ADVERTISEMENT

ಹಿರಿಯೂರು: ಇನ್ನಾದರೂ ಆರಂಭಗೊಳ್ಳುವುದೇ ಸಕ್ಕರೆ ಕಾರ್ಖಾನೆ?

ವಾಣಿ ವಿಲಾಸಕ್ಕೆ ಮತ್ತೊಮ್ಮೆ ನೀರು ಬಂದಾಯಿತು, ಕಾರ್ಖಾನೆ ಆರಂಭಿಸಲು ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 5:45 IST
Last Updated 27 ಅಕ್ಟೋಬರ್ 2024, 5:45 IST
ಮುಳ್ಳು ಕಂಟಿಗಳ ನಡುವೆ ಮುಚ್ಚಿಹೋಗುತ್ತಿರುವ ಹಿರಿಯೂರಿನ ವಾಣಿ ವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆ.
ಮುಳ್ಳು ಕಂಟಿಗಳ ನಡುವೆ ಮುಚ್ಚಿಹೋಗುತ್ತಿರುವ ಹಿರಿಯೂರಿನ ವಾಣಿ ವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆ.   

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯ ಮೂರನೇ ಬಾರಿಗೆ ಕೋಡಿ ಬೀಳುವ ದಿನಗಳು ಸಮೀಪಿಸುತ್ತಿದ್ದು ಚಿತ್ರದುರ್ಗ ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ವಾಣಿವಿಲಾಸ ಸಕ್ಕರೆ ಕಾರ್ಖಾನೆಯನ್ನು ಈಗಲಾದರೂ ಆರಂಭಿಸಿ ಎಂದು ಸಾರ್ವಜನಿಕರು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.

2002ರಲ್ಲಿ ಸಕ್ಕರೆ ಕಾರ್ಖಾನೆ ಸಮಾಪನೆಗೊಂಡಿದೆ. 2022ರಲ್ಲಿ ವಾಣಿವಿಲಾಸ ಜಲಾಶಯ ಎರಡನೇ ಬಾರಿಗೆ ಕೋಡಿ ಬಿದ್ದ ಸಮಯದಲ್ಲಿ ಆರಂಭಿಸುವ ಮುನ್ಸೂಚನೆ ದೊರೆತಿತ್ತು. ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು. ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್ ನಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಹಣ ಮೀಸಲಿಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿತ್ತು. ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತದೆ, ಸರ್ಕಾರದ ಸಹಭಾಗಿತ್ವದಲ್ಲಿ ಖಾಸಗಿಯವರು ನಡೆಸುತ್ತಾರೆ ಎಂಬ ಮಾತುಗಳಿದ್ದವು.

2002–2009ರವರೆಗೆ 130 ಅಡಿ ಸಾಮರ್ಥ್ಯದ ವಾಣಿವಿಲಾಸ ಜಲಾಶಯ 100 ಅಡಿ ಮಟ್ಟವನ್ನು ದಾಟಿರಲಿಲ್ಲ. 2010ರಲ್ಲಿ 112.75 ಅಡಿವರೆಗೆ ನೀರು ಬಂದಿತ್ತು. ಮರುವರ್ಷ ನೀರಿನ ‌ಮಟ್ಟ106.05 ಅಡಿಗೆ ಇಳಿದಿದ್ದು, 2017ರಲ್ಲಿ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿತ್ತು. ಹೀಗಾಗಿ ಯಾವ ರೈತ ಮುಖಂಡರೂ ಸಕ್ಕರೆ ಕಾರ್ಖಾನೆ ಆರಂಭಿಸಿ ಎಂದು ಸರ್ಕಾರದ ಮೇಲೆ ಒತ್ತಡ ಹೇರುವ ಗೋಜಿಗೆ ಹೋಗಿರಲಿಲ್ಲ.

ADVERTISEMENT

2019ರಿಂದ ಭದ್ರಾ ಜಲಾಶಯದ ನೀರು ಹರಿದು ಬರತೊಡಗಿದ ನಂತರ ಜಲಾಶಯ ಮತ್ತೆ ಗತವೈಭವದತ್ತ ಸಾಗಿ 2022ರಲ್ಲಿ 85 ವರ್ಷಗಳ ನಂತರ ಎರಡನೇ ಬಾರಿಗೆ ಕೋಡಿ ಹರಿದಿತ್ತು. ಕೋಡಿ ಬಿದ್ದ ನಂತರ ಸಕ್ಕರೆ ಕಾರ್ಖಾನೆ ಆರಂಭಿಸಬೇಕೆಂಬ ಒತ್ತಾಸೆಗೆ ಮತ್ತೆ ಬಲಬಂದಿತು. ಈಗ ಮೂರನೇ ಬಾರಿಗೆ ಜಲಾಶಯ ಭರ್ತಿಯಾಗಲು 3.90 ಅಡಿಯಷ್ಟೇ ಬಾಕಿ ಇದ್ದು, ಮತ್ತೊಮ್ಮೆ ಸಕ್ಕರೆ ಕಾರ್ಖಾನೆ ವಿಚಾರ ಮುನ್ನೆಲೆಗೆ ಬಂದಿದೆ.

ರಾಷ್ಟ್ರೀಯ ಹೆದ್ದಾರಿ 48 ಹಾಗೂ ಬೀದರ್–ಶ್ರೀರಂಗಪಟ್ಟಣ ಹೆದ್ದಾರಿಗೆ ಹೊಂದಿಕೊಂಡು 165 ಎಕರೆ ವಿಸ್ತೀರ್ಣದಲ್ಲಿರುವ ಸಕ್ಕರೆ ಕಾರ್ಖಾನೆ (ಇಷ್ಟೊಂದು ವಿಸ್ತೀರ್ಣ ಪ್ರದೇಶದಲ್ಲಿ ಇರುವ ಕಾರ್ಖಾನೆಗಳು ರಾಜ್ಯದಲ್ಲಿ ಅಪರೂಪ ಎಂಬ ಮಾತಿದೆ) ಆರಂಭಗೊಂಡದ್ದು 1971–72 ರಲ್ಲಿ. 400 ಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ಬದುಕು ಕೊಟ್ಟಿದ್ದ ಈ ಕಾರ್ಖಾನೆ ಪರೋಕ್ಷವಾಗಿ ಸಾವಿರಾರು ಕುಟುಂಬಗಳಿಗೆ ಆಧಾರ ಸ್ತಂಭವಾಗಿತ್ತು. 

ಪ್ರತಿನಿತ್ಯ 1,250 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ.  1979–80ರಲ್ಲಿ ಡಿಸ್ಟಿಲರಿ ಮಂಜೂರು ಮಾಡಲಾಯಿತು. ಮಳೆಯ ಕೊರತೆ, ವಾಣಿ ವಿಲಾಸ ಜಲಾಶಯದಲ್ಲಿ ನೀರು ಬರಿದಾಗಿದ್ದು, ಆಡಳಿತದಲ್ಲಿನ ಅವ್ಯವಸ್ಥೆಯಿಂದ ಡಿಸ್ಟಿಲರಿ ಆರಂಭಗೊಂಡ ನಾಲ್ಕೇ ವರ್ಷದಲ್ಲಿ ಕಾರ್ಖಾನೆ ಕಬ್ಬು ಅರೆಯುವುದನ್ನು ಸ್ಥಗಿತಗೊಳಿಸಿತು. 1985ರಲ್ಲಿ ಮೊದಲ ಬಾರಿಗೆ ಕಾರ್ಖಾನೆಗೆ ಬೀಗಮುದ್ರೆ ಬಿದ್ದಿತು.

1993 ರಲ್ಲಿ ಅದೃಷ್ಟವೋ ಎಂಬಂತೆ ವಾಣಿ ವಿಲಾಸ ಜಲಾಶಯಕ್ಕೆ 108 ಅಡಿ ನೀರು ಬಂದಿದ್ದರಿಂದ ರೈತರ ಒತ್ತಾಯದ ಮೇರೆಗೆ ಸಕ್ಕರೆ ಕಾರ್ಖಾನೆ ಪುನಾರಂಭಗೊಂಡಿತು. ಆದರೆ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗಿ ಜಲಾಶಯದಲ್ಲಿ ನೀರು ಇಲ್ಲವಾಗಿದ್ದು, ಕಬ್ಬು ಬೆಳೆಗಾರರ ನಿರಾಸಕ್ತಿ, ಕಚ್ಚಾವಸ್ತು ಪೂರೈಕೆಯಲ್ಲಿನ ವ್ಯತ್ಯಾಸದಿಂದ 2002 ರಲ್ಲಿ ಕಾರ್ಖಾನೆ ಮತ್ತೆ ಸ್ಥಗಿತಗೊಂಡಿತು.  

‍‘ಸರ್ಕಾರ ಆರಂಭಿಸುತ್ತದೋ, ಖಾಸಗಿಯವರಿಗೆ ಕೊಡುತ್ತಾರೋ ಗೊತ್ತಿಲ್ಲ. ರೈತರ ಹಿತ ರಕ್ಷಿಸುವ ಷರತ್ತುಗಳೊಂದಿಗೆ ಖಾಸಗಿಯವರಿಗೆ ಕೊಟ್ಟರೆ ತಪ್ಪಿಲ್ಲ’ ಎಂದು ರೈತಸಂಘದ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಹೇಳಿದರು.

ಕಾರ್ಖಾನೆ ಕಾರ್ಯಾಚರಣೆ ನಿಲ್ಲಿಸಿ ಹಲವು ವರ್ಷಗಳಾಗಿವೆ. ಯಂತ್ರೋಪಕರಣಗಳ ಸ್ಥಿತಿ ಪರಿಶೀಲಿಸಬೇಕು. ಕಬ್ಬಿನ ಲಭ್ಯತೆಯ ಆಧಾರದ ಮೇಲೆ ಮುಂದಿನ ಕ್ರಮ ವಹಿಸಲಾಗುವುದು
ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.