ADVERTISEMENT

ಭರಮಸಾಗರ: ನೆಲ್ಲಿಕಟ್ಟೆ ನವಗ್ರಾಮದಲ್ಲಿ ನೀರ ಬವಣೆ

ಭರಮಸಾಗರ: ಜೀವ ಜಲದ ಸಮಸ್ಯೆ ನಿವಾರಣೆ ನಿರೀಕ್ಷೆಯಲ್ಲಿ ಗ್ರಾಮಸ್ಥರು

ವಿ.ಎಂ.ಶಿವಪ್ರಸಾದ್
Published 17 ಏಪ್ರಿಲ್ 2024, 6:04 IST
Last Updated 17 ಏಪ್ರಿಲ್ 2024, 6:04 IST
ನೆಲ್ಲಿಕಟ್ಟೆ ನವಗ್ರಾಮದಲ್ಲಿ ತಳ್ಳುಗಾಡಿಗಳಲ್ಲಿ ಕೊಡಗಳನ್ನು ಇಟ್ಟುಕೊಂಡು ನೀರಿನ ಟ್ಯಾಂಕರ್‌ಗಾಗಿ ಕಾಯುತ್ತಿರುವ ಮಹಿಳೆಯರು
ನೆಲ್ಲಿಕಟ್ಟೆ ನವಗ್ರಾಮದಲ್ಲಿ ತಳ್ಳುಗಾಡಿಗಳಲ್ಲಿ ಕೊಡಗಳನ್ನು ಇಟ್ಟುಕೊಂಡು ನೀರಿನ ಟ್ಯಾಂಕರ್‌ಗಾಗಿ ಕಾಯುತ್ತಿರುವ ಮಹಿಳೆಯರು   

ಭರಮಸಾಗರ: ‘ಅಕ್ಕಿ ಇಲ್ಲ, ಬೇಳೆ ಇಲ್ಲ ಅಂದ್ರೆ ಹೇಗೋ ನಿಭಾಯಿಸಬಹುದು. ಆದರೆ, ಕುಡಿಯುವ ನೀರಿಗೆ ಸಮಸ್ಯೆಯಾದರೆ ಮನೆ ನಿಭಾಯಿಸುವುದು ತುಂಬಾ ಕಷ್ಟ. ನೀರಿಲ್ಲದೆ ಜನ, ಜಾನುವಾರುಗಳು ಪರಿತಪಿಸುವಂತಾಗಿದೆ’....

ಹೀಗೆ ಅಸಹಾಯಕತೆ ವ್ಯಕ್ತಪಡಿಸಿದವರು ಕಾಲ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಕಟ್ಟೆ ನವಗ್ರಾಮದ ಮಹಿಳೆಯರು.

‘ಗ್ರಾಮದಲ್ಲಿ ತಲೆದೋರಿರುವ ನೀರಿನ ಸಮಸ್ಯೆಯಿಂದ ಸಾಕಾಗಿ ಹೋಗಿದೆ. ಉತ್ತಮ ಮಳೆ ಸುರಿದು ಈ ಸಮಸ್ಯೆ ದೂರವಾಗುವವರೆಗೂ ಊರು ತೊರೆದು ನೀರಿರುವ ಬೇರೆ ಗ್ರಾಮಕ್ಕಾದರೂ ಹೋಗಿ ಜೀವನ ಮಾಡೋಣ ಎಂದು ಅನಿಸುತ್ತಿದೆ. ಸಾಮರಸ್ಯದಿಂದ ಜೀವನ ನಡೆಸುತ್ತಿರುವ ನಾವು ನೀರಿನ ಟ್ಯಾಂಕರ್ ಬಂದಾಗ ನೀರು ಹಿಡಿದುಕೊಳ್ಳಲು ಜಗಳವಾಡಿಕೊಳ್ಳುವ ಸ್ಥಿತಿ ಬಂದಿದೆ’ ಎಂದು ಗ್ರಾಮದ ಯುವಕ ರವಿಕುಮಾರ್ ನೊಂದು ನುಡಿಯುತ್ತಾರೆ. 

ADVERTISEMENT

ಹೋಬಳಿ ವ್ಯಾಪ್ತಿಯಲ್ಲಿ ಸೂಳೆಕೆರೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಸಂಪರ್ಕವಿರದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ನಂದಿಹಳ್ಳಿಯಲ್ಲೂ ನೀರಿನ ಸಮಸ್ಯೆ ಬಿಗಡಾಯಿಸಿದೆ.

ನೆಲ್ಲಿಕಟ್ಟೆ ಗ್ರಾಮದಲ್ಲಿ 350 ಮನೆಗಳು ಹಾಗೂ ನವಗ್ರಾಮದಲ್ಲಿ ಅಂದಾಜು 60 ಮನೆಗಳಿವೆ. ನೆಲ್ಲಿಕಟ್ಟೆಯಲ್ಲಿರುವ 2 ಕೊಳವೆ ಬಾವಿಗಳಲ್ಲಿ ಒಂದು ಕೊಳವೆಬಾವಿಯಲ್ಲಿ ಮಾತ್ರ ಅಲ್ಪ ಪ್ರಮಾಣದ ನೀರು ಬರುತ್ತಿದೆ. ಆ ನೀರನ್ನು ಗ್ರಾಮದಲ್ಲಿ ನಾಲ್ಕು ಕಡೆ ಇರುವ ಮಿನಿಟ್ಯಾಂಕ್‌ಗಳಿಗೆ ದಿನಕ್ಕೆ ಒಂದು ಗಂಟೆಯಂತೆ ವಿಂಗಡಿಸಿ ನೀರು ಪೂರೈಕೆ ಮಾಡಲಾಗುತ್ತಿದೆ. ನೆಲ್ಲಿಕಟ್ಟೆ ನವಗ್ರಾಮದ ಓವರ್‌ಹೆಡ್ ಟ್ಯಾಂಕ್‌ಗೆ ಈ ನೀರು ಪೂರೈಕೆ ಮಾಡಲು ಅಸಾಧ್ಯವಾಗಿದೆ. ಕೊಳವೆ ಬಾವಿಯಲ್ಲಿ ಹೆಚ್ಚು ನೀರು ದೊರಕದ ಕಾರಣ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯ ನಿರ್ವಹಿಸುತ್ತಿಲ್ಲ.

‘ನಾಲ್ಕು ತಿಂಗಳಿಂದ ನೀರಿನ ಸಮಸ್ಯೆ ತಲೆದೋರಿದೆ. ತಾಲ್ಲೂಕು ಪಂಚಾಯಿತಿ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿಕೊಂಡಿದ್ದೇವೆ. ಕೊಳವೆಬಾವಿ ಕೊರೆಯಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಕೊಳವೆಬಾವಿ ಕೊರೆಸಲು ಪಾಯಿಂಟ್ ಕೂಡ ಮಾಡಲಾಗಿದೆ. ಆದರೆ, ತಿಂಗಳಾದರೂ ಕೊಳವೆ ಬಾವಿ ಕೊರೆಯಲು ಬೋರ್‌ಗಾಡಿ ಬಂದಿಲ್ಲ’ ಎಂದು ನವಗ್ರಾಮದ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

‘ಎರಡ್ಮೂರು ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಒಂದು ಮನೆಗೆ 10ರಿಂದ 11 ಕೊಡ ನೀರು ಸಿಗುತ್ತದೆ. ಅದರಲ್ಲಿ ಅಡುಗೆಗೆ, ಬಟ್ಟೆ ತೊಳೆಯಲು, ಸ್ನಾನ ಮಾಡಲು, ಜಾನುವಾರುಗಳು ಕುಡಿಯುವುದಕ್ಕೆ ಹೀಗೆ ಎಲ್ಲದಕ್ಕೂ ಇದೇ ನೀರು ಬಳಸಬೇಕು. ನೀರಿನ ಅಭಾವ ಹಬ್ಬ ಹರಿದಿನಗಳ ಆಚರಣೆಗೂ ಅಡ್ಡಿಯಾಗಿದೆ. ವಾರಕ್ಕೆ ಒಮ್ಮೆ ಸ್ನಾನ ಮಾಡುವ ಪರಿಸ್ಥಿತಿ ಬಂದಿದೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

‘ಸಮೀಪದ ಬಿದರಿಕೆರೆ, ನಿಬಗೂರು ಗ್ರಾಮದಿಂದ ದುಡ್ಡುಕೊಟ್ಟು ಫಿಲ್ಟರ್ ನೀರು ತರಬೇಕು. ಗ್ರಾಮದಲ್ಲಿ ನೀರು ಸಂಗ್ರಹದ ತೊಟ್ಟಿ ನಿರ್ಮಿಸಿಲ್ಲ. ಊರ ಪಕ್ಕದ ಬಹುತೇಕ ಹೊಲಗಳ ಕೊಳವೆ ಬಾವಿಗಳು ಬತ್ತುತ್ತಿರುವ ಕಾರಣ ಅಂದಾಜು 3 ಕಿ.ಮೀ. ದೂರದಲ್ಲಿನ ಹೊಸಹಟ್ಟಿ, ಅಜ್ಜಪ್ಪನಹಳ್ಳಿ ಗ್ರಾಮಗಳ ಬಳಿ ಇರುವ ಜಮೀನುಗಳಲ್ಲಿನ ಕೃಷಿ ಹೊಂಡದಲ್ಲಿ ರೈತರು ತೋಟಗಾರಿಕೆ ಬೆಳೆಗೆ ಸಂಗ್ರಹಿಸಿರುವ ನೀರನ್ನು ಕಾಡಿಬೇಡಿ ತರಬೇಕಿದೆ. ಬಿಸಿಲ ತಾಪಕ್ಕೆ ಅಲ್ಲಿಂದ ನೀರು ತರುವಷ್ಟರಲ್ಲಿ ತಲೆಸುತ್ತು ಬರುತ್ತದೆ. ಅಂಗನವಾಡಿಯಲ್ಲಿ ಅಡುಗೆ ಮಾಡಲು ನಮ್ಮ ಮನೆಗಳಿಂದಲೇ ಒಂದೊಂದು ಕೊಡ ನೀರು ಕೊಡಬೇಕು. ಇಲ್ಲಿನ ಶಾಲೆಗೂ ನೀರಿಲ್ಲ. ಇಸಾಮುದ್ರ ಗ್ರಾಮದ ಕೆರೆಗೆ ತೆರಳಿ ಬಟ್ಟೆ ಒಗೆದುಕೊಂಡು ಬರಬೇಕು’ ಎನ್ನುತ್ತಾರೆ ಗ್ರಾಮದ ಸಿದ್ದಮ್ಮ, ಸಾವಿತ್ರಮ್ಮ, ತಿಪ್ಪೇಸ್ವಾಮಿ.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ನೀರಿನ ಸಮಸ್ಯೆ ಪರಿಹರಿಸಬೇಕು ಎನ್ನುವುದು ನೆಲ್ಲಿಕಟ್ಟೆ ನವಗ್ರಾಮ ನಿವಾಸಿಗಳ ಒಕ್ಕೊರಲ ಬೇಡಿಕೆ.

ನೆಲ್ಲಿಕಟ್ಟೆ ಗ್ರಾಮದಲ್ಲಿನ ಮಿನಿ ಟ್ಯಾಂಕ್ ಬಳಿ ಗ್ರಾಮಸ್ಥರು ಸರದಿಯಲ್ಲಿ ನೀರು ಹಿಡಿದುಕೊಳ್ಳುತ್ತಿರುವುದು

ನೀರಿನ ಟ್ಯಾಂಕರ್ ಯಾವಾಗಲೋ ಬರುತ್ತದೆ. ಮಗ ಕೂಲಿ ಕೆಲಸಕ್ಕೆ ಹೋಗುತ್ತಾನೆ. ನನಗೆ ವಯಸ್ಸಾಗಿದೆ. ನಮ್ಮಂತವರು ಕಾದು ನೀರು ಹಿಡಿದುಕೊಳ್ಳುವುದು ಕಷ್ಟ. ಮಿನಿ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಿದರೆ ಅನುಕೂಲ.

-ರುದ್ರಮ್ಮ ನೆಲ್ಲಿಕಟ್ಟೆ ನವಗ್ರಾಮ

ಬರಗಾಲ ಬಂದಾಗ ಕುಡಿಯುವ ನೀರಿನ ಸಮಸ್ಯೆ ತಲೆದೋರುವುದು ಸಹಜ. ಆದರೆ ವಿವಿಧ ಯೋಜನೆಗಳ ಮೂಲಕ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಅಧಿಕಾರಿಗಳು ಮುಂದಾಗಬೇಕು.

-ತಿಪ್ಪೇಸ್ವಾಮಿ ನೆಲ್ಲಿಕಟ್ಟೆ ನವಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.