ADVERTISEMENT

ಹಿರಿಯೂರು: ಕೊಳವೆಬಾವಿಯಲ್ಲಿ ಕಾರಂಜಿಯಂತೆ ಉಕ್ಕುತ್ತಿರುವ ನೀರು

ಹಿರಿಯೂರು ತಾಲ್ಲೂಕಿನ ಯಲ್ಲದಕೆರೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 3:01 IST
Last Updated 12 ಅಕ್ಟೋಬರ್ 2021, 3:01 IST
ಹಿರಿಯೂರು ತಾಲ್ಲೂಕಿನ ಯಲ್ಲದಕೆರೆ ಗ್ರಾಮದ ಸಿದ್ದಪ್ಪನ ದೇವಸ್ಥಾನದ ಮುಂದಿರುವ ಕೊಳವೆಬಾವಿಯಲ್ಲಿ ನೀರು ಬುಗ್ಗೆಯಂತೆ ಉಕ್ಕಿ ಬರುತ್ತಿರುವುದು.
ಹಿರಿಯೂರು ತಾಲ್ಲೂಕಿನ ಯಲ್ಲದಕೆರೆ ಗ್ರಾಮದ ಸಿದ್ದಪ್ಪನ ದೇವಸ್ಥಾನದ ಮುಂದಿರುವ ಕೊಳವೆಬಾವಿಯಲ್ಲಿ ನೀರು ಬುಗ್ಗೆಯಂತೆ ಉಕ್ಕಿ ಬರುತ್ತಿರುವುದು.   

ಹಿರಿಯೂರು: ತಾಲ್ಲೂಕಿನ ಯಲ್ಲದಕೆರೆ ಗ್ರಾಮದಲ್ಲಿರುವ ಸಿದ್ದಪ್ಪನ ದೇವಸ್ಥಾನ (ನೂರೊಂದು ಲಿಂಗಗಳಿರುವ) ಸಮೀಪ ಮೂರು ವರ್ಷದ ಹಿಂದೆ ಕೊರೆಸಿರುವ ಕೊಳವೆ ಬಾವಿಯಲ್ಲಿ ಮೂರ್ನಾಲ್ಕು ದಿನದಿಂದ ನೀರು ಬುಗ್ಗೆಯಂತೆ ಚಿಮ್ಮುತ್ತಿದ್ದು, ಜನಾಕರ್ಷಣೆಯ ಕೇಂದ್ರವಾಗಿದೆ.

ಗ್ರಾಮದ ಕುಡಿಯುವ ನೀರಿಗೆಂದು ಕೊಳವೆ ಬಾವಿ ಕೊರೆಸಲಾಗಿತ್ತು. ತದನಂತರ ಊರಿನಲ್ಲಿರುವ ಕೊಳವೆ ಬಾವಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಾಗಿದ್ದರಿಂದ ಸದರಿ ಕೊಳವೆಬಾವಿಯನ್ನು ಸಿದ್ದಪ್ಪನ ದೇವಸ್ಥಾನಕ್ಕೆ ಬಿಡಲಾಗಿತ್ತು. 150 ಅಡಿ ಆಳವಿರುವ ಬಾವಿಯಲ್ಲಿ ಎರಡು ತಿಂಗಳಿಂದ ಸಣ್ಣ ಪ್ರಮಾಣದಲ್ಲಿ ನೀರು ಹೊರಬರುತ್ತಿತ್ತು. ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗ್ರಾಮದ ಹೂಲಿಕೆರೆ ಅರ್ಧ ಭರ್ತಿಯಾಗಿದ್ದು, ಅಂತರ್ಜಲ ವೃದ್ಧಿಸಿದ್ದು, ನೀರು ಬುಗ್ಗೆಯಂತೆ ಚಿಮ್ಮತೊಡಗಿದೆ.

ದೇಗುಲದ ಮುಂದಿರುವ ಪುಷ್ಕರಣಿಯೂ ಭರ್ತಿಯಾಗಿದೆ’ ಎಂದು ಗ್ರಾಮ ಪಂಚಾಯಿತಿ ಪಿಡಿಒ ಶಿವಮೂರ್ತಿ ತಿಳಿಸಿದ್ದಾರೆ.

ADVERTISEMENT

‘ಹಿಂದಿನ ವರ್ಷ ಮಳೆಗಾಲದಲ್ಲಿ ಮೂರು ತಿಂಗಳು ನೀರು ಉಕ್ಕಿ ಬರುತ್ತಿತ್ತು. ಈ ವರ್ಷ ಯುಗಾದಿ ಹಬ್ಬದವರೆಗೂ ನೀರು ಹೊರಬರುವ ನಿರೀಕ್ಷೆ ಇದೆ. ಗ್ರಾಮಕ್ಕೆ ಹೊಂದಿಕೊಂಡಿರುವ ಹೂಲಿಕೆರೆ ಭರ್ತಿಯಾದಲ್ಲಿ ಸುತ್ತಮುತ್ತಲ ಆರೇಳು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದು. ವಾಣಿವಿಲಾಸ ಜಲಾಶಯದ ಅಣೆಕಟ್ಟೆ ಭಾಗದಿಂದ ಆರಂಭವಾಗುವ ಉತ್ತಾರೆಗುಡ್ಡ ಯಲ್ಲದಕೆರೆವರೆಗೂ ಹಬ್ಬಿದೆ. ಗುಡ್ಡದ ಆಚೆ ಜಲಾಶಯದ ಹಿನ್ನೀರು ಪ್ರದೇಶವಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.