ಭರಮಸಾಗರ: ಏಳು ದಿನಗಳಿಂದ ಭರಮಸಾಗರದ ಬಿಚ್ಚುಗತ್ತಿ ಭರಮಣ್ಣ ನಾಯಕನ ದೊಡ್ಡಕೆರೆಗೆ ತುಂಗಭದ್ರಾ ನದಿ ನೀರು ಹರಿಯುತ್ತಿದೆ.
ಆದರೆ ಹತ್ತಾರು ವರ್ಷಗಳಿಂದ ಪಾಳು ಬಿದ್ದ ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ತುಂಬಿದೆ. ಕೆರೆಯ ಏರಿಯ ಉದ್ದಕ್ಕೂ ಕೋಡಿಯ ಪ್ರದೇಶದ ಕೆರೆಯಂಗಳದಲ್ಲಿ ಕೋಳಿ ತ್ಯಾಜ್ಯ, ಅಡಿಕೆ ಸಿಪ್ಪೆ, ಗಿಡಗಂಟಿಯ ತ್ಯಾಜ್ಯ, ಜಾನುವಾರಿನ ಕಳೇಬರಗಳು, ಅವುಗಳ ಅಸ್ತಿಪಂಜರಗಳು, ಹಳೆಯ ಬಟ್ಟೆಗಳು, ಕೂದಲು.. ಹೀಗೆ ಎಲ್ಲಿ ನೋಡಿದರಲ್ಲಿ ಲೋಡ್‌ಗಟ್ಟಲೇ ರಾಶಿ ರಾಶಿಯಾಗಿ ಬಿದ್ದಿದೆ.
‘ಕೆರೆಯ ನೀರು ಹರಿಯುತ್ತಿರುವ ಸುಂದರ ದೃಶ್ಯವನ್ನು ನೋಡಲು ಬಂದ ಜನತೆ ಈ ಕೊಳೆತ ತ್ಯಾಜ್ಯದ ದುರ್ವಾಸನೆಯಿಂದ ಮೂಗು ಮುಚ್ಚಿ ನೋಡುವಂತಾಗಿದೆ. ಕೆರೆಗೆ ನೀರು ಹರಿಯುವ ಮುಂಚೆಯೇ ಸಣ್ಣ ನೀರಾವರಿ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಈ ತ್ಯಾಜ್ಯವನ್ನೆಲ್ಲ ತೆಗೆದು ಕೆರೆಯ ಪರಿಶುದ್ಧ ನೀರು ಹರಿಯಲು ಏರ್ಪಾಟು ಮಾಡಬಹುದಾಗಿತ್ತು. ಆದರೆ ಇಲಾಖೆಯ ನಿರ್ಲಕ್ಷ್ಯದಿಂದ ಈಗ ನೀರು ತ್ಯಾಜ್ಯದಿಂದ ಕಲುಷಿತವಾಗುವ ಸಂಭವ ಹೆಚ್ಚಾಗಿದೆ. ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿತ್ತು. ಅವರುಚರಂಡಿ ನೀರನ್ನು ಬೇರೆಡೆ ಹರಿಸಲು ಸೂಚಿಸಿದ್ದರು. ಆದರೂ ಅದು ಕೈಗೂಡದೇ ಕೆರೆ ನೀರಿಗೆ ಚರಂಡಿ ನೀರು ಸೇರುವುದು ಮುಂದುವರಿದಿದೆ. ಈಗಲಾದರೂ ಕಾಲ ಮಿಂಚಿಲ್ಲ. ತಕ್ಷಣ ಇಲಾಖೆ ಎಚ್ಚೆತ್ತು ತ್ಯಾಜ್ಯ ತೆರವು ಮಾಡಿಸಬೇಕು. ಚರಂಡಿ ನೀರನ್ನು ಬೇರೆಡೆ ಸಾಗಿಸುವ ಕೆಲಸ ಮಾಡಿಸಬೇಕು’ ಎಂದು ಇಸಾಮುದ್ರ ಹೊಸಟ್ಟಿಯ ರುದ್ರಾ ನಾಯ್ಕ್, ಸತೀಶ್, ಸ್ಥಳೀಯ ಮಹಂತ, ರಾಮಣ್ಣ, ಸೋಮಜ್ಜಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.