ಚಿತ್ರದುರ್ಗ: ‘ವಕ್ಫ್ ಬೋರ್ಡ್ ಮೂಲಕ ರಾಜ್ಯದ ರೈತರ ಜಮೀನು, ಮಠ– ಮಾನ್ಯಗಳ ಆಸ್ತಿ ಕಬಳಿಕೆಗೆ ಮುಂದಾಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಗಡೀಪಾರು ಮಾಡಿದರೆ ಒಳಿತು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.
‘ಸಂವಿಧಾನದ ಬಗ್ಗೆ ಮಾತನಾಡುವ ಜಮೀರ್, ರಾಜ್ಯದ ತುಂಬಾ ಸಂಚರಿಸಿ ಅಧಿಕಾರಿಗಳಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಹೇಳಿ ನೋಟಿಸ್ ಕೊಡಿಸಿ ಭೂಮಿ ಕಬಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ’ ಎಂದು ಇಲ್ಲಿ ಭಾನುವಾರ ಸುದ್ದಿಗಾರರೆದುರು ದೂರಿದರು.
‘ಶಾಂತಿಪ್ರಿಯ ರಾಜ್ಯದಲ್ಲಿ ಜಮೀರ್ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅಹಿಂದ ಹೆಸರು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಸಮುದಾಯಕ್ಕೇ ಅನ್ಯಾಯ ಮಾಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಆಡಳಿತ ಪಕ್ಷದ ಶಾಸಕರಿಂದಲೇ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ’ ಎಂದರು.
‘ವಕ್ಫ್ ವಿಚಾರದಲ್ಲಿ ಸಿದ್ದರಾಮಯ್ಯ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ತಾಕತ್ತಿದ್ದರೆ ಗೆಜೆಟ್ ನೋಟಿಫಿಕೇಷನ್ ಹಿಂಪಡೆಯಲಿ. ಈಗ ನೋಟಿಸ್ ಹಿಂಪಡೆದು ಉಪಚುನಾವಣೆ ಬಳಿಕ ನೋಟಿಸ್ ನೀಡುವುದು ಸರಿಯಲ್ಲ’ ಎಂದರು. ‘ಉಪ ಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ.
ಭ್ರಷ್ಟಾಚಾರರಹಿತ ಆಡಳಿತ ನೀಡಿದ್ದಾಗಿ ಬೊಬ್ಬೆ ಹಾಕುತ್ತಿರುವ ಸಿದ್ದರಾಮಯ್ಯ ಕುಟುಂಬವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಡಾ ಹಗರಣದಿಂದ ಬಣ್ಣ ಬಯಲಾಗಿದೆ’ ಎಂದರು.
ಯತ್ನಾಳ್‌ಗೆ ಎಚ್ಚರಿಕೆ: ‘ಯತ್ನಾಳ್ ಯಾವಾಗ ಏನು ಮಾತಾಡುತ್ತಾರೆ ಎಂಬುದನ್ನು ಆ ಭಗವಂತನೇ ಬಲ್ಲ. ಬಿ.ಎಸ್. ಯಡಿಯೂರಪ್ಪ ನಾಲ್ಕು ದಶಕಗಳಿಂದ ರೈತರ ಪರ ಧ್ವನಿಯೆತ್ತಿದ ಧೀಮಂತ ನಾಯಕ. ಅವರ ಕೊಡುಗೆಯನ್ನು ಮರೆತಿರುವ ಯತ್ನಾಳ್ ಮೊದಲು ಮನಬಂದಂತೆ ಮಾತಾಡುವುದನ್ನು ಬಿಡಲಿ. ಹಗುರವಾಗಿ ಮಾತಾಡಿದರೆ ತಕ್ಕ ಉತ್ತರ ನೀಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.