಿ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಇದ್ದರು.
ಹೊಸದುರ್ಗ ತಾಲ್ಲೂಕಿನ ಜೋಡಿ ತುಂಬಿನಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಆಂಜನೇಯಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಧಾರ್ಮಿಕ ಸಭೆಯಲ್ಲಿ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಇದ್ದರು.   

ಹೊಸದುರ್ಗ: ಚುನಾವಣೆ ಸಮಯದಲ್ಲಿ ಪ್ರಜ್ಞಾವಂತಿಕೆಯಿಂದ ಮತದಾನ ಮಾಡಬೇಕು. ಜನರಿಂದ ಆಯ್ಕೆಯಾಗುವವರು ಗ್ರಾಮಗಳ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಸದಾ ಶ್ರಮಿಸುವಂತಿರಬೇಕು ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಜೋಡಿತುಂಬಿನಕೆರೆ ಗ್ರಾಮದಲ್ಲಿ ಶನಿವಾರ ನಡೆದ ಆಂಜನೇಯಸ್ವಾಮಿ ದೇವಾಲಯ ಲೋಕಾರ್ಪಣೆ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಗ್ರಾಮಗಳಲ್ಲಿ ದೇವಸ್ಥಾನಗಳು ಎಲ್ಲಾ ವರ್ಗಗಳ ಜನರ ಸಾಮರಸ್ಯದ ಜೀವನಕ್ಕೆ ನೆರವಾಗಬೇಕು. ಭಾರತೀಯ ಸಂಸ್ಕೃತಿಯಲ್ಲಿ ಮಠಮಂದಿರಗಳಿಗೆ ವಿಶೇಷ ಸ್ಥಾನವಿದೆ. ಜೋಡಿತುಂಬಿನಕೆರೆ ಗ್ರಾಮಸ್ಥರು ನೂತನ ದೇವಾಲಯ ಕಟ್ಟಿಸಿ ಸಾಮರಸ್ಯದಿಂದ ಬದುಕುತ್ತಿರುವುದು ಸಂತಸದ ಸಂಗತಿ’ ಎಂದರು.

ADVERTISEMENT

ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಕುಂಚಿಟಿಗ ಮಹಾ ಸಂಸ್ಥಾನದ ಡಾ. ಶಾಂತವೀರ ಸ್ವಾಮೀಜಿ, ‘ಮಠಮಂದಿರಗಳು ರಾಜಕಾರಣದ ತಾಣವಾಗದೇ ಧಾರ್ಮಿಕ ಶ್ರದ್ಧಾಭಕ್ತಿಯ ತಾಣವಾಗಬೇಕು. ಗ್ರಾಮಗಳಲ್ಲಿ ಸಮುದಾಯ ಭವನ, ಮಂದಿರಗಳ ನಿರ್ಮಾಣ ಮುಖ್ಯವಾಗಿದೆ. ಬಹಳಷ್ಟು ಗ್ರಾಮಗಳಲ್ಲಿ ಸನಾತನ ಸಂಸ್ಕೃತಿ ನಾಶವಾಗುತ್ತಿದೆ. ಇತ್ತೀಚಿಗೆ ಜನರು ಬಹಿರಂಗ ಶೃಂಗಾರಕ್ಕೆ ಒತ್ತು ನೀಡಿ, ಅಂತರಂಗದ ಶೃಂಗಾರ ಮರೆತಿರುವುದು ವಿಷಾದದ ಸಂಗತಿ’ ಎಂದು ಹೇಳಿದರು.

ದುಶ್ಚಟಗಳಿಂದ ದೂರವಿದ್ದು ಎಲ್ಲರೂ ಸೌಹಾರ್ದದಿಂದ ಜೀವಿಸುವ ತಾಣಗಳಾಗಿ ದೇವಾಲಯಗಳನ್ನು ಬಳಸಿ ಕೊಳ್ಳಬೇಕು. ಧಾರ್ಮಿಕ ಶ್ರದ್ಧೆಯಿಂದ ನೆಮ್ಮದಿ ಸಾಧ್ಯ’ ಎಂದರು.

ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಜೋಡಿತುಂಬಿನಕೆರೆ ಆಂಜನೇಯಸ್ವಾಮಿ ಹಾಗೂ ಕರಿಯಮ್ಮದೇವಿ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ತುಂಬಿನಕೆರೆ ಬಸವರಾಜ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ, ಆಂಜನೇಯಸ್ವಾಮಿ ಹಾಗೂ ಕರಿಯಮ್ಮದೇವಿ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಕೆ. ರಾಮಚಂದ್ರಾಚಾರ್, ಸಮಾಜ ಸೇವಕ ಟಿ.ಮಂಜುನಾಥ್, ಮುಖಂಡರಾದ ಮಾವಿನಕಟ್ಟೆ ಗುರುಸ್ವಾಮಿ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ತುಂಬಿನಕೆರೆ ನಾಗರಾಜ್, ಆರ್.ಡಿ. ಸೀತಾರಾಮ್, ಸದ್ಗುರು ಆಯುರ್ವೇದ ಉತ್ಪನ್ನಗಳ ಮಾಲೀಕ ಡಿ.ಎಸ್. ಪ್ರದೀಪ್, ಪುರಸಭಾ ನಾಮನಿರ್ದೇಶಿತ ಸದಸ್ಯ ಶಿವನೇಕಟ್ಟೆ ಶಶಿಕುಮಾರ್, ಗೂಳಿಹಟ್ಟಿ ಕೃಷ್ಣಮೂರ್ತಿ, ದೇವಿಗೆರೆ ಮಲ್ಲಿಕಾರ್ಜುನ್, ಮೈಲಾರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.