ADVERTISEMENT

‘ಯುಗಾದಿ ಹಬ್ಬಕ್ಕೂ ನೀರು ಬಿಡಲಿಲ್ಲ...’

ಚಳ್ಳಕೆರೆ: ತೀವ್ರಗೊಂಡ ಕುಡಿಯುವ ನೀರಿನ ಬವಣೆ; 8 ಗ್ರಾಮಕ್ಕೆ ಖಾಸಗಿ ಕೊಳವೆಬಾವಿ ನೀರು ಪೂರೈಕೆ

ಶಿವಗಂಗಾ ಚಿತ್ತಯ್ಯ
Published 13 ಏಪ್ರಿಲ್ 2024, 7:16 IST
Last Updated 13 ಏಪ್ರಿಲ್ 2024, 7:16 IST
ಪದ್ಮಕ್ಕ
ಪದ್ಮಕ್ಕ   

ಚಳ್ಳಕೆರೆ: ‘ಯುಗಾದಿ ಹಬ್ಬ ಇದ್ರೂ ನಾಲ್ಕೈದು ಕೊಡ ಕುಡಿಯುವ ನೀರು ಸಿಗಲಿಲ್ಲ. ನೀರಿನ ಸೌಲಭ್ಯ ಇದ್ದರೂ ಪಂಚಾಯಿತಿ ಸದಸ್ಯರ ನಡುವಿನ ವೈಷಮ್ಯದಿಂದ ಎರಡು ತಿಂಗಳಿಂದ ಕುಡಿಯುವ ನೀರಿನ ಬವಣೆ ಹೆಚ್ಚಿದೆ. ದಾಹ ತೀರಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಮ್ಮದು..’

ಇದು ತಾಲ್ಲೂಕಿನ ಹಿರೇಹಳ್ಳಿ ಗ್ರಾಮದ ಮಹಿಳೆಯರ ಅಳಲು.

ವಾಣಿವಿಲಾಸ ಸಾಗರದ ನೀರು ಸರಬರಾಜು ಆಗುತ್ತಿದ್ದರೂ ನಿರ್ವಹಣೆ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿಗೆ ತೊಂದರೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದಕ್ಕಿಂತ ಭಿನ್ನವಾಗಿಲ್ಲ.

ADVERTISEMENT

ಮಳೆ ಅಭಾವ, ಬೇಸಿಗೆ ಬಿರುಬಿಸಿಲ ಪರಿಣಾಮ ಅಂತರ್ಜಲ ಕುಸಿದಿದ್ದು, ಕೊರೆಯಿಸಿದ್ದ ನೂರಾರು ಕೊಳವೆಬಾವಿ ಬತ್ತಿ ಹೋಗಿರುವುದರಿಂದ ಹುಲಿಕುಂಟೆ, ಕಾಪರಹಳ್ಳಿ, ಎಸ್.ಡಿ. ಬಡಾವಣೆ, ಚಿಕ್ಕಮದುರೆ, ಹಿರೇಮದುರೆ, ಶಿರಾದ ಕಪಿಲೆ, ವಿಶ್ವೇಶಪುರ, ನನ್ನಿವಾಳ, ಕಾವಲರಹಟ್ಟಿ, ರಾಯಬಾರಹಟ್ಟಿ, ಗಡ್ಡಾರಹಟ್ಟಿ, ಜನ್ನೇನಹಳ್ಳಿ ಲಂಬಾಣಿಹಟ್ಟಿ, ಮತ್ಸಮುದ್ರ, ಪುರ್ಲೆಹಳ್ಳಿ, ಗಂಜಿಗುಂಟೆ ಲಂಬಾಣಿಹಟ್ಟಿ ಸೇರಿ ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ.

ಕೊಳವೆ ಬಾವಿಯಲ್ಲಿ ಬರುತ್ತಿದ್ದ ನೀರು ಇದ್ದಕ್ಕಿದ್ದಂತೆಯೇ ಇಲ್ಲದಾಗಿದ್ದು, ಕೆರೆಹಿಂದಲಹಟ್ಟಿ, ವರವು, ಬಂಡೆಹಟ್ಟಿ, ಎನ್.ದೇವರಹಳ್ಳಿ, ಪಾಲನಾಯಕನಕೋಟೆ, ಚಿಕ್ಕಉಳ್ಳಾರ್ತಿ, ಬೆಲ್ದರಹಟ್ಟಿ ಮುಂತಾದ ಗ್ರಾಮಗಳಿಗೆ ಖಾಸಗಿಯವರ ಕೊಳವೆಬಾವಿಯ ನೀರನ್ನು ಪಡೆದು ತಾಲ್ಲೂಕು ಆಡಳಿತ ಪೂರೈಸುತ್ತಿದೆ.

‘ತಾಲ್ಲೂಕಿನ ಮನೆಮನೆಗೆ ನೀರಿನ ವ್ಯವಸ್ಥೆ ಕಲ್ಪಿಸುವ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್‌ ಯೋಜನೆ ಕಾಮಗಾರಿ ಕಳಪೆಯಾಗಿದ್ದು, ನೀರು ಹರಿಯುತ್ತಿಲ್ಲ. ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕಗಳೂ ಕೆಟ್ಟು ನಿಂತು ಎರಡು ತಿಂಗಳಾಗಿವೆ. ನಾಲ್ಕೈದು ದಿನಕ್ಕೊಮ್ಮೆ  ಬಿಡುತ್ತಿರುವ ಒಂದೆರಡು ಕೊಡ ನೀರು ಸಾಕಾಗುತ್ತಿಲ್ಲ. ಉರಿಬಿಸಿಲು ಇದೆ. 4ರಿಂದ 5 ಪ್ಲಾಸ್ಟಿಕ್ ಡ್ರಮ್ ತೆಗೆದುಕೊಂಡು 2 ಕಿ.ಮೀ. ದೂರದ ಎಂ. ಉಪ್ಪಾರಹಟ್ಟಿ ಗ್ರಾಮದಿಂದ ಟೆಂಪೋ ಮೂಲಕ ಕುಡಿಯುವ ನೀರು ಹೇರಿಕೊಂಡು ಬರುತ್ತೇವೆ’ ಎನ್ನುತ್ತಾರೆ ಹಿರೇಮಧುರೆ ಗ್ರಾಮದ ವೀರಣ್ಣ.

‘ನೀರು ಲಭ್ಯ ಇರುವ ಸರ್ಕಾರಿ ಕೊಳವೆಬಾವಿಯನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಅತಿಕ್ರಮಣ ಮಾಡಿಕೊಂಡು ಮೋಟಾರ್ ಅಳವಡಿಸಿ ಪೈಪ್ ಮೂಲಕ ಕೃಷಿ ಚಟವಟಿಕೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪಾಲನಾಯಕನಕೋಟೆ ಗ್ರಾಮದ ಜನರಿಗೆ ಕುಡಿಯುವ ನೀರು ಪೂರೈಸಲು ಖಾಸಗಿ ಕೊಳವೆಬಾವಿ ಮಾಲೀಕರಿಗೆ ಹಣ ವ್ಯಯ ಮಾಡಲು ಗ್ರಾಮ ಪಂಚಾಯಿತಿ ಹೊರಟಿದೆ’ ಎಂದು ಹಿರೇಹಳ್ಳಿ ಸದಸ್ಯ ಬಸವರಾಜ ಆಕ್ರೋಶ ವ್ಯಕ್ತಪಡಿಸಿದರು.

‘ಪೈಪ್‌ಲೈನ್ ಮೂಲಕ ಸರಬರಾಜು ಆಗುತ್ತಿರುವ ವಿ.ವಿ. ಸಾಗರದ ನೀರಿಗೆ ಪ್ರತಿ ಮನೆಗಳಲ್ಲಿ ಅಕ್ರಮವಾಗಿ ಮೋಟಾರ್ ಅಳವಡಿಸಿಕೊಂಡಿದ್ದಾರೆ. ಕಟ್ಟಡ ನಿರ್ಮಾಣದ ಕೆಲಸಕ್ಕೂ ಸಿಹಿ ನೀರು ಬಳಸುತ್ತಿರುವುದರಿಂದ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ’ ಎಂದು ಗಾಂಧಿನಗರದ ನಿವಾಸಿ ತಿಪ್ಪೇಸ್ವಾಮಿ ಆರೋಪಿಸಿದರು.

ಹಿರೇಮಧುರೆ ಗ್ರಾಮದ ವೀರಣ್ಣ ಅವರು ಎಂ. ಉಪ್ಪಾರಹಟ್ಟಿ ಗ್ರಾಮದಿಂದ ಟೆಂಪೋ ವಾಹನದ ಮೂಲಕ ಕುಡಿಯುವ ನೀರು ಹೇರಿಕೊಂಡು ತಂದರು
ತಾಲ್ಲೂಕಿನ ಹಿರೇಹಳ್ಳಿ ಗ್ರಾಮ ಪಂಚಾಯಿತಿ ಮಹಿಳೆಯರು ನೀರಿಗಾಗಿ ಸಾಲುಗಟ್ಟಿ ನಿಂತಿರುವುದು

ಮಿನಿ ಟ್ಯಾಂಕ್ ಶುದ್ಧ ಕುಡಿಯುವ ನೀರಿನ ಘಟಕ ಎಲ್ಲವೂ ಚರಂಡಿ ಬಳಿ ನಿರ್ಮಿಸಲಾಗಿದೆ. ಟ್ಯಾಂಕ್‌ ಅನ್ನು ಎಂದಿಗೂ ಸ್ವಚ್ಛ ಮಾಡುವುದಿಲ್ಲ. ಮಿನಿ ಟ್ಯಾಂಕ್‍ಗೆ ಸರಬರಾಜು ಆಗುವ ಕಲುಷಿತ ನೀರನ್ನೇ ಕುಡಿಯುತ್ತೇವೆ

-ಪದ್ಮಕ್ಕ ಚಳ್ಳಕೆರೆಯ ಅಂಬೇಡ್ಕರ್ ನಗರದ ನಿವಾಸಿ

ಪ್ರಕರಣ ದಾಖಲು ಕೃಷಿ ಚಟುವಟಿಕೆಗೆ ನೀರಿನ ತೊಂದರೆಯಾಗುತ್ತದೆ ಎಂಬ ಆತಂಕದಿಂದ ಗ್ರಾಮ ಪಂಚಾಯಿತಿ ಸದಸ್ಯರೇ ತಮ್ಮ ಜಮೀನಿನ ಪಕ್ಕದ ಸರ್ಕಾರಿ ಕೊಳವೆಬಾವಿಯನ್ನು ಕಲ್ಲು ಹಾಕಿ ಮುಚ್ಚಿದ ಘಟನೆ ತಾಲ್ಲೂಕಿನ ಹಿರೇಹಳ್ಳಿ ಹಾಗೂ ಕೋಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದ್ದು ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.