ADVERTISEMENT

ಹೊಸದುರ್ಗ | ಬರ: ಟ್ಯಾಂಕರ್‌ಗೆ ಮೊರೆ ಹೋದ ರೈತರು-ತೋಟ ಉಳಿಸಿಕೊಳ್ಳಲು ಹರಸಾಹಸ

ಶ್ವೇತಾ ಜಿ.
Published 29 ಏಪ್ರಿಲ್ 2024, 7:49 IST
Last Updated 29 ಏಪ್ರಿಲ್ 2024, 7:49 IST
ಹೊಸದುರ್ಗದ ಜಮೀನೊಂದರಲ್ಲಿ ಒಣಗುತ್ತಿರುವ ಅಡಿಕೆ ಗಿಡಗಳು
ಹೊಸದುರ್ಗದ ಜಮೀನೊಂದರಲ್ಲಿ ಒಣಗುತ್ತಿರುವ ಅಡಿಕೆ ಗಿಡಗಳು   

ಹೊಸದುರ್ಗ: ಬರದಿಂದಾಗಿ ನೀರಿಗೆ ಹಾಹಾಕಾರ ಉಂಟಾಗಿದ್ದು, ತೋಟ ಉಳಿಸಿಕೊಳ್ಳಲು ತಾಲ್ಲೂಕಿನ ರೈತರು ಟ್ಯಾಂಕರ್‌ ನೀರಿನ ಮೊರೆ ಹೋಗಿದ್ದಾರೆ.

ಕುಡಿಯುವ ನೀರಿಗೆ ತೊಂದರೆಯಿರುವ ಈ ಸಂದರ್ಭದಲ್ಲಿ ತೋಟಗಳನ್ನು ಉಳಿಸಿಕೊಳ್ಳುವುದು ರೈತರಿಗೆ ಸವಾಲಿನ ಕೆಲಸವಾಗಿದೆ. ಸಾವಿರ ಅಡಿ ಕೊಳವೆಬಾವಿ ಕೊರೆಯಿಸಿದರೂ ಒಂದು ಹನಿ ನೀರು ಸಿಗತ್ತಿಲ್ಲ. ದಿನಕ್ಕೆ ಮೂರು ಕೊಳವೆಬಾವಿ ಕೊರೆಯಿಸಿದರೂ ಎಲ್ಲಿಯೂ ನೀರಿಲ್ಲ. ಬಿಸಿಲಿಗೆ ಭೂಮಿ ಬಿಸಿಯಾಗಿದೆ. ಅಡಿಕೆ ಹಾಗೂ ತೆಂಗಿನ ತೋಟಗಳಲ್ಲಿ ಗರಿಗಳೆಲ್ಲಾ ಒಣಗಿವೆ. ಹಳದಿ ಬಣ್ಣಕ್ಕೆ ತಿರುಗಿವೆ. ಇದರಿಂದಾಗಿ ಕಂಗಾಲಾಗಿರುವ ರೈತರು ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್‌ ಮೊರೆ ಹೋಗಿದ್ದಾರೆ.

ತಾಲ್ಲೂಕಿನ ನಾಗರಕಟ್ಟೆ, ಹೆಬ್ಬಳ್ಳಿ, ಹೇರೂರು, ದೇವಿಗೆರೆ, ದೊಡ್ಡಘಟ್ಟ, ಬನಸೀಹಳ್ಳಿ, ಗೂಳಿಹಟ್ಟಿ, ದುಗ್ಗಾವರ, ನವಿಲುಕಲ್ಲು ಬೋವಿಹಟ್ಟಿ, ಹೊಳಲ್ಕೆರೆ ತಾಲ್ಲೂಕಿನ ಎನ್.ಜಿ ಹಳ್ಳಿ, ಗೌಡಿಹಳ್ಳಿ, ಹೊಸಹಟ್ಟಿ, ಸುತ್ತಲಿನ ಗ್ರಾಮಗಳ ಅಡಿಕೆ, ತೆಂಗು ತೋಟಗಳಲ್ಲಿ ಟ್ಯಾಂಕರ್‌ಗಳು ಸದ್ದು ಮಾಡುತ್ತಿವೆ.

ADVERTISEMENT

ತಾಲ್ಲೂಕಿನ ಯಾಲಕಪ್ಪನಹಟ್ಟಿ, ದೇವಿಗೆರೆ, ತುಂಬಿನಕೆರೆ, ಹೇರೂರು, ನಾಗರಕಟ್ಟೆ, ಹೊಳಲ್ಕೆರೆ ತಾಲ್ಲೂಕಿನ ಲೋಕದೊಳಲು, ಗುಂಡಸಮುದ್ರ ಗ್ರಾಮಗಳಲ್ಲಿನ ಜಮೀನುಗಳ ಕೊಳವೆಬಾವಿಯಿಂದ ಟ್ಯಾಂಕರ್‌ ನೀರು ತರಲಾಗುತ್ತಿದೆ. ಒಂದು ಟ್ರ್ಯಾಕ್ಟರ್‌ ಟ್ಯಾಂಕರ್‌ ನೀರು 5000 ಲೀಟರ್‌ ಸಾಮರ್ಥ್ಯ ಹೊಂದಿದ್ದು, ಬಾಡಿಗೆ ಎಲ್ಲಾ ಸೇರಿ ಒಂದು ಟ್ಯಾಂಕರ್‌ ನೀರಿಗೆ ₹ 2000 ಕೊಡಬೇಕು. ಎಕರೆಗೆ 8ರಿಂದ 10 ಟ್ಯಾಂಕರ್‌ ನೀರು ಬೇಕಾಗುತ್ತದೆ. ಬಿಸಿಲು ಅಧಿಕವಾಗಿದ್ದರೆ, 4 ದಿನಗಳಿಗೊಮ್ಮೆ ಟ್ಯಾಂಕರ್‌ ನೀರು ಒದಗಿಸಬೇಕಾಗುತ್ತದೆ. ಅದೂ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಎನ್ನುತ್ತಾರೆ ಹೊಸಹಟ್ಟಿಯ ರೈತ ಧರಣೇಶಪ್ಪ.

ತೆಂಗು ಹಾಗೂ ಅಡಿಕೆ ಮರದ ಗರಿಗಳೆಲ್ಲಾ ಒಣಗುತ್ತಿವೆ. ಗುಳ್ಳು (ತೆಂಗಿನಕಾಯಿಯಾಗುವ ಸಣ್ಣ ಪೀಚು)ಗಳೆಲ್ಲಾ ಉದುರುತ್ತಿವೆ. ಎಷ್ಟು ನೀರುಣಿಸಿದರೂ ಸಾಲುತ್ತಿಲ್ಲ. ಒಂದೆರೆಡು ಬಾರಿ ಮೋಟರ್‌ ಸುಟ್ಟಿದ್ದು, ನಷ್ಟವಾಗಿದೆ. ಪ್ರತಿ 15 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಒಮ್ಮೆ ಹಾಯಿಸಿದರೆ, ಮತ್ತೊಂದು ಕಡೆ ಭೂಮಿ ಒಣಗಿರುತ್ತದೆ. ಹಸಿದ ಭೂಮಿಗೆ ಎಷ್ಟು ನೀರುಣಿಸಿದರೂ ಸಾಲುತ್ತಿಲ್ಲ. 650 ತೆಂಗಿನ ಗಿಡಗಳಿಗೆ ತಿಂಗಳಿಗೆ 2000 ಕಾಯಿ ಬರುತ್ತಿದ್ದವು ಆದರೀಗ 200 ಕಾಯಿ ಸಿಕ್ಕರೂ ಸಾಕು ಎಂಬಂತಾಗಿದೆ. ಮೂರು ತಿಂಗಳಾದರೂ ತೆಂಗಿನಕಾಯಿ ಕಾಣುತ್ತಿಲ್ಲ ಎಂದು ನಾಗರಕಟ್ಟೆಯ ರೈತ  ಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಹುತೇಕ ಭಾಗಗಳಲ್ಲಿನ ರೈತರು ನೀರಿನ ಸಮಸ್ಯೆ ಎದುರಿಸುತ್ತಿದ್ದು, ಸಮಯಕ್ಕೆ ಸರಿಯಾಗಿ ಹದ ಮಳೆ ಬಾರದಿದ್ದಲ್ಲಿ ಅಡಿಕೆ ಹಾಗೂ ತೆಂಗಿನ ಮರಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಮುಂದಿನ ಇಳುವರಿಯೂ ಕುಂಠಿತವಾಗಬಹುದು ಎಂಬುದು ರೈತರ ಆತಂಕ.

ಹೊಸದುರ್ಗದ ಮಧುರೆ ರಸ್ತೆ ಬದಿ ಜಮೀನಿನಲ್ಲಿ ಹಳದಿ ಬಣ್ಣಕ್ಕೆ ತಿರುಗಿರುವ ಅಡಿಕೆ ಸಸಿಗಳು
ಹೊಸದುರ್ಗದ ಹೇರೂರು ಬಳಿ ರೈತರೊಬ್ಬರು ಅಡಿಕೆ ತೋಟಕ್ಕೆ ಟ್ಯಾಂಕರ್‌ ನೀರು ಹಾಯಿಸುತ್ತಿರುವುದು
ಕೊಳವೆಬಾವಿ ಇರುವ ರೈತರೇ ತೋಟಗಳನ್ನು ಮಾಡಿದ್ದಾರೆ. ಸ್ವಲ್ಪ ಸಮಯ ಬಿಟ್ಟು‌ ನಂತರ ಮೋಟರ್‌ ಹಾಕಬೇಕು. ನಿರಂತರವಾಗಿ ನೀರು ಬಿಡಬಾರದು. ರೈತರಿಗೆ ಟ್ಯಾಂಕರ್‌ ನೀರು ಪೂರೈಸುವ ಬಗ್ಗೆ ಚರ್ಚೆ ನಡೆಯುತ್ತಿದೆ. 
ವೆಂಕಟೇಶ್‌ ಮೂರ್ತಿ ಹಿರಿಯ ತೋಟಗಾರಿಕೆ ನಿರ್ದೇಶಕ
ಹದ ಮಳೆಯಾಗಿ ಜಮೀನುಗಳು ಹಸಿಯಾದರೆ ತೋಟಗಳಿಗೆ ಚೈತನ್ಯ ಬಂದಂತಾಗುತ್ತದೆ. ನಿರೀಕ್ಷಿತ ಪ್ರಮಾಣದ ಫಸಲು ಪಡೆಯಲು ಇನ್ನೂ ಎರಡು ವರ್ಷ ಬೇಕಾಗುತ್ತದೆ. ಸರ್ಕಾರ ಸಹಾಯಧನ ಕಲ್ಪಿಸಿದರೆ ಅನುಕೂಲವಾಗುತ್ತದೆ.
ಎಂ. ಚಂದ್ರಪ್ಪ ನಾಗರಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.