ADVERTISEMENT

ಸಿರಿಗೆರೆ | ನೀರಿಗಾಗಿ ಕಾಯುವುದೇ ‘ಕಾಯಕ’

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 7:21 IST
Last Updated 7 ಏಪ್ರಿಲ್ 2024, 7:21 IST
   

ಸಿರಿಗೆರೆ: ಬೆಳಗಾಯಿತೆಂದರೆ ಸಾಕು ಈ ಗ್ರಾಮದ ಜನ ಮನೆಯಲ್ಲಿರುವ ಪ್ಲಾಸ್ಟಿಕ್‌ ಬಿಂದಿಗೆಗಳನ್ನೆಲ್ಲ ತಳ್ಳುಗಾಡಿಗಳಿಗೆ ತುಂಬಿಕೊಂಡು, ನೀರು ಅರಸಿ ಹೊರಟೇ ಬಿಡುತ್ತಾರೆ. ಅವರು ನೀರು ತುಂಬಿಕೊಂಡು ಮತ್ತೆ ಯಾವಾಗ ಮನೆಗೆ ಮರಳುತ್ತಾರೆ ಎಂಬುದನ್ನು ನಿಖರವಾಗಿ ಹೇಳುವುದಕ್ಕೆ ಸಾಧ್ಯವೇ ಇಲ್ಲ....

ಸಿರಿಗೆರೆ ಸಮೀಪದ ಬಸವನ ಶಿವನಕೆರೆ ಗ್ರಾಮಸ್ಥರ ನಿತ್ಯದ ಪಾಡಿದು.

ಈ ಊರಿನ ಜನ ಸರದಿಯಲ್ಲಿ ಸಿಗುವ 10 ಬಿಂದಿಗೆ ನೀರಿಗಾಗಿ ದಿನವಿಡೀ ಕಾಯಬೇಕು. ಒಮ್ಮೊಮ್ಮೆ ರಾತ್ರಿಯೂ ನೀರಿಗಾಗಿ ಕಾದು ಕುಳಿತುಕೊಳ್ಳುವ ದೃಶ್ಯವನ್ನು ಇಲ್ಲಿ ಕಾಣಬಹುದು.

ADVERTISEMENT

ಮಹಿಳೆಯರು, ಪುರುಷರು, ಮಕ್ಕಳೆನ್ನದೆ ಎಲ್ಲರೂ ನಿಡುಸುಯ್ಯುವ ಉರಿಬಿಸಿಲನ್ನೂ ಲೆಕ್ಕಿಸದೆ ನೀರಿಗಾಗಿ ಕಾಯುತ್ತಾರೆ. ಇದು  ಇಲ್ಲಿನ ಜನರ ಬವಣೆಗೆ ಹಿಡಿದ ಕನ್ನಡಿಯಾಗಿದೆ. ಒಂದೊಮ್ಮೆ ಬೆಳಿಗ್ಗೆ ಬಿಂದಿಗೆಗಳನ್ನು ಸರದಿ ಸಾಲಿನಲ್ಲಿಟ್ಟು ಕಾಯುತ್ತಾ ಕುಳಿತರೆ, ಮಧ್ಯಾಹ್ನದ ಹೊತ್ತಿಗೋ, ಸಂಜೆಯ ಹೊತ್ತಿಗೋ ನೀರು ಸಿಗಬಹುದು. ಅದೂ ವಿದ್ಯುತ್‌ ಕಣ್ಣಾಮುಚ್ಚಾಲೆ ಆಡದೇ ಇದ್ದರೆ.

ಬಸವನ ಶಿವನಕೆರೆಯಲ್ಲಿ 400 ಕುಟುಂಬಗಳು ವಾಸ ಇವೆ. ಅಂದಾಜು 1500 ಜನಸಂಖ್ಯೆ ಇರುವ ಗ್ರಾಮವಿದು. ಇಲ್ಲಿ ಹಿಂದೆ ಕುಡಿಯುವ ನೀರಿಗಾಗಿ 10 ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಈ ಪೈಕಿ 8 ಕೊಳವೆಬಾವಿಗಳು ಸಂಪೂರ್ಣವಾಗಿ ಬರಿದಾಗಿವೆ. ವಾರದ ಹಿಂದೆ 1,000 ಅಡಿ ಆಳ ಕೊರೆದ ಕೊಳವೆ ಬಾವಿಯಲ್ಲಿ ಹನಿ ನೀರೂ ಸಿಕ್ಕಿಲ್ಲ. ಇದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ.

ಎರಡು ಕೊಳವೆ ಬಾವಿಗಳಿಂದ ಒಂದು ಇಂಚಿನಷ್ಟು ಮಾತ್ರ ನೀರು ಬರುತ್ತಿದೆ. ಅದಕ್ಕೆ ಪೈಪು ಅಳವಡಿಸಿ ಗ್ರಾಮದ ಮೂರು ಕಡೆ ನೀರು ನೀಡುವ ವ್ಯವಸ್ಥೆ ಮಾಡಲಾಗಿದೆ. ಪೈಪ್‌ಗಳಲ್ಲಿ ನೀರು ಕಣ್ಣೀರಿನಂತೆ ಹರಿಯುವ ದೃಶ್ಯವನ್ನು ನೋಡಿ ಗ್ರಾಮಸ್ಥರೇ ಮರುಗುವಂತಾಗಿದೆ.

ಗ್ರಾಮದಲ್ಲಿ ಕೃಷಿ ಆಧಾರಿತ ಬದುಕು ಕಟ್ಟಿಕೊಂಡವರೇ ಹೆಚ್ಚು. ಈಗ ಬಹುತೇಕ ಅವರೆಲ್ಲ ತಮ್ಮ ಕೃಷಿ ಕೆಲಸ ಬದಿಗಿಟ್ಟು ನೀರಿಗಾಗಿ ಕಾಯುವ ಕೆಲಸಕ್ಕೆ ಶಿಫ್ಟ್‌ ಆಗಿದ್ದಾರೆ. ಶಾಲೆಗೆ ಹೋಗುವ ಮಕ್ಕಳಿಗೆ ಈಗ ನೀರು ಬರುವ ಸ್ಥಳದಲ್ಲಿದ್ದುಕೊಂಡು ಬಿಂದಿಗೆಗಳನ್ನು ತುಂಬಿಸುವುದೇ ಕೆಲಸವಾಗಿದೆ. ಇಂತಹ ಸ್ಥಿತಿ ಉಂಟಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನೀರಿನ ಬವಣೆ ತೀರಿಸಲು ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಇದೇ ಪರಿಸ್ಥಿತಿ ಪಕ್ಕದ ಬೇಡರ ಶಿವನಕೆರೆ ಗ್ರಾಮದಲ್ಲಿಯೂ ಇದ್ದು, ಅಲ್ಲಿಯೂ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೆಮ್ಮದಿ: ಸಿರಿಗೆರೆ, ಅಳಗವಾಡಿ, ದೊಡ್ಡಾಲಗಟ್ಟ ಮತ್ತು ಚಿಕ್ಕಬೆನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 32 ಹಳ್ಳಿಗಳ ಜನರ ನೀರಿನ ದಾಹವನ್ನು ಸೂಳೆಕೆರೆ– ಸಿರಿಗೆರೆ– ಭರಮಸಾಗರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತಣಿಸಿದೆ. ಹಾಗಾಗಿ, ಈ ಗ್ರಾಮ ಪಂಚಾಯಿತಿಗೆ ಸೇರುವ ಬಹುತೇಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಂತೂ ಇಲ್ಲ. ಆದರೆ, ಯೋಜನೆಯ ಅಡಿ ಗೌರಮ್ಮನಹಳ್ಳಿ ಮತ್ತು ಚಿಕ್ಕೇನಹಳ್ಳಿ ಗ್ರಾಮಕ್ಕೆ ಪೈಪ್‌ ಅಳವಡಿಸಿ ವರ್ಷ ಕಳೆದಿದ್ದರೂ ನೀರು ಬಂದಿಲ್ಲ. ಓಬಳಾಪುರ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಓವರ್‌ಹೆಡ್‌ ಟ್ಯಾಂಕ್‌ ಕೆಲಸ ಅರ್ಧಕ್ಕೆ ನಿಂತು ವರ್ಷವೇ ಕಳೆದಿದೆ.

ಸೂಳೆಕೆರೆಯಿಂದ ಬರುವ ನೀರನ್ನು ಅಡುಗೆ, ಸ್ನಾನ, ಶೌಚ, ಬಟ್ಟೆ ತೊಳೆಯಲು, ಜಾನುವಾರುಗಳಿಗೆ ಕುಡಿಯಲು ಹಾಗೂ ಇನ್ನಿತರ ಉದ್ದೇಶಕ್ಕೆ ಬಳಸಲಾಗುತ್ತಿದೆ. ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಆರಂಭಗೊಂಡಿದ್ದ ಬಹುತೇಕ ಘಟಕಗಳು ಕೆಟ್ಟು ನಿಂತು ವರ್ಷಗಳೇ ಕಳೆದಿವೆ. ಫಿಲ್ಟರ್‌ ಮಾಡಿದ ನೀರಿನ ಕ್ಯಾನ್‌ಗಳನ್ನು ₹ 10ರಿಂದ ₹ 20 ಕೊಟ್ಟು ಖಾಸಗಿಯವರಿಂದ ಕೊಳ್ಳಬೇಕಾದ ಸ್ಥಿತಿ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.